More

    ವಂದೇ ಭಾರತ್ ಸ್ಲೀಪರ್ 6 ತಿಂಗಳಲ್ಲಿ ಸಿದ್ಧ: ಏನೆಲ್ಲ ಸೌಲಭ್ಯಗಳಿವೆ?

    ಬೆಂಗಳೂರು ವಂದೇ ಭಾರತ್ ಸ್ಲೀಪರ್ ಟ್ರೈನ್‌ಗಳ ಜಾಗತಿಕ ಮಟ್ಟದ ಬೋಗಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಆರು ತಿಂಗಳಲ್ಲಿ ರೈಲುಗಳು ಸಂಚಾರಕ್ಕೆ ಸಿದ್ಧಗೊಳ್ಳಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

    ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ( ಬಿಇಎಂಎಲ್)ಗೆ ಭೇಟಿ ನೀಡಿ ವಂದೇ ಭಾರತ್ ಸ್ಲೀಪರ್ ರೈಲಿನ ಬೋಗಿಯ ನಿರ್ಮಾಣ ಹಂತದ ಒಳವಿನ್ಯಾಸವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

    ದೂರ ಪ್ರಯಾಣದ ಮಾರ್ಗಗಳಿಗೆ ಸೂಕ್ತವಾಗುವಂತೆ ವಂದೇ ಭಾರತ್ ಸರಣಿಯ ಸ್ಲೀಪರ್ ರೈಲು ಪ್ರಾರಂಭಿಸಲು ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಲಿಪರ್ ರೈಲುಗಳ ನಿರ್ಮಾಣ ಪ್ರಾರಂಭವಾಗಿದ್ದು ಸಂಪೂರ್ಣ ಹೊಸ ವಿನ್ಯಾಸದೊಂದಿಗೆ ರೈಲ್ವೇ ಕೋಚ್ ತಯಾರಾಗಲಿದೆ. ಹೊಸ ಕೋಚ್‌ಗಳು ಮುಂದಿನ ನಾಲ್ಕರಿಂದ ಆರು ತಿಂಗಳ ಕಾಲ ವಿವಿಧ ರೀತಿಯ ತಪಾಸಣೆಗೆ ಒಳಪಡಲಿದ್ದು ಆ ಬಳಿಕ ಲೋಕಾರ್ಪಣೆಗೊಳ್ಳಳಿದೆ ಎಂದು ತಿಳಿಸಿದರು.

    ಬಿಇಎಂಎಲ್ 10 ರೈಲುಗಳನ್ನು (160 ಬೋಗಿ) ನಿರ್ಮಿಸಿ ಕೊಡಲಿದೆ. ಈಗಿನ ವಂದೇ ಭಾರತ್ ಚೇರ್ ಕಾರ್ ಹೊಂದಿದ್ದು ಸ್ಲೀಪರ್ ರೈಲಿನ ಕೋಚ್‌ಗಳು ವಿಶಿಷ್ಟ ವಿನ್ಯಾಸ ಹೊಂದಿರಲಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಸನಗಳ ಎತ್ತರ ವಿನ್ಯಾಸ ಮಾಡಲಾಗಿದೆ. ಕೇಂದ್ರಿಯ ಹವಾನಿಯಂತ್ರಣ ವ್ಯವಸ್ಥೆ ಇರಲಿದೆ. ತೀರಾ ಕಡಿಮೆ ಅಲುಗಾಟ ಹಾಗೂ ಕಂಪನ ವ್ಯವಸ್ಥೆ ಇರುವುದರಿಂದ ಜನ ಆರಾಮವಾಗಿ ನಿದ್ರಿಸಿ ಪ್ರಯಾಣಿಸಬಹುದು ಎಂದರು.

    ಅಗ್ನಿ ಅವಘಡ ನಿಯಂತ್ರಣ ಸೇರಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಳಬಾಗಿಲುಗಳಿಗೆ ಸೆನ್ಸಾರ್ ಅಳವಡಿಕೆ, ವಾಸನೆ ಮುಕ್ತ ಶೌಚಾಲಯ, ವೈರಸ್ ನಿಯಂತ್ರಣ ಮೆಕ್ಯಾನಿಸಂ, ಚಾಲನಾ ವಿಭಾಗದಲ್ಲಿ ಶೌಚಾಲಯ ಇರಲಿದೆ. ಮೊದಲ ದರ್ಜೆ ಎಸಿಕಾರ್‌ನಲ್ಲಿ ಬಿಸಿನೀರಿನ ಶಾವರ್, ಯುಎಸ್‌ಬಿ ಚಾರ್ಜಿಂಗ್, ದೃಶ್ಯ ಮಾಹಿತಿ ಸೌಲಭ್ಯ ಇರಲಿದೆ ಎಂದು ಅವರು ತಿಳಿಸಿದರು.

    ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಈ ರೈಲು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ನಮ್ಮಲ್ಲೇ ಮೆಟ್ರೋ ರೈಲಿನ ಒಂದು ಬೋಗಿಗೆ 9 ಕೋಟಿ ರೂ ನಿಂದ 10 ಕೋಟಿ ರೂ ವೆಚ್ಚವಾಗುತ್ತಿದೆ. ವಂದೇ ಭಾರತ್ ಸ್ಲೀಪರ್ ಬೋಗಿಗೆ ಅಂದಾಜು 8 ಕೋಟಿ ರೂ ನಿಂದ 9 ಕೋಟಿ ರೂ ವೆಚ್ಚವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

    ವಂದೇ ಭಾರತ್ ಸ್ಲೀಪರ್ ಹೇಗಿರಲಿದೆ?

    ವಂದೇ ಭಾರತ್ ಸ್ಲೀಪರ್ ರೈಲು 16 ಬೋಗಿಯನ್ನು ಹೊಂದಿರಲಿದೆ. 823 ಬರ್ತ್‌ಗಳಿರಲಿದೆ. ಎಸಿ 3 ಟಯರ್ 11 ಬೋಗಿ, 611 ಆಸನ ಇರಲಿದೆ. ಎಸಿ 2 ಟಯರ್ 4 ಬೋಗಿ, 188 ಆಸನ, ಮೊದಲ ದರ್ಜೆ ಎಸಿ ಬರ್ತ್ 1 ಬೋಗಿ 24 ಆಸನ ಇರಲಿದೆ. ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಜನಪ್ರಿಯವಾಗುತ್ತಿರುವ ವಂದೇ ಭಾರತ್ ಚೇರ್ ಕಾರ್ ರೈಲುಗಳು 8 ಗಂಟೆಯೊಳಗಿನ ಪ್ರಯಾಣಕ್ಕೆ ಸೂಕ್ತವಾಗಿದ್ದರೆ ಸ್ಲೀಪರ್ ಹನ್ನೆರಡು ಗಂಟೆ ಮೀರಿದ ಪ್ರಯಾಣವನ್ನು ಗಮನಿಸಿ ನಿರ್ಮಾಣಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts