More

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರೊನಾ 2ನೇ ಡೋಸ್ ವಿತರಣೆ ಕಸರತ್ತು ; ಶೇ.64.9 ಸಾಧನೆ

    | ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

    ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕರೊನಾ ವ್ಯಾಕ್ಸಿನ್ ಮೊದಲ ಡೋಸ್ ವಿತರಣೆಯಲ್ಲಿ ಶೇ.88.9 ಸಾಧನೆ ಮಾಡಿದ ಜಿಲ್ಲಾಡಳಿತ ಎರಡನೇ ಡೋಸ್ ವಿತರಿಸುವಲ್ಲಿ ಏದುಸಿರು ಬಿಡುತ್ತಿದೆ. ಲಾಕ್‌ಡೌನ್ ತೆರವು ಬಳಿಕ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಇದುವರೆಗೆ ಶೇ.64.9 ಮಂದಿಯಷ್ಟೇ ಎರಡನೇ ಡೋಸ್ ಪಡೆದಿದ್ದು, ಸಾರ್ವಜನಿಕರ ಈ ನಿರ್ಲಕ್ಷ್ಯ ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.

    ಕರೊನಾ ಹೊಸ ಪ್ರಭೇದ ಒಮಿಕ್ರಾನ್ ಸೋಂಕು ತಡೆಗೆ ಸರ್ಕಾರದ ಮಾರ್ಗಸೂಲ್ಲಿಚಿ ಪಾಲನೆ ಜತೆಗೆ ಜಿಲ್ಲಾಡಳಿತ ಕರೊನಾ ವ್ಯಾಕ್ಸಿನ್ ವಿತರಣೆ ಕಾರ್ಯ ಚುರುಕುಗೊಳಿಸಿದೆ. ಅದರಲ್ಲೂ ಎರಡನೇ ಡೋಸ್ ವಿತರಣೆಗೆ ಆದ್ಯತೆ ನೀಡಿದ್ದು, ಪ್ರತಿ ಬುಧವಾರದಿಂದ ಶನಿವಾರದವರೆಗೆ ನಾಲ್ಕೂ ದಿನ ವಿಶೇಷ ಅಭಿಯಾನ ಮಾದರಿಯಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಶತಾಯಗತಾಯ ನಿಗದಿತ ಗುರಿ ಮುಟ್ಟಲು ಕಸರತ್ತು ಆರಂಭಿಸಿರುವ ಜಿಲ್ಲಾಡಳಿತ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕ್ಯಾಂಪ್ ಆಯೋಜಿಸಿ, ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಲವು ಗ್ರಾಮಗಳಲ್ಲಿ ಎರಡನೇ ಡೋಸ್ ಪಡೆಯಲು ಜನ ಹಿಂದೇಟು ಹಾಕುತ್ತಿದ್ದು, ವೈದ್ಯರ ತಂಡ ಸಾಕಷ್ಟು ಕಸರತ್ತು ನಡೆಸಿ ಲಸಿಕೆ ನೀಡುವಂತಾಗಿದೆ.

    ಎರಡೂ ಬಗೆಯ ವ್ಯಾಕ್ಸಿನ್ ವಿತರಣೆ: 18 ರಿಂದ 44 ವರ್ಷ ವಯೋಮಿತಿಯವರಿಗೆ 4,32,219 ಮೊದಲ ಡೋಸ್ ಹಾಕಲಾಗಿದೆ. 3,04,757 ಮಂದಿ 2ನೇ ಡೋಸ್ ಪಡೆದಿದ್ದಾರೆ. 45 ರಿಂದ 59 ವರ್ಷದ 1,66,898 ಮಂದಿ ಮೊದಲ, 1,25,529 ಮಂದಿ 2ನೇ ಡೋಸ್ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 1,00,358 ಮಂದಿ ಮೊದಲ ಡೋಸ್ ಹಾಗೂ 74,222 ಎರಡನೇ ಡೋಸ್ ಪಡೆದಿದ್ದಾರೆ. ಇದುವರೆಗೆ ಜಿಲ್ಲೆಯ ನಾಲ್ಕೂ ತಾಲೂಕು ಸೇರಿ 7,28,288 ಮಂದಿ ಮೊದಲ ಡೋಸ್, 5,31,371 ಜನರು ಎರಡನೇ ಡೋಸ್ ಪಡೆದಿದ್ದಾರೆ. ಶೇ.88.9 ಮೊದಲ ಡೋಸ್ ಹಾಗೂ 64.9 ಎರಡನೇ ಡೋಸ್ ಲಸಿಕೆ ಹಾಕುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    41 ಸಕ್ರಿಯ ಪ್ರಕರಣ: ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಇದುವರೆಗೆ 62,103 ಮಂದಿಯಲ್ಲಿ ಕರೊನಾ ಸೋಂಕು ದೃಡಪಟ್ಟಿದ್ದು, ಇದರಲ್ಲಿ 2054 ಮಂದಿ ಇತರೆ ಜಿಲ್ಲೆ ಹಾಗೂ ಹೊರರಾಜ್ಯದವರರಾಗಿದ್ದಾರೆ. 60,049 ಮಂದಿ ಜಿಲ್ಲೆ ನಿವಾಸಿಗಳದ್ದಾಗಿದೆ. 61,172 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 41 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 890 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

    ಕರೊನಾ ಹೊಸ ಪ್ರಭೇದವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಜಿಲ್ಲೆಯಾದ್ಯಂತ ಕರೊನಾ ವ್ಯಾಕ್ಸಿನ್ ವಿತರಣೆ ಚುರುಕುಗೊಳಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಕೆಲವೊಂದು ನಿಯಮ ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆಯುವ ಮೂಲಕ ಸೋಂಕು ಹತೋಟಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು.
    ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ

    ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಹಮ್ಮಿಕೊಂಡ ವಿಶೇಷ ಅಭಿಯಾನ ಯಶ ಕಂಡಿದ್ದು, ಇದರಲ್ಲಿ ಶೇ.88.9 ಮೊದಲ ಡೋಸ್ ವಿತರಣೆಯಾಗಿದೆ, ಶೇ.64.9 ಎರಡನೇ ಡೋಸ್ ವಿತರಿಸಲಾಗಿದ್ದು. ಪ್ರಸ್ತುತ ಎರಡನೇ ಡೋಸ್ ವಿತರಣೆಗೆ ಆದ್ಯತೆ ನೀಡಲಾಗಿದೆ. ಬುಧವಾರದಿಂದ ಶನಿವಾರದವರೆಗೆ ನಾಲ್ಕೂ ದಿನ ಅಭಿಯಾನ ಮಾದರಿಯಲ್ಲಿ ವಾಕ್ಸಿನ್ ವಿತರಣೆ ಹಮ್ಮಿಕೊಳ್ಳಲಾಗಿದೆ.
    ಡಾ.ಶ್ರೀನಿವಾಸ್, ವ್ಯಾಕ್ಸಿನ್ ಸಂಯೋಜಕರು, ಬೆಂ.ಗ್ರಾಮಾಂತರ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts