More

    ಅದೃಷ್ಟದ ಕ್ಷೇತ್ರದಲ್ಲಿ ಮತ್ತೆ ಸಿದ್ದು ಸ್ಪರ್ಧೆ

    ಮೈಸೂರು: ವರುಣ ವಿಧಾನಸಭಾ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅದೃಷ್ಟದ ಕ್ಷೇತ್ರ ಎಂದೇ ಖ್ಯಾತಿಯಾಗಿದೆ. ಜಿಲ್ಲೆಯ ಮೂರು ತಾಲೂಕುಗಳ ಅನೇಕ ಗ್ರಾಮಗಳನ್ನು ಒಳಗೊಂಡಂತೆ ರಚಿಸಿರುವ ವರುಣ ವಿಧಾನಸಭಾ ಕ್ಷೇತ್ರ ಈವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕ್ಷೇತ್ರ ರಚನೆಗೊಂಡ ನಂತರದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದಿರುವುದೇ ಇದಕ್ಕೆ ನಿದರ್ಶನವಾಗಿದೆ.


    ಮೈಸೂರು, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಹಲವು ಗ್ರಾಮಗಳನ್ನು ಒಳಗೊಂಡು 2008ರಲ್ಲಿ ಜನ್ಮ ತಾಳಿದ ವರುಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಗೆದ್ದಿದ್ದಾರೆ. ಈಗ ಮತ್ತೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಕ್ಷೇತ್ರದ ಶಾಸಕರಾಗಿದ್ದಾರೆ.

    ಮೈಸೂರು ತಾಲೂಕಿನ ವರುಣ ಹೋಬಳಿ, ನಂಜನಗೂಡು ತಾಲೂಕಿನ ಚಿಕ್ಕಯ್ಯನಛತ್ರ ಮತ್ತು ಬಿಳಿಗೆರೆ ಹೋಬಳಿ, ದೊಡ್ಡಕವಲಂದೆ ಹೋಬಳಿಯ ವರಹಳ್ಳಿ, ಕಕ್ಕರಹಟ್ಟಿ, ಬಾಣೂರು, ಹಾಡ್ಯ, ಕಾರೇಪುರ, ಕಾರ್ಯ, ಚುಂಚನಹಳ್ಳಿ, ಕೋಣನೂರು, ಕೊಣನಾಪುರ, ಪಡುವಲಮರಹಳ್ಳಿ, ಪಡುವಲ ಅಗ್ರಹಾರ, ರಾಮಶೆಟ್ಟಿಪುರ, ಹನುಮನಪುರ, ದಾಸನೂರು, ದೊಡ್ಡಹೊಮ್ಮ, ಚಿಕ್ಕಹೊಮ್ಮ, ತೊರವಳ್ಳಿ ಮತ್ತು ತಿ.ನರಸಿಪುರ ತಾಲೂಕಿನ ಕಸಬಾ ಹೋಬಳಿಯನ್ನು ಕ್ಷೇತ್ರ ಒಳಗೊಂಡಿದೆ.
    ಕ್ಷೇತ್ರ ರಚನೆಗೊಂಡ 2008ರ ಮೊದಲ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 71,908 ಪಡೆದು ಜಯ ಗಳಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ರೇವಣಸಿದ್ದಯ್ಯ 53,071 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು. ಉಳಿದಂತೆ ಬಿಎಸ್ಪಿ ಪಿ.ಗುರುಪಾದಸ್ವಾಮಿ 5426, ಜೆಡಿಎಸ್‌ನ ಎಚ್.ವಿ.ಕೃಷ್ಣಸ್ವಾಮಿ 4,133, ಎಸ್‌ಪಿಯ ಕೆ.ಚಲುವಪ್ಪ 1,583 ಮತ ಪಡೆದಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ 84,385 ಪಡೆದು ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಕೆಜೆಪಿ ಅಭ್ಯರ್ಥಿಯಾಗಿದ್ದ ಕಾ.ಪು.ಸಿದ್ದಲಿಂಗಸ್ವಾಮಿ 54,744 ಮತ ಪಡೆದು ಹೋರಾಟ ನೀಡಿದ್ದರು. ಜೆಡಿಎಸ್‌ನ ಚೆಲುವರಾಜು 2,686, ಬಿಎಸ್ಪಿಯ ಶಿವಮಹದೇವ 2,419, ಬಿಜೆಪಿಯ ಎಸ್.ಡಿ.ಮಹೇಂದ್ರ 1,070 ಮತ ಪಡೆದಿದ್ದರು.
    2018 ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಯತೀಂದ್ರ 96,435 ಮತ ಪಡೆದು ದೊಡ್ಡ ಅಂತರದಿಂದಲೇ ಗೆಲುವು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು 37,819 ಹಾಗೂ ಜೆಡಿಎಸ್ ಅಭ್ಯರ್ಥಿ ಅಭಿಷೇಕ್ 28,123 ಮತ ಪಡೆದಿದ್ದರು.

    ಮಹಿಳಾ ಮತದಾರರೇ ಹೆಚ್ಚು

    ಮಾರ್ಚ್ 29ರ ವರೆಗಿನ ಮತದಾರರ ಪಟ್ಟಿಯ ನೋಂದಣಿ ಪ್ರಕಾರ ಮಹಿಳಾ ಮತದಾರರು ಹೆಚ್ಚಿರುವುದು ಈ ಕ್ಷೇತ್ರದ ವಿಶೇಷವಾಗಿದೆ. ಕ್ಷೇತ್ರದಲ್ಲಿ 2,31,730 ಮತದಾರರಿದ್ದಾರೆ. ಈ ಪೈಕಿ 1,15,907 ಮಹಿಳೆಯರು ಹಾಗೂ 1,15,811 ಪುರುಷ ಮತದಾರರಿದ್ದಾರೆ. 12 ಇತರ, 80 ವರ್ಷ ಮೇಲ್ಪಟ್ಟ 7,615, 4,245 ಯುವ ಮತದಾರರಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ 261 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಕ್ಷೇತ್ರದಲ್ಲಿ ಜಾತೀವಾರು ಲೆಕ್ಕದಲ್ಲಿ ಲಿಂಗಾಯತರು ಮತ್ತು ದಲಿತರು ಮೊದಲ ಸ್ಥಾನದಲ್ಲಿದ್ದಾರೆ. ನಂತರ ಕುರುಬ ಸಮುದಾಯ, ನಾಯಕರು, ಒಕ್ಕಲಿಗರು, ಉಪ್ಪಾರರು, ಮುಸ್ಲಿಂ ಸಮುದಾಯದ ಮತಗಳು ಇವೆ.
    ಅಭಿಷೇಕ್ ಮತ್ತೆ ಜೆಡಿಎಸ್ ಅಭ್ಯರ್ಥಿ:
    ಜೆಡಿಎಸ್‌ನಿಂದ 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ನಿವೃತ್ತ ಪ್ರಾಧ್ಯಾಪಕ ಬೊಕ್ಕಳ್ಳಿ ಪುಟ್ಟಸುಬ್ಬಪ್ಪ ಅವರ ಪುತ್ರ ಅಭಿಷೇಕ್ ಅವರಿಗೆ ಪಕ್ಷ ಟಿಕೆಟ್ ಘೋಷಣೆ ಮಾಡಿದೆ. ಅವರು ಕಳೆದ ಚುನಾವಣೆಯಲ್ಲಿ 28,123 ಮತ ಪಡೆದು ಗಮನ ಸೆಳೆದಿದ್ದರು.

    ಸಿದ್ದುಗೆ ಅದೃಷ್ಟದ ಕ್ಷೇತ್ರ


    ವರುಣ ವಿಧಾನಸಭಾ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅದೃಷ್ಟದ ಕ್ಷೇತ್ರ ಎಂದೇ ಖ್ಯಾತಿಯಾಗಿದೆ. 2008ರಲ್ಲಿ ಮೊದಲ ಬಾರಿಗೆ ಗೆದ್ದಾಗ ವಿರೋಧ ಪಕ್ಷದ ನಾಯಕರಾದರೆ, 2013ರಲ್ಲಿ ಎರಡನೇ ಬಾರಿ ಜಯಗಳಿಸಿ ಮುಖ್ಯಮಂತ್ರಿಯಾಗಿದ್ದರು. ಈ ಕಾರಣಕ್ಕೆ ಇದು ಅವರ ಅದೃಷ್ಟದ ಕ್ಷೇತ್ರವಾಗಿದೆ. ಅಲ್ಲದೇ, ಹುಟ್ಟೂರು ಸಿದ್ಧರಾಮನಹುಂಡಿ ಕೂಡ ಇದೇ ಕ್ಷೇತ್ರಕ್ಕೆ ಸೇರಿರುವುದು ವಿಶೇಷ.
    ಮತ್ತೆ ವರುಣದಿಂದಲೇ ಸ್ಪರ್ಧೆ: ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಲ್ಲಿ ವರುಣದಿಂದಲೇ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದ ಸಿದ್ದರಾಮಯ್ಯ ಅವರಿಗೆ ಅಂತಿಮವಾಗಿ ತಮ್ಮ ಅದೃಷ್ಟದ ವರುಣ ಕ್ಷೇತ್ರದಿಂದ ಕಣಕ್ಕಿಳಿಯಲು ಕಾಂಗ್ರೆಸ್ ಟಿಕೆಟ್ ನೀಡಿದೆ.
    ಮಗನಿಗಾಗಿ ಸಿದ್ದರಾಮಯ್ಯ ಅವರು ಕಳೆದ ಚುನಾವಣೆಯಲ್ಲಿ ವರುಣ ಕ್ಷೇತ್ರ ಬಿಟ್ಟುಕೊಟ್ಟಿದ್ದರೆ, ಈ ಬಾರಿ ಅಪ್ಪನಿಗಾಗಿ ಡಾ.ಯತೀಂದ್ರ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮಗ ಡಾ.ಯತೀಂದ್ರ ಅವರನ್ನು ರಾಜಕೀಯಕ್ಕೆ ಕರೆತಂದು ಸುರಕ್ಷಿತ ಕ್ಷೇತ್ರವಾಗಿದ್ದ ವರುಣದಿಂದ ಕಣಕ್ಕಿಳಿಸಿ ಗೆಲ್ಲುವಂತೆ ಮಾಡಿದ್ದರು. ಆದರೆ ಮಗನಿಗೆ ಕ್ಷೇತ್ರ ತ್ಯಾಗ ಮಾಡಿ ತಮ್ಮ ರಾಜಕೀಯ ಮರುಜನ್ಮ ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.


    ಕ್ಷೀಣಿಸಿದ ವಿಜಯೇಂದ್ರ ಆಗಮನ

    ಈ ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ವರುಣ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಜೋರಾಗಿತ್ತು. ಆದರೆ, ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಹೇಳುವ ಮೂಲಕ ವರುಣದಿಂದ ಸ್ಪರ್ಧಿಸುವ ಸಾಧ್ಯತೆಗಳ ಚರ್ಚೆಯನ್ನು ಕ್ಷೀಣವಾಗಿಸಿದ್ದಾರೆ.
    2018ರ ಚುನಾವಣೆಯಲ್ಲಿ ವರುಣದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡಲು ಚಿಂತಿಸಿದ್ದರು. ಅಂತೆಯೇ, ಅಂದು ನಾಯಕತ್ವ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಮೂರು ಭಾಗವಾಗಿದ್ದ ಬಿಜೆಪಿಯನ್ನು ಒಗ್ಗೂಡಿಸಿದ್ದರು. ಕ್ಷೇತ್ರದಾದ್ಯಂತ ತಿರುಗಾಡಿ ಮುಖಂಡರು, ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಅವರು, ಅಸಮಾಧಾನ ಮತ್ತು ಗೊಂದಲಗಳನ್ನು ದೂರ ಮಾಡಿ ಪಕ್ಷವನ್ನು ಒಗ್ಗೂಡಿಸಿದ್ದರು. ಆದರೆ, ಬಿಜೆಪಿ ವರಿಷ್ಠರು ಅಂತಿಮ ಘಳಿಗೆಯಲ್ಲಿ ತೋಟದಪ್ಪ ಬಸವರಾಜು ಅವರಿಗೆ ಟಿಕೆಟ್ ನೀಡಿತ್ತು.
    ಈಗಲೂ ಇಲ್ಲಿನ ಮುಖಂಡರ ಸಂಪರ್ಕದಲ್ಲಿ ವಿಜಯೇಂದ್ರ ಇದ್ದಾರೆ. ಕ್ಷೇತ್ರದ ಸಂಪೂರ್ಣ ನಾಡಿಮಿಡಿತ, ಮತದಾರರು, ಗ್ರಾಮಗಳ ಬಗ್ಗೆ ಬಲ್ಲವರಾಗಿದ್ದಾರೆ. ಉಳಿದಂತೆ 2013ರಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಯಡಿಯೂರಪ್ಪ ಆಪ್ತ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಈ ಬಾರಿಯೂ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಬಿ.ವೈ.ವಿಜಯೇಂದ್ರ ಆಪ್ತ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜಿಲ್ಲಾ ಗ್ರಾಮಾಂತರ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಆರ್‌ಎಸ್‌ಎಸ್ ಕಟ್ಟಾಳು ಪ್ರತಾಪ್ ಜಿ.ದೇವನೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಎನ್.ಸದಾನಂದ, ಮಲ್ಲರಾಜಯ್ಯನಹುಂಡಿ ಗುರುಸ್ವಾಮಿ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟಬುದ್ದಿ ಅವರ ಪುತ್ರ ಶರತ್ ಪುಟ್ಟಬುದ್ದಿ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    (ವರದಿ: ಅವಿನಾಶ್ ಜೈನಹಳ್ಳಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts