More

    ನಿರಂತರ ನಿರ್ವಿಷ ತರಕಾರಿ: ತರಕಾರಿ ಕೃಷಿಗೆ ವರ್ಮುಡಿ ಕಾಲ್ಯೆಂಡರ್

    ಹಿಂದೆಲ್ಲ ಮನೆಯಂಗಳದಲ್ಲೇ ಮನೆಗೆ ಸಾಕಾಗಿ, ಅಕ್ಕಪಕ್ಕದವರಿಗೆ ಹಂಚುವಷ್ಟು ತರಕಾರಿ ಬೆಳೆದುಕೊಳ್ಳುತ್ತಿದ್ದರು. ಬೇಕೆಂದಾಗಲೆಲ್ಲ ತಾಜಾ ತರಕಾರಿ ಸಿದ್ಧವಿರುತ್ತಿತ್ತು. ಮನೆಗೆ ಬಂದ ನೆಂಟರಿಷ್ಟರಿಗೆ ಚೀಲಗಳಲ್ಲಿ ತುಂಬಿ ಕಳಿಸುತ್ತಿದ್ದರು. ಆದರೆ ಆಧುನಿಕತೆಗೆ ಮನುಷ್ಯ ತೆರೆದುಕೊಂಡಂತೆ ಎಲ್ಲದಕ್ಕೂ ಮಾರುಕಟ್ಟೆಗಳ ಮೇಲೆ ಅವಲಂಬನೆ ಆಗುವಂತಾಗಿದೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಇಂದಿಗೂ ಹಳೇ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬಂದಿರುತ್ತಿದ್ದಾರೆ. ಅಂತಹವರಲ್ಲಿ ಶಿವಪ್ರಸಾದ್ ವರ್ಮುಡಿ ಕೂಡ ಒಬ್ಬರು. ಇವರು ಪಕ್ಕಾ ಲೆಕ್ಕಾಚಾರ ಹಾಕಿ ಮನೆಯಂಗಳಲ್ಲಿ ತರಕಾರಿ ಬೆಳೆಯುತ್ತಿದ್ದು, ಕೃಷಿಗೆ ಕ್ಯಾಲೆಂಡರ್ ಅಳವಡಿಸಿಕೊಂಡಿರುವುದು ವಿಶೇಷ.

    | ಪಂಚಮಿ ಬಾಕಿಲಪದವು

    ಹಸಿರು ಕ್ರಾಂತಿ ಬಳಿಕ ಅಧಿಕ ಲಾಭದ ಆಸೆಗೆ ಒಳಗಾಗಿ ಕೃಷಿ ಸಂಪೂರ್ಣ ರಾಸಾಯನಿಕಗಳ ಮೇಲೆಯೇ ಅವಲಂಬಿತವಾಗಿದ್ದು, ರಾಸಾಯನಿಕಗಳಿಲ್ಲದೇ ಕೃಷಿ ಇಲ್ಲವೇ ಇಲ್ಲ ಎಂಬ ವಾತಾವರಣ ನಿರ್ವಣವಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡುತ್ತಿದ್ದು, ಸಾವಯವದತ್ತ ಒಲವು ತೋರುತ್ತಿದ್ದಾರೆ. ಕಾಸರಗೋಡಿನ ಪೆರ್ಲ ಸಮೀಪದ ಶಿವಪ್ರಸಾದ್ ವಮುಡಿ, ‘ನಿರಂತರ ನಿರ್ವಿಷ ತರಕಾರಿ’ ಎಂಬ ಧ್ಯೇಯವನ್ನಿಟ್ಟು 32 ವರ್ಷಗಳಿಂದ ಹಿತ್ತಲಲ್ಲಿ ವಿಧವಿಧವಾದ ತರಕಾರಿ ಬೆಳೆಯುತ್ತಿದ್ದಾರೆ. ವಿಶೇಷವೆಂದರೆ ಇವರು ಕೃಷಿಗೆ ತಮ್ಮದೇ ಆದ ಕ್ಯಾಲೆಂಡರ್ ರೂಪಿಸಿಕೊಂಡಿದ್ದು, ವೈಜ್ಞಾನಿಕ ರೀತಿಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ ಹೀಗೆ ಪ್ರಮುಖ ಬೆಳೆಗಳ ನಡುವೆ ಮೂವತ್ತು ಸೆಂಟ್ಸ್ ಭೂಮಿಯನ್ನು ತರಕಾರಿ ಬೆಳೆಗೆ ಮೀಸಲಿಟ್ಟಿದ್ದಾರೆ.

    ಹೇಗಿದೆ ಕಾಲ್ಯೆಂಡರ್: ತರಕಾರಿ ಬೆಳೆ ಸಮೃದ್ಧವಾಗಿ ದೊರೆಯಬೇಕೆಂದರೆ ಪೋಷಣೆ ಮಾತ್ರವಲ್ಲ; ಬೀಜ ಬಿತ್ತುವ ಸಮಯವೂ ಮುಖ್ಯವಾಗುತ್ತದೆ. ವಮುಡಿ ಅವರು ಸಪ್ತಮಿ, ಅಷ್ಟಮಿ, ನವಮಿ ಈ ರೀತಿ ‘ಮಿ’ಯಿಂದ ಕೊನೆಗೊಳ್ಳುವ ತಿಥಿಯ ದಿನ ಬೀಜ ಬಿತ್ತಬಾರದು. ಅಮಾವಾಸ್ಯೆಯ ಹಿಂದು ಮುಂದಾಗಿ ಶನಿವಾರ ಅಥವಾ ಬುಧವಾರ ಬೀಜ ಬಿತ್ತನೆಗೆ ಸೂಕ್ತವಾಗಿದೆ. ಇದರ ಹಿಂದೆ ಅಡಗಿರುವ ವೈಜ್ಞಾನಿಕ ಕಾರಣ ತಿಳಿದಿಲ್ಲವಾದರೂ ಇದನ್ನು ಮೀರಿ ಬೀಜ ಬಿತ್ತಿದರೆ ಬೆಳೆಯಲ್ಲಿ ಹಿನ್ನಡೆ ಖಚಿತ ಎಬುದನ್ನು ಕಂಡುಕೊಂಡಿದ್ದಾರೆ. ಮೇ ಕೊನೆಯಲ್ಲಿ ಬೆಂಡೆ ಬೀಜ ಬಿತ್ತಬೇಕು. ಮಳೆಗಾಲ ಆರಂಭವಾದ ತಕ್ಷಣ ಬೇಸಿಗೆಯ ಬದನೆ ಗಿಡಗಳ ಗೆಲ್ಲು ಕತ್ತರಿಸಿ, ಗೊಬ್ಬರ ನೀಡಿದರೆ, ಉತ್ತಮ ಬೆಳೆ ದೊರೆಯುತ್ತದೆ. ಜೂನ್ ಕೊನೇ ವಾರ ಅಥವಾ ಜುಲೈ ಮೊದಲನೇ ವಾರ ಬರುವ ಅಮಾವಾಸ್ಯೆ ದಿನ ಮುಳ್ಳು ಸೌತೆಯ ಬೀಜ ಬಿತ್ತುವುದು. ಆಟಿ ಅಮವಾಸ್ಯೆಯ ಹತ್ತಿರ ಸೌತೆ, ಕುಂಬಳ, ಚೀನಿಕಾಯಿ ಬೀಜ ಬಿತ್ತುವುದು. ಆಗಸ್ಟ್ ಕೊನೆಗೆ ತೊಂಡೆ ಬಳ್ಳಿ ನೆಡುವುದು ಅಥವಾ ಕತ್ತರಿಸುವುದು. ಅಕ್ಟೋಬರ್ ಕೊನೇ ವಾರ ಬದನೆ ಗಿಡ ನೆಡುವುದು. ನವೆಂಬರ್ ಕೊನೆಯ ವಾರ ಬೆಂಡೆ ಬೀಜ ಬಿತ್ತುವುದು. ಡಿಸೆಂಬರ್ ಕೊನೆಯವಾರ ಅಲಸಂಡೆ, ಪಡುವಲ, ಹಾಗಲ, ದಾರಳೆ ಸಾಲು ಕಣಿ ಮಾಡಿದ ಬೀಜ ಬಿತ್ತುವುದು. ಫೆಬ್ರವರಿ 20 ರಿಂದ ಮಾ.30ರೊಳಗೆ ಕುಂಬಳ, ಸೋರೆ, ಚೀನಿ, ಬೆಂಡೆ ಬೀಜ ಬಿತ್ತುವುದು. ಏಪ್ರಿಲ್ ಕೊನೆಯ ವಾರ ಮತ್ತು ಮೇ ಮೊದಲವಾರ ಅಲಸಂಡೆ, ಸೌತೆ, ಮುಳ್ಳುಸೌತೆ, ಬೆಂಡೆ ಬೀಜ ಬಿತ್ತುವುದು. ಏಪ್ರಿಲ್ ನಂತರ ಬರುವ ಅಮವಾಸ್ಯೆಯ ಹಿಂದೆ ಮುಂದಾಗಿ ಏರುಮುಡಿಯಲ್ಲಿ ತರಕಾರಿ ಬೀಜ ಬಿತ್ತಬೇಕು (ಸೋರೆ, ಪಡುವಲ, ದಾರಳೆ, ಹಾಗಲ, ಕುಂಬಳ) ಮಳೆ ನೀರಿನಲ್ಲೇ ಸ್ವಾಭಾವಿಕವಾಗಿ ಬೆಳೆಯಬೇಕು. ಈ ರೀತಿಯ ಕ್ಯಾಲೆಂಡರ್ ಒಂದನ್ನು ಹಲವು ವರ್ಷಗಳ ಅನುಭವದಿಂದ ಅವರೇ ತಯಾರಿಸಿದ್ದಾರೆ.

    ಇದನ್ನೂ ಓದಿ: ಸ್ಮಾರ್ಟ್​ ಟ್ರ್ಯಾಪ್​: ಪ್ರಶಾಂತ್ ಮಾಡಾಳ್​ಗೆ ದೂರುದಾರ ಬಲೆ ಹೆಣೆದಿದ್ದು ಹೇಗೆ?

    ವೆಚ್ಚ ಕಡಿತಕ್ಕೆ ಕಾಂಕ್ರಿಟ್ ಕಂಬ

    ಪ್ರತಿವರ್ಷವೂ ತರಕಾರಿಗೆ ಚಪ್ಪರ ಮಾಡಬೇಕಾದರೆ ಕೂಲಿ ವೆಚ್ಚ ತಗಲುತ್ತದೆ. ಜತೆಗೆ ಚಪ್ಪರ ಮುರಿದು ಬೀಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈ ಎರಡೂ ಸಮಸ್ಯೆಗಳನ್ನು ತಪ್ಪಿಸಲು ಶಿವಪ್ರಸಾದ್ ಸುಮಾರು ನಲವತ್ತು ಕಾಂಕ್ರೀಟ್ ಕಂಬಗಳನ್ನು ಶಾಶ್ವತವಾಗಿ ಮತ್ತು ವ್ಯವಸ್ಥಿತವಾಗಿ ಹಾಕಿಸಿಕೊಂಡಿದ್ದಾರೆ. ತರಕಾರಿ ಬಳ್ಳಿಗಳು ಹಬ್ಬಲು ಫಿಶ್​ನೆಟ್ ಹರವಿದ್ದಾರೆ. ಇದರಿಂದ ಸುಲಭವಾಗಿ ಬಳ್ಳಿ ಹಬ್ಬುತ್ತದೆ; ನಿರ್ವಹಣೆಯೂ ಸುಲಭವಾಗುತ್ತದೆ. ತರಕಾರಿಗಳಿಗೆ ತಮ್ಮ ಮನೆಯಲ್ಲಿ ಸಾಕುವ ದೇಶೀ ದನಗಳ ಸಗಣಿಯಿಂದ ತಯಾರಿಸಿದ ಗೊಬ್ಬರವನ್ನು ದಿನ ಬಿಟ್ಟು ದಿನ ಹಾಕುತ್ತಾರೆ. ತರಕಾರಿ ಬೆಳೆಯುವ ಖರ್ಚು ತರಕಾರಿಯಿಂದಲೇ ಸರಿದೂಗಿಸಲ್ಪಡಬೇಕು ಎಂಬ ಉದ್ದೇಶದಿಂದ ತೊಂಡೆಕಾಯಿಯನ್ನು ಮಾರಾಟದ ಉದ್ದೇಶದಿಂದ ಬೆಳೆಸುತ್ತಾರೆ. ಅಧಿಕ ಇಳುವರಿ ಬರುವ ಇನ್ನಿತರ ತರಕಾರಿಯನ್ನೂ ಮಾರಾಟ ಮಾಡುತ್ತಾರೆ.

    ಇಂದು ಮಾನವನು ಕೇವಲ ಹಣಕ್ಕಾಗಿ ಹಪಹಪಿಸುತ್ತಿದ್ದಾನೆ. ಆತ ನೆಮ್ಮದಿಯ ಸ್ವಾವಲಂಬಿ ಬದುಕಿನತ್ತ ತಲೆ ಹಾಕುವುದಿಲ್ಲ. ಹಾಗಾಗಿ ಒಂದು ಕಡೆಯಲ್ಲಿ ಸಂಪಾದಿಸಿದ ಸಂಪತ್ತು ಇನ್ನೊಂದು ಕಡೆಯಲ್ಲಿ ವೈದ್ಯನಿಗೆ ಎರಕಗೊಳ್ಳುತ್ತಿದೆ. ಇದನ್ನ ತಪ್ಪಿಸಲು ಪ್ರತಿಯೊಬ್ಬನೂ ಹಣ ಸಂಪಾದನೆಯ ಜತೆಗೆ ತಮ್ಮಿಂದಾದಷ್ಟು ತರಕಾರಿಯನ್ನು ಮನೆಯಂಗಳದಲ್ಲಿಯೋ, ಮನೆಯ ಮಾಳಿಗೆಯ ಮೇಲೆಯೋ ಬೆಳೆಸಬೇಕು. ಆವಾಗ ಮಾತ್ರ ಸದೃಢ ದೇಹ ಮತ್ತು ಸ್ವಾವಲಂಬಿ ಬದುಕನ್ನು ಹೊಂದಲು ಸಾಧ್ಯ.

    | ಶಿವಪ್ರಸಾದ್ ಕೃಷಿಕ

    ರಾಸಾಯನಿಕಕ್ಕಿಂತ ಭಿನ್ನ

    ಶುದ್ಧ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ತಿಂದರೆ ಅದು ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಉಂಟುಮಾಡುತ್ತದೆ. ಶಿವಪ್ರಸಾದ್ ಹಿತ್ತಲಲ್ಲಿ ಬೆಳೆದ ತರಕಾರಿಯನ್ನು ತಿಂದ ಹಲವು ಜನರಿಗೆ ಇದರ ಅನುಭವ ಆಗಿದೆ. ಸಾವಯವದಲ್ಲಿ ಬೆಳೆದ ತರಕಾರಿಗಳ ರುಚಿಯೇ ಭಿನ್ನವಾದದ್ದು. ಬಾಯಿಯಲ್ಲಿಡುವಾಗಲೇ ನಾಲಗೆ ಆ ರುಚಿಯನ್ನು ಗ್ರಹಿಸುತ್ತದೆ. ಶಿವಪ್ರಸಾದ್ ಅವರು ಬೆಳೆದ ತರಕಾರಿಗಳನ್ನು ತಿನ್ನಲು ಶುರು ಮಾಡಿದ ಮೇಲೆ ನಮ್ಮ ಮನೆಯಲ್ಲಿಯೂ ಮಾತ್ರೆ ಮದ್ದುಗಳ ಅಗತ್ಯ ಬರಲಿಲ್ಲ ಎಂದು ಶಿವಪ್ರಸಾದ್ ಹಿತ್ತಲಿನ ತರಕಾರಿಯನ್ನು ನಿತ್ಯ ಬಳಕೆ ಮಾಡುವವರು ಅಭಿಪ್ರಾಯ ಪಡುತ್ತಾರೆ. ಹಾಗೆಯೇ, ಶಿವಪ್ರಸಾದ ಅವರ ತರಕಾರಿ ಬೆಳೆಯ ಯಶಸ್ಸನ್ನು ನೋಡಿ ಅದೆಷ್ಟೋ ಮಂದಿ ತರಕಾರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಹೊತ್ತಿ ಉರಿಯುತ್ತಿವೆ ರಾಜ್ಯದಲ್ಲಿನ ಕಾಡುಗಳು; ಮತ್ತೆ ಮತ್ತೆ ಕಾಡ್ಗಿಚ್ಚು, ಧಗಧಗಿಸುವ ಬೆಂಕಿ ನಂದಿಸಲು ಹರಸಾಹಸ

    ಕೀಟಗಳ ನಿಯಂತ್ರಣ

    ಬೆಳೆಗಳಿಗೆ ಕಾಡುವ ಕೀಟಬಾಧೆ ನಿಯಂತ್ರಣಕ್ಕೂ ಶಿವಪ್ರಸಾದ್ ಉಪಾಯ ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್ ಬಾಟಲನ್ನು ಅರ್ಧದಿಂದ ತುಂಡರಿಸಿ, ತುಳಸಿಯನ್ನು ರುಬ್ಬಿ, ಆ ಮಿಶ್ರಣವನ್ನು ಬಾಟಲಲ್ಲಿ ಹಾಕಿ ತರಕಾರಿ ತೋಟದಲ್ಲಿರುವ ಕಂಬಗಳಿಗೆ ಕಟ್ಟಿ ಇಡಬೇಕು. ಇದರಿಂದಾಗಿ ತರಕಾರಿ ತಿನ್ನಲು ಬರುವ ಕೀಟಗಳೆಲ್ಲ ಬಾಟಲಿನ ಮಿಶ್ರಣಕ್ಕೆ ಬಂದು ಬೀಳುತ್ತವೆ ಮತ್ತು ಅಲ್ಲಿ ಅವುಗಳು ನಿರ್ಜೀವವಾಗುತ್ತವೆ. ದಿನಂಪತ್ರಿ ಈ ಮಿಶ್ರಣದ ಬಾಟಲ್ ಬದಲಾಯಿಸಿ, ಹೊಸ ಮಿಶ್ರಣವನ್ನು ತೋಟದಲ್ಲಿ ಇಟ್ಟಾಗ, ತರಕಾರಿಗಳನ್ನು ಕೀಟಗಳ ಹಾವಳಿಗಳಿಂದ ರಕ್ಷಿಸಬಹುದು. ಮತ್ತೆ, ಮುಸ್ಸಂಜೆಯ ಹೊತ್ತಿನಲ್ಲಿ ಸೊಳ್ಳೆ ಬಾಟನ್ನು ತರಕಾರಿ ಸಾಲಿನ ಸುತ್ತ ಹಿಡಿದುಕೊಂಡು ಹೋಗುವುದರಿಂದ ಕೀಟಗಳನ್ನು ನಾಶ ಮಾಡಬಹುದು. ತರಕಾರಿ ಸಾಲುಗಳಿಗೆ ಕೆಂಪಿರುವೆಯನ್ನು ಬಿಡುವುದರಿಂದ ಕ್ರಿಮಿಕೀಟಗಳ ಹಾವಳಿ ವಿರಳವಾಗುತ್ತದೆ ಎಂಬುದನ್ನೆಲ್ಲ ಪ್ರತ್ಯಕ್ಷವಾಗಿ ಪ್ರಯೋಗಿಸಿ ಯಶಸ್ಸನ್ನು ಕಂಡಿದ್ದಾರೆ. ತರಕಾರಿ ತೋಟದ ಸುತ್ತ ಪೇರಳೆ, ಮಾವು ಹಾಗೂ ಇನ್ನಿತರ ಹಣ್ಣಿನ ಗಿಡಗಳನ್ನು ಬೆಳೆಸುವುದರಿಂದ ಪಕ್ಷಿಗಳು ಹಾಗೂ ಮಂಗಗಳು ಅವುಗಳನ್ನೇ ತಿನ್ನುತ್ತವೆ ಹೊರತು ತರಕಾರಿಯನ್ನು ತಿನ್ನುವುದಿಲ್ಲ ಎಂದು ಅನುಭವ ಹಂಚಿಕೊಂಡಿದ್ದಾರೆ.

    ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ

    ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ; ತರಕಾರಿ, ಹಾಲು, ನೀರೂ ತೆಗೆದುಕೊಳ್ಳುವಂತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts