More

    ಜೀರ್ಣಾಂಗ-ವಿಸರ್ಜನಾಂಗದ ಸ್ವಾಸ್ಥ್ಯಕ್ಕೆ ವಜ್ರಾಸನ

    ಜೀರ್ಣಾಂಗ-ವಿಸರ್ಜನಾಂಗದ ಸ್ವಾಸ್ಥ್ಯಕ್ಕೆ ವಜ್ರಾಸನವಜ್ರಾಯುಧ ಇಂದ್ರನ ಆಯುಧ. ವಜ್ರ ಎಂದರೆ ಸಿಡಿಲು. ಇಂದ್ರನು ಹೇಗೆ ದೇವತೆಗಳಿಗೆಲ್ಲ ರಾಜನೋ ಅದೇ ರೀತಿ ಮನಸ್ಸು ಇತರ ಎಲ್ಲ ಇಂದ್ರಿಯಗಳಿಗೂ ರಾಜನಿದ್ದಂತೆ. ವಜ್ರ ಎಂಬುದು ಜನನಾಂಗ ಮತ್ತು ಮೂತ್ರಾಂಗಗಳಿಗೆ ನೇರವಾಗಿ ಸಂಬಂಧಿಸಿದ ಪ್ರಮುಖ ನಾಡಿಯೂ ಆಗಿದೆ. ಇದು ದೇಹದ ಲೈಂಗಿಕ ಶಕ್ತಿಯನ್ನು ನಿಯಂತ್ರಿಸುತ್ತದೆ. ವಜ್ರ ನಾಡಿಯನ್ನು ನಿಯಂತ್ರಿಸುವ ಮೂಲಕ ಉದಾತ್ತೀಕರಣವನ್ನು ಪಡೆಯಬಹುದು ಮತ್ತು ಲೈಂಗಿಕ ಶಕ್ತಿಯನ್ನು ನಿಯಂತ್ರಿಸಬಹುದು. ಆದ್ದರಿಂದ ಜನನಾಂಗ ಹಾಗೂ ಜೀರ್ಣಾಂಗಗಳಿಗೆ ಈ ಆಸನಗಳು ಬಹಳ ಪರಿಣಾಮಕಾರಿಯಾಗಿವೆ. ಇವುಗಳನ್ನು ಸುಲಭವಾಗಿ ಮಾಡಬಹುದಾಗಿದೆ.

    ವಜ್ರಾಸನವು ಜಪಾನೀ ಬೌದ್ಧರ ಧ್ಯಾನ ಭಂಗಿಯಾಗಿದೆ ಹಾಗೂ ಮುಸ್ಲಿಮರ ಪ್ರಾರ್ಥನಾ ಭಂಗಿಯೂ ಆಗಿದೆ. ಪದ್ಮಾಸನ, ಸ್ವಸ್ತಿಕಾಸನ, ಬದ್ಧಕೋನಾಸನ ಮತ್ತು ಸಿದ್ಧಾಸನ ಮಾಡಲಾಗದಂತಹವರು ಅಥವಾ ಅದು ಕಷ್ಟ ಎನಿಸುವಂತಹವರು ವಜ್ರಾಸನದಲ್ಲಿ ಕುಳಿತು ಪ್ರಾಣಾಯಾಮ, ಧ್ಯಾನ ಮಾಡಬಹುದು.

    ಪೂರ್ವ ಸೂಚನೆ: ಈ ಆಸನ ಮಾಡುವಾಗ ತೊಡೆಗಳಿಗೆ ನೋವಾದರೆ ಮೊಣಕಾಲುಗಳನ್ನು ಸ್ವಲ್ಪ ದೂರ ಸರಿಸಬಹುದು. ಆರಂಭದಲ್ಲಿ ವಜ್ರಾಸನದಲ್ಲಿದ್ದ ಸ್ವಲ್ಪ ಹೊತ್ತಿನಲ್ಲೇ ಕಣಕಾಲುಗಳು ನೋಯಬಹುದು. ಇದರ ನಿರ್ವಹಣೆಗಾಗಿ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತು ನೋವು ಹೋಗುವವರೆಗೆ ಪಾದಗಳನ್ನು ಒಂದಾದ ನಂತರ ಒಂದರಂತೆ ಜೋರಾಗಿ ಕುಲುಕಬೇಕು. ಸಡಿಲಿಸಬೇಕು. ಪುನಃ ವಜ್ರಾಸನ ಭಂಗಿಯಲ್ಲಿ ಕೂರಬೇಕು. ನಿತಂಬ ಮತ್ತು ಹಿಮ್ಮಡಿಗಳ ನಡುವೆ ಒಂದು ಸಣ್ಣ ಮೆತ್ತೆಯನ್ನು ಬಳಸಬಹುದು. ಇದು ಆರಂಭದಲ್ಲಿ ಕಲಿಯುವಾಗ ಅಭ್ಯಾಸ ಮಾಡಲು ಸರಳ ಹಾಗೂ ಹಿತಕರವೆನಿಸುವುದು.

    ವಜ್ರಾಸನ (ಸಿಡಿಲಿನ ಭಂಗಿ): ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ. ಹಬ್ಬೆರಳು ಒಟ್ಟಿಗಿರಲಿ. ಅಂಗೈಗಳು ಕೆಳಮುಖವಾಗಿರಲಿ. ಬೆನ್ನು ಮತ್ತು ತಲೆ ನೆಟ್ಟಗಿರಲಿ. ಆದರೆ, ಬಿಗಿದುಕೊಂಡಂತೆ ಬೇಡ. ಅತಿಯಾಗಿ ಬೆನ್ನನ್ನು ಹಿಂದಕ್ಕೆ ಬಾಗಿಸಬೇಡಿ. ಕಣ್ಣುಗಳನ್ನು ಮುಚ್ಚಿ ಇಡೀ ದೇಹವನ್ನು ಹಾಗೂ ಕೈಗಳನ್ನು ಸಡಿಲ ಬಿಡಿ. ಸಹಜವಾಗಿ ಉಸಿರಾಟ ಮಾಡಿ. ಮೂಗಿನ ಹೊಳ್ಳಗಳ ಮೂಲಕ ಒಳ ಹೋಗುವ ಮತ್ತು ಹೊರಹೋಗುವ ಉಸಿರಿನತ್ತ ಗಮನವಿರಲಿ.

    ಅವಧಿ: ನಿಮಗೆ ಸಾಧ್ಯವಾದಷ್ಟು ಹೊತ್ತು ಅಭ್ಯಾಸ ಮಾಡಿ. ಊಟದ ನಂತರ ಐದು ನಿಮಿಷಗಳ ಕಾಲ ಅಭ್ಯಾಸ ಮಾಡಿದರೆ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ತೊಂದರೆ ಇದ್ದರೆ, ಊಟಕ್ಕೆ ಮೊದಲು, ಊಟದ ನಂತರ ವಜ್ರಾಸನದಲ್ಲಿ ಕುಳಿತು ನೂರು ಸಲ ಉದರದ ಸರಳ ಉಸಿರಾಟದ ಅಭ್ಯಾಸ ಮಾಡಿ.

    ಗಮನ: ಶ್ರೀರಾಮ ನಾಮ, ಓಂ ನಮಃ ಶಿವಾಯ, ಓಂಕಾರ ಜಪ ಅಥವಾ ಇಷ್ಟದೇವರನ್ನು ಉಸಿರಾಟದ ಕಡೆಗೆ ಕಣ್ಣು ಮುಚ್ಚಿ ಅಭ್ಯಾಸ ಮಾಡಿದರೆ, ಮನಸ್ಸು ಪ್ರಶಾಂತಗೊಳ್ಳುತ್ತದೆ. ಆಧ್ಯಾತ್ಮಿಕವಾಗಿ ಮಣಿಪುರ ಚಕ್ರದ ಮೇಲೆ ಗಮನ ಹರಿಸುವುದು ಲಾಭಕರ.

    ಪ್ರಯೋಜನಗಳು: ವಜ್ರಾಸನವು ರಕ್ತ ಸಂಚಾರ ಮತ್ತು ವಸ್ತಿಕುಹರದ ನರ ಸ್ಪಂದನಗಳನ್ನು ಪರ್ಯಾಯಗೊಳಿಸುತ್ತದೆ ಮತ್ತು ವಸ್ತಿಕುಹರದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಹರ್ನಿಯಾ ಆಗದಂತೆ ತಡೆಯುತ್ತದೆ ಮತ್ತು ಮೂಲವ್ಯಾಧಿ ನಿವಾರಣೆಗೂ ಸಹಾಯಕ. ಅತಿಯಾದ ಆಮ್ಲತೆ ಪೆಸ್ಟಿಕ್ ಅಲ್ಸರ್ ಮೊದಲಾದ ಜಠರ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಇಡೀ ಪಚನಾಂಗ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಜನನಾಂಗಗಳಿಗೆ ಕಡಿಮೆ ರಕ್ತ ಸಂಚಾರವಾಗುವಂತೆ ಮಾಡಿ ನರತಂತುಗಳಲ್ಲಿ ನೀವಿಕೆಯ ಪರಿಣಾಮವನ್ನು ಉಂಟುಮಾಡುತ್ತದೆ. ಇದು ಹಿಗ್ಗಿದ ವೃಷಣಗಳುಳ್ಳ ಹೈಡ್ರೋಸಿಲ್ ಸಮಸ್ಯೆಯುಳ್ಳ ಪುರುಷರಿಗೆ ಉತ್ತಮ ಚಿಕಿತ್ಸೆ. ಸ್ತ್ರೀಯರ ಹೆರಿಗೆ ಕ್ರಿಯೆಗೆ ಸಹಾಯಕ ಮತ್ತು ಋತುಚಕ್ರದ ಏರುಪೇರುಗಳನ್ನು ಸರಿಪಡಿಸುತ್ತದೆ. ವಜ್ರಾಸನವು ಬಹಳ ಮುಖ್ಯವಾದ ಧ್ಯಾನಾಸನ ಭಂಗಿ. ಇಲ್ಲಿ ಯಾವುದೇ ಪ್ರಯಾಸವಿಲ್ಲದೇ ದೇಹವು ನೇರಗೊಳ್ಳುತ್ತದೆ. ಕಟಿನರದ ಸಯಾಟಿಕ ಬೇನೆ ಮತ್ತು ತ್ರಿ್ರಾಸ್ಥಿಗಳ ಸೋಂಕುಳ್ಳವರಿಗೆ ಇದು ಅತ್ಯುತ್ತಮವಾದ ಧ್ಯಾನಾಸನ. ಇದು ವಜ್ರನಾಡಿಯನ್ನು ಪ್ರಚೋದಿಸಿ, ಸುಷುಮ್ನ ನಾಡಿಯಲ್ಲಿ ಪ್ರಾಣವನ್ನು ಸಚೇತನಗೊಳಿಸುತ್ತದೆ. ಲೈಂಗಿಕ ಶಕ್ತಿಯನ್ನು ಮಿದುಳಿನತ್ತ ತಿರುಗಿಸಿ ಆಧ್ಯಾತ್ಮಿಕ ಪ್ರಗತಿಗೆ ನೆರವಾಗುತ್ತದೆ.

    ರೋಸ್​​ ವಾಟರ್​ನಿಂದ ಚರ್ಮದ ಆರೈಕೆ! ನಿಜವಾಗಿಯೂ ಇದು ವರ್ಕ್​ ಆಗುತ್ತಾ?

    ಅಪರೂಪದ ವಿಶ್ವದಾಖಲೆ ಬರೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್​ ಪಂದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts