More

    ಬಡತನದಿಂದ ಮುಕ್ತಗೊಳಿಸುವುದೇ ಮಾನವೀಯ ಧರ್ಮ

    ಬೆಳ್ತಂಗಡಿ: ಬಡ ಕುಟುಂಬಗಳನ್ನು ಬಡತನದಿಂದ ಮುಕ್ತಗೊಳಿಸುವುದೇ ಮಾನವೀಯ ಧರ್ಮ. ಕಠಿಣ ಆರೋಗ್ಯ ಸಮಸ್ಯೆಗೆ ಒಳಪಟ್ಟವರ, ಒಂಟಿಯಾಗಿರುವವರ, ವಯೋವೃದ್ಧರ, ಅಂಗವಿಕಲರ ಸಹಾಯಕ್ಕೆ ನಿಲ್ಲುವ ಕಾರ್ಯಕ್ರಮವೇ ವಾತ್ಸಲ್ಯ ಯೋಜನೆ ಎಂದು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ ಹೇಳಿದರು.

    ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 73ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ವಿತರಣೆಯಾಗುವ ವಾತ್ಸಲ್ಯ ಕಾರ್ಯಕ್ರಮದ 7300 ಕಿಟ್ ಸಾಗಿಸುವ ಟ್ರಕ್‌ಗಳಿಗೆ ಬುಧವಾರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು.
    ಗ್ರಾಮಾಭಿವೃದ್ಧಿ ಯೋಜನೆ ಸ್ವತಂತ್ರವಾಗಿ ದುಡಿದು ಜೀವನ ಸಾಗಿಸಲು ಸಾವಿರಾರು ಕುಟುಂಬಗಳಿಗೆ ದಾರಿ ತೋರಿಸಿದೆ. 30 ವರ್ಷ ಹಿಂದೆಯೇ ಯೋಜನೆ ಮೂಲಕ ಮನೆಗೆ ಅಗತ್ಯ ವಸ್ತುಗಳನ್ನು ನೀಡಿದ್ದು, ಇಂದಿಗೂ ನೆನಪಿನಲ್ಲಿದೆ. ಅಂಗವಿಕಲರ ಸಹಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬೆಳಕು ಕಾಣಿಸಬೇಕೆಂಬ ಚಿಂತನೆಯಿಂದ ಈ ಕಾರ್ಯಕ್ರಮ ಮಾಡಿದ್ದು, ಯೋಜನೆಯ ಮೂಲಕ ಸರ್ಕಾರದ ಸೌಲಭ್ಯವನ್ನು ಕುಟುಂಬಗಳಿಗೆ ನೀಡುವ ಕಾರ್ಯ ಕೂಡ ಮಾಡುತ್ತಿದೆ ಎಂದರು.

    ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್ ಮಂಜುನಾಥ್ ಮಾತನಾಡಿ, ಯೋಜನೆ ಮೂಲಕ ಸಮಾಜದ ಅತಿ ದುರ್ಬಲ ಮತ್ತು ಅಸಹಾಯಕ ಸ್ಥಿತಿಯಲ್ಲಿರುವ ರಾಜ್ಯದ 10,461 ಜನರಿಗೆ ಮಾಸಿಕ ಆರ್ಥಿಕ ನೆರವನ್ನು 30 ವರ್ಷಗಳಿಂದ ನೀಡುತ್ತಿದ್ದೇವೆ. ಕರೊನಾ ಸಂದರ್ಭ ಇಡೀ ರಾಜ್ಯವೇ ಬಂದ್‌ನಲ್ಲಿದ್ದರೂ ಸಂಕಷ್ಟದಲ್ಲಿದ್ದವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಯೋಜನೆ ಕಾರ್ಯಕರ್ತರು ಮನೆ ಮನೆಗೆ ಈ ಸೌಲಭ್ಯ ನೀಡಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಈಗ ಹೇಮಾವತಿ ವಿ.ಹೆಗ್ಗಡೆಯವರ ಪರಿಕಲ್ಪನೆಯಂತೆ ವಾತ್ಸಲ್ಯ ಯೋಜನೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ವಸ್ತುಗಳನ್ನು 7300 ಕುಟುಂಬಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ.ರಾಮಸ್ವಾಮಿ ಮಾತನಾಡಿದರು. ಉಜಿರೆ ಶ್ರೀ ಧ.ಮಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟಿ ಡಾ.ಬಿ.ಯಶೋವರ್ಮ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.
    ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ನಿರ್ದೇಶಕ ವಿವೇಕ್ ವಿ. ಪಾಸ್ ವಂದಿಸಿದರು. ಧ.ಗ್ರಾ. ಯೋಜನೆ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ ನಿರ್ದೇಶಕಿ ಮಮತಾ ರಾವ್ ಕಾರ್ಯಕ್ರಮ ನಿರೂಪಿಸಿದರು.

    ಅಬಲರನ್ನು ಗೌರವಿಸುವುದು ಕರ್ತವ್ಯ: ಶಾಪಕ್ಕೆ ಒಳಗಾಗುವುದು ಎಂದರೆ ಬಾಯಿ ಮಾತಿನದ್ದು ಮಾತ್ರ ಅಲ್ಲ. ಮನೆಯಲ್ಲಿ ಹಿರಿಯರನ್ನು, ವೃದ್ಧರನ್ನು ಸರಿಯಾಗಿ ನೋಡಿಕೊಳ್ಳದಿದ್ದಾಗ, ಅವರು ಮೌನವಾಗಿ ಕಣ್ಣೀರು ಸುರಿಸಿದರೆ ಅದು ಕೂಡ ಶಾಪವಾಗಬಹುದು. ಆದ್ದರಿಂದ ಹಿರಿಯರನ್ನು, ವೃದ್ಧರನ್ನು, ಅಂಗವಿಕಲರನ್ನು ಗೌರವಿಸುವ ಸಂಪ್ರದಾಯ ಪ್ರತಿ ಮನೆಯಲ್ಲೂ ಬೆಳೆಯಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದರು.
    ಅನಾಥರಾಗಿ ನಿಜವಾದ ಕಷ್ಟದಲ್ಲಿರುವವರನ್ನು ಗುರುತಿಸಿ ಸಹಾಯ ಮಾಡಲು ವಾತ್ಸಲ್ಯ ಯೋಜನೆಯನ್ನು ಹೇಮಾವತಿ ವಿ.ಹೆಗ್ಗಡೆಯವರ ಚಿಂತನೆಯಂತೆ ಪ್ರಾರಂಭಿಸಲಾಗಿದೆ. ಬಡವರ ಕುರಿತು ಸರ್ವೇ ನಡೆಸಲಾಗಿದ್ದು, ಇದರ ವರದಿ ಕಣ್ಣೀರು ತರಿಸುತ್ತದೆ. ಇಂತಹ ಕುಟುಂಬಗಳಿಗೆ ಹಣ ನೀಡಿದರೆ ಸಾಲದು; ಅವರಿಗೆ ಆಹಾರ, ಮನೆ, ಬಟ್ಟೆ, ಅಡುಗೆ ಮಾಡಬೇಕಾದ ಅಗತ್ಯ ವಸ್ತುಗಳನ್ನು ನೀಡಿದರಷ್ಟೇ ಯೋಜನೆಯ ಫಲ ಸಿಗಬಹುದೆಂದು ಕಿಟ್ ನೀಡಲಾಗುತ್ತಿದೆ ಎಂದರು.

    ಹುಟ್ಟುಹಬ್ಬ ಸರಳ ಆಚರಣೆ: ಶ್ರೀ ಮಂಜುನಾಥ ಸ್ವಾಮಿ ಹಾಗೂ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 73ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ದ.ಕ. ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ಸಾಮ್ರಾಜ್ಯ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಬೈಂದೂರು, ಧ.ಗ್ರಾ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಸಿರಿ ಗ್ರಾಮೋದ್ಯೋಗ ಸಂಸ್ಥೆ ಎಂ.ಡಿ. ಕೆ.ಎನ್.ಜನಾರ್ದನ್, ಉಜಿರೆ ರುಡ್‌ಸೆಟ್ ಕಾರ್ಯನಿರ್ವಹಣಾಧಿಕಾರಿ ಜನಾರ್ದನ್, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ.ರಾಮಸ್ವಾಮಿ, ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರು, ಯೋಜನಾಧಿಕಾರಿಗಳು, ದೇವಳ ಸಿಬ್ಬಂದಿ, ಅಭಿಮಾನಿಗಳು, ಊರವರು ಶುಭ ಹಾರೈಸಿದರು.

    ಧರ್ಮಸ್ಥಳ ಲಕ್ಷದೀಪೋತ್ಸವ ಸರಳ ಆಚರಣೆ
    ಕರೊನಾ ಹಿನ್ನೆಲೆಯಲ್ಲಿ ಲಕ್ಷದೀಪೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
    ಕರೊನಾ ಮಹಾಮಾರಿಯಿಂದ ಶೀಘ್ರ ದೂರವಾಗಲಿ ಎಂಬುದು ಆಶಯ. ಜನರು ಮನೆಯಲ್ಲೇ ಕುಳಿತು ಮಾಧ್ಯಮದ ಮೂಲಕ ಲಕ್ಷದೀಪೋತ್ಸವ ವೀಕ್ಷಿಸಬೇಕು ಎಂಬುದು ಚಿಂತನೆ. ನಿರಂತರ ನಡೆಯುವ ಸಾಹಿತ್ಯ ಸಮ್ಮೇಳನ, ಸರ್ವಧರ್ಮ ಸಮ್ಮೇಳನ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ಮೂಲಕ ಈ ಬಾರಿ ಸರಳ ರೀತಿಯಲ್ಲಿ ಲಕ್ಷದೀಪೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿದರು.
    ಧರ್ಮಸ್ಥಳ ಮೇಳ ಒಂದು ತಿಂಗಳ ಕಾಲ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಯಕ್ಷಗಾನ ಪ್ರದರ್ಶನ ನಡೆಸುತ್ತಿದ್ದು, ಒಂದು ದಿನದ ಯಕ್ಷಗಾನವನ್ನು ಯೂಟ್ಯೂಬ್ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದರೆ ಯಕ್ಷಗಾನ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಅರ್ಥ. ಜನ ಒಟ್ಟು ಸೇರುವುದಕ್ಕಿಂತ ಈ ರೀತಿ ವೀಕ್ಷಿಸುವುದೇ ಉತ್ತಮ. ಅದೇ ರೀತಿ ಲಕ್ಷದೀಪೋತ್ಸವ ಕಾರ್ಯಕ್ರಮಗಳನ್ನು ಮನೆಯಲ್ಲೇ ವೀಕ್ಷಿಸಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts