More

    ಸಂಸ್ಕಾರಯುತ ಶಿಕ್ಷಣದಿಂದ ಸಾಂಸ್ಕೃತಿಕ ಬೆಳವಣಿಗೆ: ವಡ್ಡರ್ಸೆ ರಥಬೀದಿ ಫ್ರೆಂಡ್ಸ್ ವಾರ್ಷಿಕೋತ್ಸವದಲ್ಲಿ ಪಳ್ಳಿ ಕಿಶನ್ ಹೆಗ್ಡೆ ಹೇಳಿಕೆ

    ಕೋಟ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಆಗ ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯ ಎಂದು ಪಂಚಯಕ್ಷ ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಹೇಳಿದರು.

    ವಡ್ಡರ್ಸೆ ಮಹಾಲಿಂಗೇಶ್ವರ ಜಾತ್ರೆ ಪ್ರಯುಕ್ತ ವಡ್ಡರ್ಸೆ ರಥಬೀದಿ ಫ್ರೆಂಡ್ಸ್ 6ನೇ ವರ್ಷೋತ್ಸವ ಪ್ರಯುಕ್ತ ಸಾಧಕರಿಗೆ, ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಕ್ಷಗಾನ ಮೂಲಕ ನಾವು ಸಂಸ್ಕಾರ ನೀಡುವ ಕೆಲಸ ಮಾಡುತ್ತಿವೆ. ಅದೇ ರೀತಿ ರಥ ಬೀದಿ ಫ್ರೆಂಡ್ಸ್ ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕವಾಗಿ ಸಾಮಾಜಿಕವಾಗಿ ಗುರುತಿಸಿಕೊಂಡು ತಮ್ಮೂರ ಜಾತ್ರೆಗೆ ಹೊಸ ಮೆರುಗನ್ನಿತ್ತಿದ್ದಾರೆ. ಇಂಥಹ ಸಂಘ ಸಂಸ್ಥೆಗಳು ಇತರ ಸಂಘಟನೆಗಳಿಗೆ ಸ್ಫೂರ್ತಿಯಾಗಿವೆ ಎಂದರು.

    ಕರ್ಣಾಟಕ ಬ್ಯಾಂಕ್ ಉಡುಪಿ ವಿಭಾಗದ ಎಜಿಎಂ ಬಿ.ಗೋಪಾಲಕೃಷ್ಣ ಸಾಮಾಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತ್ರೆಗಳಲ್ಲಿ ಸಂಘಸಂಸ್ಥೆಗಳ ಪಾತ್ರ ಗಣನೀಯವಾದದ್ದು. ಸಂಘಟನೆ ಊರಿನ ಸರ್ವತೋಮುಖ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
    ಹಿರಿಯ ಯಕ್ಷಸಾಧಕ ಆರ್ಗೋಡು ಮೋಹನದಾಸ ಶೆಣೈ ಹಾಗೂ ವೀರ ಯೋಧರಾದ ರವಿಚಂದ್ರ ಶೆಟ್ಟಿ, ಸತೀಶ್ ಗಾಣಿಗ, ಶರತ್ ನಾಯಿರಿ ಅವರನ್ನು ಸನ್ಮಾನಿಸಲಾಯಿತು.

    ರಥಬೀದಿ ಫ್ರೆಂಡ್ಸ್ ಗೌರವಾಧ್ಯಕ್ಷ ರಾಘವೇಂದ್ರ ಭಟ್ ಬನ್ನಾಡಿ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಸೆನೆಟರ್ ವಲಯಾಧ್ಯಕ್ಷೆ ಸೌಜನ್ಯಾ ಹೆಗ್ಡೆ, ವಡ್ಡರ್ಸೆ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಕೊತ್ತಾಡಿ ಉದಯ್ ಶೆಟ್ಟಿ ಉಪಸ್ಥಿತರಿದ್ದರು.

    ರಥಬೀದಿ ಫ್ರೆಂಡ್ಸ್ ವತಿಯಿಂದ ನಡೆಸಲಾದ ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಥಬೀದಿ ಫ್ರೆಂಡ್ಸ್ ಅಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರಕಾಶ್ ಆಚಾರ್ಯ ಹಾಗೂ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ರಥಬೀದಿ ಫ್ರೆಂಡ್ಸ್ ಸದಸ್ಯರಾದ ನಾಗೇಂದ್ರ ಅಡಿಗ, ಶ್ರೀಕಾಂತ್ ಭಟ್ ಉಪ್ಲಾಡಿ ಸನ್ಮಾನಪತ್ರ ವಾಚಿಸಿದರು. ರವಿಬನ್ನಾಡಿ ಪ್ರಾರ್ಥಿಸಿ, ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ಅಧ್ಯಕ್ಷ ಸತೀಶ್ ಪೂಜಾರಿ ವಂದಿಸಿದರು. ಸಚ್ಚಿದಾನಂದ ಅಡಿಗ ಸಹಕರಿಸಿದರು.

    ಯಕ್ಷಗಾನದ ಮೂಲಸ್ವರೂಪಕ್ಕೆ ಧಕ್ಕೆಯಾಗಬಾರದು
    ಈ ಕರಾವಳಿಯ ಗಂಡುಕಲೆ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಲಾವಿದರು ಮೇಳಗಳು ಕಾರ್ಯನಿರ್ವಹಿಸಬೇಕಾದ ಅನಿರ್ವಾಯತೆ ಇದೆ. ಇದಕ್ಕೆ ಪೂರಕವಾದ ವಿಚಾರಗಳು ನಮ್ಮ ಕಣ್ಮುಂದೆ ನಡೆಯುತ್ತಿದೆ. ಯಕ್ಷಗಾನ ಕಥೆಯ ಸಾಹಿತ್ಯದಲ್ಲಿ ಲೋಪಗಳು ಸಿನೀಮಾ ರೀತಿಯಲ್ಲಿ ರೂಪುಗೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ ನಿವೃತ್ತಿ ಜೀವನದಲ್ಲಿರುವ ಹಿರಿಯ ಯಕ್ಷಕಲಾವಿದ ಆರ್ಗೋಡು ಮೋಹನದಾಸ ಶೆಣೈಯವರಲ್ಲಿ ನಿಮ್ಮ ಯಕ್ಷ ಶೈಲಿಯನ್ನು ಯುವ ಕಲಾವಿದರಿಗೆ ಧಾರೆ ಎರೆಯಿರಿ. ಒಂದಿಷ್ಟು ಯುವ ಕಲಾವಿದರನ್ನು ಸೃಷ್ಟಿಸಿ. ಇದು ನೀವು ಕೊಡುವ ಬಳುವಳಿ ಎಂದು ಭಾವಿಸುತ್ತೇನೆ ಎಂದು ಕಿಶನ್ ಹೆಗ್ಡೆ ನುಡಿದರು.

    ತಂದೆಯ ಒತ್ತಾಯದ ಮೇರೆಗೆ ಯಕ್ಷಗಾನಕ್ಕೆ ಕಾಲಿರಿಸಿದೆ. ಅದು ಈ ಹಂತದವರೆಗೆ ತಂದಿರಿಸಿದೆ. ನನ್ನ ಕುಣಿತ, ಸಾಹಿತ್ಯ ಯಕ್ಷಗಾನದಲ್ಲಿ ಆರ್ಗೋಡು ಶೈಲಿಯನ್ನು ಮತ್ತೆ ಮತ್ತೆ ನೆನಪಿಸುವಂತೆ ಕಲಾರಸಿಕರಲ್ಲಿ ಮನೆಮಾಡಿದೆ. ಹಳ್ಳಿಗಾಡಿನ ಸೊಗಡಿನ ಕಲಾವಿದನಾಗಿ ಜೀವನದಲ್ಲಿ ಸಾರ್ಥಕ್ಯವನ್ನು ಕಂಡಿದ್ದೇನೆ.
    ಆರ್ಗೋಡು ಮೋಹನದಾಸ ಶೆಣೈ, ಯಕ್ಷಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts