More

    ವೈದ್ಯನಾಥೇಶ್ವರಸ್ವಾಮಿ ಬ್ರಹ್ಮ ರಥೋತ್ಸವ

    ಮದ್ದೂರು: ವೈದ್ಯನಾಥಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶನಿವಾರ ನಡೆಯಿತು.

    ಮುಂಜಾನೆಯಿಂದಲೇ ದೇವರ ವಿಗ್ರಹಕ್ಕೆ ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 10.45 ರಿಂದ 11.15ರೊಳಗೆ ಮೇಷ ಲಗ್ನದಲ್ಲಿ ವೈದ್ಯನಾಥೇಶ್ವರಸ್ವಾಮಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯ ಆವರಣದಿಂದ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ನಡೆದ ರಥೋತ್ಸವದಲ್ಲಿ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ರಥವನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

    ಚನ್ನಪಟ್ಟಣದ ತಾಲೂಕಿನ ವಿರೂಪಾಕ್ಷಪುರ ಹೋಬಳಿ ಜೆ.ಬ್ಯಾಡರಹಳ್ಳಿಯ ಶ್ರೀ ವೈದ್ಯನಾಥೇಶ್ವರ ಸಮಿತಿ ಹಾಗೂ ಗ್ರಾಮಸ್ಥರಿಂದ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಗೆ ಒಬ್ಬಟ್ಟಿನ ಊಟ ಉಣ ಬಡಿಸಲಾಯಿತು. ವಿನಾಯಕ ಗೆಳೆಯರ ಬಳಗದ ವತಿಯಿಂದ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

    ರಥೋತ್ಸವ ಅಂಗವಾಗಿ ದೇವಾಲಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 9 ಗಂಟೆಗೆ ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರಸ್ವಾಮಿ,, ಮದ್ದೂರಿನ ಶ್ರೀ ಮದ್ದೂರಮ್ಮ, ಆಲೂರಿನ ಶ್ರೀ ಆಲೂರಮ್ಮ, ನಗರಕೆರೆಯ ಶ್ರೀ ಪಟ್ಟಲದಮ್ಮ, ಹಳೆ ಬೂದನೂರಿನ ಶ್ರೀ ಅಂಕನಾಥೇಶ್ವರಸ್ವಾಮಿ, ವೀರಭದ್ರನ ಕುಣಿತ ವಿಜೃಂಭಣೆಯಿಂದ ನಡೆಯಿತು.

    ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಮಹಾ ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣ, ದೇವರ ವಿಗ್ರಹ ಹಾಗೂ ರಥಕ್ಕೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

    ಶಾಸಕ ಕೆ.ಎಂ.ಉದಯ್, ಸಮಾಜ ಸೇವಕ ವೆಂಕಟರಮಣಗೌಡ (ಸ್ಟಾರ್ ಚಂದ್ರು), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಮಾಜಿ ಸದಸ್ಯ ಸಿ.ಚಲುವರಾಜು ಸೇರಿದಂತೆ ಹಲವಾರು ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts