More

    ಮತದಾನ ಹೆಚ್ಚಳಕ್ಕೆ ವಿವಿಧ ಆಕರ್ಷಣೆ, ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಸಕಲ ಸಿದ್ಧತೆ, ಚುನಾವಣಾಧಿಕಾರಿ ಡಾ. ಗೋಪಾಲಕೃಷ್ಣ ಹೇಳಿಕೆ

    ಹುಬ್ಬಳ್ಳಿ: ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಮತದಾರರು ಭಾಗಿಯಾಗಲು ಪ್ರೇರಣೆ ನೀಡಲಾಗುತ್ತಿದೆ. ಆ ಮೂಲಕ ಮತದಾನ ಪ್ರಮಾಣ ಹೆಚ್ಚಿಸುವುದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ತಿಳಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟ ಯಾರೊಬ್ಬರೂ ಮತದಾನದಿಂದ ದೂರ ಉಳಿಯಬಾರದು. ಇದಕ್ಕಾಗಿ ಮತದಾನ ನಡೆಯುವ 10ದಿನ ಮೊದಲಿನವರೆಗೂ ಹೆಸರು ನೋಂದಣಿಗೆ ಅವಕಾಶ ನೀಡಲಾಗಿದೆ. ಜಿಲ್ಲಾ ಸ್ವೀಪ್ ಯೋಜನೆಯಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    254 ಮತಗಟ್ಟೆಗಳಿದ್ದು, ಇದರಲ್ಲಿ 2 ಸೂಕ್ಷ ಹಾಗೂ 20 ಅತೀ ಸೂಕ್ಷ ಮತಗಟ್ಟೆಗಳಿವೆ. ಅಂಗವಿಕಲರಿಗಾಗಿ, ಯುವ ಮತದಾರರಿಗಾಗಿ, ಪರಂಪರೆ ಪ್ರತಿಬಿಂಬದ ತಲಾ ಒಂದು ಮತಗಟ್ಟೆಯನ್ನು ವಿಷಯಾಧಾರಿತವಾಗಿ ನಿರ್ವಿುಸಲಾಗುತ್ತಿದೆ.

    ಎಂದಿನಂತೆ ಮಹಿಳೆಯರಿಗಾಗಿ 5 ಸಖಿ (ಪಿಂಕ್) ಮತಗಟ್ಟೆಗಳನ್ನು ತೆರೆಯಲಾಗುವುದು. 1,450ಕ್ಕಿಂತ ಹೆಚ್ಚು ಮತದಾರರಿರುವ 6 ಕಡೆಗಳಲ್ಲಿ ಹೆಚ್ಚುವರಿಯಾಗಿ ಮತಗಟ್ಟೆ ಸೃಷ್ಟಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಮಹಿಳೆಯರೇ ಹೆಚ್ಚು: ಕ್ಷೇತ್ರದಲ್ಲಿ 2,46,120 ಮತದಾರರಿದ್ದು, ಇದರಲ್ಲಿ 1,22,006 ಪುರುಷರು, 1,24,076 ಮಹಿಳೆಯರು, 38 ಇತರೆ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ 6,434, 1,468 ಅಂಗವಿಕಲರು, 87 ಜನ ಸರ್ಕಾರಿ ಸೇವೆಯಲ್ಲಿರುವ ಮತದಾರರಿದ್ದಾರೆ.

    80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಕೋವಿಡ್ ರೋಗಿಗಳಿಗೆ ಮನೆಯಿಂದಲೇ ಮತ ಚಲಾಯಿಸುವ ಒಪ್ಪಿಗೆ ಪತ್ರ 12ಡಿ ಅರ್ಜಿ ನೀಡಲಾಗುವುದು. ಒಪ್ಪಿಗೆ ನೀಡಿದವರ ಮನೆಗೆ ತೆರಳುವ ಅಧಿಕಾರಿಗಳ ತಂಡ ಪೋಸ್ಟಲ್ ಮೂಲಕ ಗೌಪ್ಯ ಮತದಾನ ಮಾಡಿಸಲಿದೆ.

    ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ 7,810 ಮತದಾರರಿಗೆ ಅಂಚೆ ಮೂಲಕ ಗುರುತಿನ ಚೀಟಿಗಳನ್ನು ರವಾನಿಸಲಾಗಿದೆ. ಹಾಗಾಗಿ ಶೇ. 100ರಷ್ಟು ಮತದಾರರ ಗುರುತಿನ ಚೀಟಿ ಹೊಂದಿದ ಕ್ಷೇತ್ರವಾಗಿದೆ ಎಂದು ಮಾಹಿತಿ ನೀಡಿದರು.

    3 ಚೆಕ್ ಪೋಸ್ಟ್: ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಸುಳ್ಳ ರಸ್ತೆ, ನವಲಗುಂದ ರಸ್ತೆ ಹಾಗೂ ಗದಗ ರಸ್ತೆಯಲ್ಲಿ ಚೆಕ್ ಪೋಸ್ಟ್​ಗಳನ್ನು ತೆರೆಯಲಾಗಿದೆ. ಸಿಬ್ಬಂದಿ ದಿನದ 24 ಗಂಟೆ ಕಾರ್ಯನಿರ್ವಹಿಸಿ ವಾಹನಗಳನ್ನು ತಪಾಸಣೆ ಮಾಡಲಿದ್ದಾರೆ.

    ಮುಕ್ತ ಹಾಗೂ ಶಾಂತಿಯುತ ಚುನಾವಣೆಗಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ. 3 ಎಫ್​ಎಸ್​ಟಿ ತಂಡ, 19 ಸೆಕ್ಟರ್ ಅಧಿಕಾರಿಗಳ ತಂಡ, ವಿವಿಟಿ, ವಿಎಸ್​ಟಿ, ಲೆಕ್ಕಪತ್ರ, ವೆಚ್ಚ, ಎಇಟಿ ಹೀಗೆ ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದರು.

    ಸಹಾಯವಾಣಿ ಸೇವೆ: ಮತದಾರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 1950 ಅಥವಾ 0836- 2213827 ಸಂಖ್ಯೆಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು. ಅಕ್ರಮದ ಕುರಿತು ಮಾಹಿತಿ ನೀಡಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ಇರುವುದರ ಕುರಿತು ಸಿವಿಜಿಲ್ ಹಾಗೂ ಎನ್​ವಿಎಸ್​ಪಿ ಪೋರ್ಟಲ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಡಾ. ಗೋಪಾಲಕೃಷ್ಣ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts