More

    ಲಸಿಕೆ ಅಭಿಯಾನಕ್ಕೆ ವೇಗ ನೀಡಿ ; ಸಚಿವ ಡಾ.ಸುಧಾಕರ್ ಸೂಚನೆ

    ಚಿಕ್ಕಬಳ್ಳಾಪುರ : ಜಿಲ್ಲಾದ್ಯಂತ ಕರೊನಾ ಲಸಿಕಾಕರಣ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್, ಆಗಸ್ಟ್ ಅಂತ್ಯದೊಳಗೆ ಮೊದಲನೇ ಡೋಸ್ ಶೇ.80ರಷ್ಟು ಮತ್ತು ಸೆಪ್ಟೆಂಬರ್ ಅಂತ್ಯದೊಳಗೆ 2ನೇ ಡೋಸ್ ಶೇ.50ರಷ್ಟು ಪೂರ್ಣಗೊಳಿಸಲು ನಿರ್ದೇಶಿಸಿದರು.

    ಜಿಲ್ಲಾಡಳಿತ ಭವನದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಸಂಭವನೀಯ 3ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಬೇಕಿದ್ದು, ಹೆಚ್ಚು ಲಸಿಕಾ ಮೇಳಗಳನ್ನು ಆಯೋಜಿಸುವಂತೆ ಸೂಚಿಸಿದರು.

    ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ತಾಲೂಕುಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ ಜನರಿಗೆ ಮಾರ್ಗಸೂಚಿಗಳ ಪಾಲನೆಯ ಜಾಗೃತಿ ಮೂಡಿಸಬೇಕು. ಹಳ್ಳಿಗಳಲ್ಲಿ ಪಾಸಿಟಿವ್ ದೃಢಪಟ್ಟರೆ ಆ ಮನೆಯ ಸುತ್ತಮುತ್ತಲ ಪ್ರದೇಶವನ್ನು ಕನಿಷ್ಠ 2 ವಾರ ಮೈಕ್ರೋ ಕಂಟೈನ್‌ಮೆಂಟ್ ಜೋನ್ ಆಗಿ ಘೋಷಿಸುವಂಥೆ ಸುಧಾಕರ್ ತಾಕೀತು ಮಾಡಿದರು.

    ಜನಪ್ರತಿನಿಧಿಗಳು ಮತ್ತು ಸಮಾಜ ಸೇವಕರು ಆಹಾರ ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ಕರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರುಗಳು ಬರುತ್ತಿವೆ, ಈ ನಿಟ್ಟಿನಲ್ಲಿ ಸೂಕ್ರ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್‌ಗಳಿಗೆ ತಿಳಿಸಿದರು.

    ಜಿಲ್ಲೆಯಲ್ಲಿ ಉತ್ತಮ ಮಳೆ : ಪ್ರಸಕ್ತ ಮುಂಗಾರಿನಲ್ಲಿ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ, ಆಗಸ್ಟ್‌ನ 271 ಮಿ.ಮೀ ವಾಡಿಕೆ ಮಳೆ ಪೈಕಿ 470 ಮಿ.ಮೀ.ಮಳೆ ಬಿದ್ದಿದ್ದು ಶೇ.73 ರಷ್ಟು ಹೆಚ್ಚುವರಿ ಮಳೆಯಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೂ ಮುಂಗಾರು ಅವಧಿ ಇರಲಿದ್ದು, ಈವರೆಗೆ ಶೇ.70 ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಅಗತ್ಯವಾದಷ್ಟು ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ಎಲ್.ರೂಪಾ ಸಭೆಗೆ ತಿಳಿಸಿದರು.

    ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು: ಜಿಲ್ಲೆಯಲ್ಲಿ ಪ್ರಸ್ತುತ ಸೋಂಕು ನಿಯಂತ್ರಣದಲ್ಲಿದೆ. 106 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಶೇ.0.96ಕ್ಕೆ ಇಳಿಕೆಯಾಗಿದೆ. ಪ್ರತಿನಿತ್ಯ ಸರಾಸರಿ 5400 ಪರೀಕ್ಷೆ ಗುರಿ ಹೊಂದಲಾಗಿದ್ದು, ಈ ಪೈಕಿ ದಿನಕ್ಕೆ 7-8 ಪಾಸಿಟಿವ್ ದೃಢಪಡುತ್ತಿವೆ, ಇದುವರೆಗೆ 43,680 ಜನರಲ್ಲಿ ಸೋಂಕು ದೃಢಪಟ್ಟಿದ್ದು 43,154 ಮಂದಿ ಸೋಂಕು ಗುಣವಾಗಿದೆ ಎಂದು ತಿಳಿಸಿದ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ, ಜಿಲ್ಲೆಯ 6 ತಾಲೂಕುಗಳಲ್ಲಿ 6.10 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ, ಆದರೆ ಕೆಲ ಗ್ರಾಮಗಳಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ ಅಸಹಾಯಕತೆ ವ್ಯಕ್ತಪಡಿಸಿದರು.

    ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧ :ಜಿಲ್ಲೆಯ ನಂದಿಬೆಟ್ಟ, ಆವಲಬೆಟ್ಟ ಸೇರಿ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಂತಾಮಣಿ ತಾಲೂಕಿನ ಗಡಿಭಾಗದಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲು, ಆಂಧ್ರದ ಗಡಿ ಭಾಗದ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸಚಿವರು ಪೊಲೀಸರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಮರೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts