More

  ವದಂತಿಗಳಿಗೆ ಕಿವಿಗೊಡದೆ ಸಹಕರಿಸಿ, ದೊಡ್ಡಬಳ್ಳಾಪುರದಲ್ಲಿ ತಹಸೀಲ್ದಾರ್ ಟಿ.ಎಸ್.ಶಿವರಾಜು ಮನವಿ

  ಬೆಂಗಳೂರು: ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಆರ್ಥಿಕ ಗಣತಿಯಂತೆ ಈ ಬಾರಿಯೂ 7ನೇ ಆರ್ಥಿಕ ಗಣತಿ ನಡೆಸಲಾಗುತ್ತಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾಯ್ದೆ ಮಾಹಿತಿಗಾಗಿ ದಾಖಲೆ ಪಡೆಯುತ್ತಿದ್ದಾರೆ ಎಂಬ ವದಂತಿಗಳಿಗೆ ಕಿವಿಗೊಡದೆ ಸಾರ್ವಜನಿಕರು ಆರ್ಥಿಕ ಗಣತಿಗೆ ಸಹಕರಿಸಬೇಕೆಂದು ದೊಡ್ಡಬಳ್ಳಾಪುರ ತಹಸೀಲ್ದಾರ್ ಟಿ.ಎಸ್.ಶಿವರಾಜ್ ಹೇಳಿದರು.

  ತಾಲೂಕಿನ ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯಲ್ಲಿ ಸಾಮಾನ್ಯ ಸೇವಾ ಕೇಂದ್ರದ ವತಿಯಿಂದ 7ನೇ ಆರ್ಥಿಕ ಗಣತಿ ವಾಸ್ತವತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜನ ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆರ್ಥಿಕ ಗಣತಿ ದೇಶದ ಆರ್ಥಿಕ ದಿಕ್ಸೂಚಿಯಾಗಿದ್ದು, ಈ ಗಣತಿ ದೇಶದಲ್ಲಿ ಜನಪರ ಯೋಜನೆ ಸೇರಿ ಎಲ್ಲ ಸ್ತರಗಳಿಗೂ ಸೂಕ್ತ ಆರ್ಥಿಕ ಯೋಜನೆ ರೂಪಿಸಲು ಸಾಧ್ಯವಾಗುವುದರಿಂದ ದೇಶದ ಸಮಾನ ಅಭಿವೃದ್ಧಿಗೆ ಆರ್ಥಿಕ ಗಣತಿ ಅಗತ್ಯವಾಗಿದೆ. ಹೀಗಾಗಿ ಸಾರ್ವಜನಿಕರು ಕೇಂದ್ರ ಸರ್ಕಾರದ ಈ ಗಣತಿಗೆ ಸಹಕರಿಸಬೇಕು. ಯಾವುದೇ ವದಂತಿಗೆ ಆಸ್ಪದಕೊಡದೆ ಆರ್ಥಿಕ ಗಣತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
  ದೊಡ್ಡಬಳ್ಳಾಪುರ ವಿಭಾಗದ ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ಆರ್ಥಿಕ ಜನಗಣತಿ ಕುರಿತು ಗಣತಿದಾರರ ಮೇಲೆ ಸಂಶಯ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ, ಗಣತಿದಾದರರ ಮೇಲೆ ಹಲ್ಲೆ ಮಾಡುವುದಾಗಲೀ, ದೌರ್ಜನ್ಯ ಮಾಡುವುದಾಗಲೀ ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

  ಮಾನವ ಸರಪಳಿ: ವಿದ್ಯಾರ್ಥಿಗಳು ಕೊಂಗಾಡಿಯಪ್ಪ ಕಾಲೇಜಿನಿಂದ ನಡಿಗೆ(ಜಾಥಾ) ಹೊರಟು ದೊಡ್ಡಬಳ್ಳಾಪುರ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ, ತಾಲೂಕು ಕಚೇರಿಯ ವೃತ್ತದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ನಿರ್ಮಿಸಿ ಆರ್ಥಿಕ ಗಣತಿ ಕುರಿತು ಜಾಗೃತಿ ಮೂಡಿಸಲಾಯಿತು.
  ರಾಜ್ಯ ಸಾಮಾನ್ಯ ಸೇವಾ ಕೇಂದ್ರದ ಮುಖ್ಯಸ್ಥ ರಾಬರ್ಟ್ ನೆಲ್ಸೆನ್, ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿಜಲಿಂಗಪ್ಪ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ಮೇಲ್ವಿಚಾರಕ ವಿ.ಎಸ್.ಮಹೇಶ್, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಶ್ರೀನಿವಾಸ್, ಪ್ರಜ್ವಲ್, ಮೃತ್ಯುಂಜಯ, ಮಂಜೇಶ್ ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts