More

    ವೈಕುಂಠ ಏಕಾದಶಿ ಪ್ರಯುಕ್ತ ಚಿಕ್ಕತಿರುಪತಿಗೆ ಲಕ್ಷಕ್ಕೂ ಅಧಿಕ ಭಕ್ತರ ಭೇಟಿ

    ಲಕ್ಕೂರು: ಪ್ರಸಿದ್ಧ ಯಾತ್ರಾ ಸ್ಥಳ ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸೋಮವಾರ 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

    ಬೆಳಗಿನ ಜಾವ 4ಕ್ಕೆ ದೇವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ದೇವಾಲಯ ಮುಂಭಾಗ ಮೆರವಣಿಗೆ ನಡೆಸಿದ ನಂತರ ವೈಕುಂಠ ದ್ವಾರದಲ್ಲಿ ವಿಶೇಷ ಹೂವಿನ ಅಲಂಕಾರ ಹಾಗೂ ಆಭರಣ ಅಲಂಕಾರದೊಂದಿಗೆ ಪ್ರತಿಷ್ಠಾಪಿಸಲಾಯಿತು.

    ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಪ್ರಧಾನ ಅರ್ಚಕ ನಾರಾಯಣಾಚಾರ್, ಅರ್ಚಕರಾದ ರವಿ, ಗೋಪಾಲಕೃಷ್ಣ ಭಾರದ್ವಾಜ್, ಶ್ರೀಧರ್ ನೇತೃತ್ವದಲ್ಲಿ ಮೂಲವಿಗ್ರಹಕ್ಕೆ ಅಭಿಷೇಕ, ಪಂಚಾಮೃತ ಅಭಿಷೇಕ, ಪುಣ್ಯಾಹ, ವಜ್ರಕವಚ ಧಾರಣೆ, ತೊಲಮಾಲಸೇವೆ, ಧನುರ್ಮಾಸ ಆರಾಧನೆ, ಮಹಾಮಂಗಳಾರತಿ, ಹೋಮ-ಹವನ, ವೇದಮಂತ್ರ ಪಾರಾಯಣ ನಡೆಯಿತು. 5ಕ್ಕೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವರಿಗೆ ಹೂವು ಹಾಗೂ ಆಭರಣ ಅಲಂಕಾರ ಮಾಡಲಾಗಿತ್ತು.

    ರಾಜ್ಯದ ನಾನಾ ಭಾಗ, ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ವಿದೇಶಿ ಪ್ರವಾಸಿಗರು ಸೇರಿ ಅಪಾರ ಭಕ್ತರು ಸರತಿ ಸಾಲಿನಲ್ಲಿ ನಿಂತು ಗೋವಿಂದ ನಾಮಸ್ಮರಣೆ ಮಾಡುತ್ತ ದೇವರ ದರ್ಶನ ಪಡೆದರು.

    ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ವೈ.ನಂಜೇಗೌಡ, ಉಪ ವಿಭಾಗಾಧಿಕಾರಿ ಸೋಮಶೇಖರ್, ಮಂಜುನಾಥ್, ಉಪತಹಸೀಲ್ದಾರ್ ನಾಗವೇಣಿ, ಕಾರ‌್ಯನಿರ್ವಹಣಾಧಿಕಾರಿ ನರಸಿಂಹಯ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಂದನ್.ವಿ.ಗೌಡ, ಸದಸ್ಯರಾದ ಎಟ್ಟಕೋಡಿ ಎಂ.ವೀರಭದ್ರಪ್ಪ, ಟಿ.ಆರ್.ವೆಂಕಟೇಶ್‌ಗೌಡ, ಟಿ.ಕೆ.ಕಲ್ಪನಾ ಶ್ರೀಧರ್, ಎಚ್.ಆರ್.ಮುನಿರೆಡ್ಡಿ, ಎ.ಎಂ.ನಾರಾಯಣಪ್ಪ, ಎ.ಎನ್.ಹರೀಶ್ ಇನ್ನಿತರರು ಹಾಜರಿದ್ದರು.

    ಗೊಂದಲವಿಲ್ಲದೆ ದರ್ಶನ: ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೋಡಿಹಳ್ಳಿ ಕೃಷ್ಣಾರೆಡ್ಡಿ ಭಕ್ತರಿಗೆ ಉಚಿತ ಪ್ರಸಾದ ವಿತರಿಸಿದರು. ದೇವಾಲಯ ಆವರಣದಲ್ಲಿ ಗಲಾಟೆ ನಡೆಯದಂತೆ ಪೊಲೀಸರು, ಗೃಹರಕ್ಷಕದಳ, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸ್ವಯಂಸೇವಕರು, ದೇವಾಲಯ ಸಿಬ್ಬಂದಿ ವರ್ಗದವರಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕ್ಯೂ ವ್ಯವಸ್ಥೆ ಸೇರಿ ಹಲವು ರೀತಿಯ ಸೌಲಭ್ಯ ಕಲ್ಪಿಸಿದ ಪರಿಣಾಮ ಭಕ್ತರು ಯಾವುದೇ ಗೊಂದಲವಿಲ್ಲದೆ ದೇವರ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts