More

    ಹಾವೇರಿ ಜಿಲ್ಲೆಯಲ್ಲಿ ಲಸಿಕಾಕರಣ ಶೇ. 39 ಮಾತ್ರ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಲಸಿಕಾಕರಣದಲ್ಲಿ ಸಾಧನೆ ಮಾತ್ರ ಶೇ. 39ರಷ್ಟಾಗಿದೆ.

    ಜಿಲ್ಲೆಯಲ್ಲಿ ಒಟ್ಟು 4,53,587 ಜನರಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿತ್ತು. ಈವರೆಗೆ ಮೊದಲ ಡೋಸ್ ಪಡೆದವರ ಸಂಖ್ಯೆ 1,74,978ರಷ್ಟು ಮಾತ್ರ. ಇದರಲ್ಲಿ 2ನೇ ಡೋಸ್ ಲಸಿಕೆಯನ್ನು 34,114 ಜನರು ಹಾಕಿಸಿಕೊಂಡಿದ್ದು, ಸಾಧನೆ ಶೇ. 19ರಷ್ಟಿದೆ.

    ಕೋವ್ಯಾಕ್ಸಿನ್​ಗಿಂತ ಕೋವಿಶೀಲ್ಡ್ ಲಸಿಕೆಯನ್ನು ಹೆಚ್ಚು ಜನರು ಪಡೆದಿದ್ದಾರೆ. ಒಟ್ಟು 1,82,180 ಜನರು ಕೋವಿಶೀಲ್ಡ್, 23,430 ಜನ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ.

    ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ 10,664 ವಾರಿಯರ್ಸ್​ಗೆ ಲಸಿಕೆ ನೀಡಲು ಆದ್ಯತೆ ನೀಡಲಾಗಿತ್ತು. ಇದರಲ್ಲಿ 8,515 ಜನರು ಲಸಿಕೆ ಪಡೆದಿದ್ದು, ಶೇ. 80ರಷ್ಟು ಸಾಧನೆಯಾಗಿದೆ. 2ನೇ ಹಂತದಲ್ಲಿ ಫ್ರಂಟ್​ಲೈನ್ ವಾರಿಯರ್ಸ್​ಗೆ ಲಸಿಕೆ ನೀಡಲು ಆರಂಭಿಸಲಾಯಿತು. ಆಗ ಲಸಿಕೆ ಪಡೆಯಲು ಬಹಳಷ್ಟು ಜನರು ಮುಂದೆ ಬಂದಿರಲಿಲ್ಲ. ಹೀಗಾಗಿ, ಈವರೆಗೆ ಶೇ. 73ರಷ್ಟು ಮಾತ್ರ ಸಾಧನೆಯಾಗಿದೆ.

    ನಂತರ 60 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣ ಆರಂಭವಾಯಿತು. 1,35,145 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಕೇವಲ 70,861 ಜನರು ಲಸಿಕೆ ಪಡೆದಿದ್ದು, ಶೇ. 52ರಷ್ಟು ಸಾಧನೆಯಾಗಿದೆ. ನಂತರ 45 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣ ಆರಂಭಗೊಂಡಿತು. 2,80,280 ಜನರು ಲಸಿಕೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈವರೆಗೆ ಇದರಲ್ಲಿ ಶೇ. 25ರಷ್ಟು ಮಾತ್ರ ಸಾಧನೆಯಾಗಿದೆ. ಕೊನೆ ಹಂತದಲ್ಲಿ 18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಹಾಕಲು ಆರಂಭಿಸಿದಾಗ 17,739 ಜನರು ನೋಂದಾಯಿಸಿಕೊಂಡಿದ್ದರು. ಅವರೆಲ್ಲರಿಗೂ ಲಸಿಕೆ ಹಾಕಲಾಗಿದೆ. ಇದೀಗ ಅದು ಸ್ಥಗಿತಗೊಂಡಿದೆ.

    ವ್ಯಾಕ್ಸಿನ್ ಕೊರತೆ: ಕರೊನಾ 2ನೇ ಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇ ಜನರು ಲಸಿಕೆ ಪಡೆಯಲು ಮುಗಿಬಿದ್ದರು. ಹೀಗಾಗಿ, ಲಸಿಕೆ ಅಭಾವ ಆರಂಭವಾಯಿತು. ಇದೀಗ ದಿನಕ್ಕೆ 3ರಿಂದ ಮೂರೂವರೆ ಸಾವಿರ ಜನರಿಗೆ ಮಾತ್ರ ಲಸಿಕೆ ಹಾಕಲಾಗುತ್ತಿದೆ.

    ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ನೀಡುತ್ತಿಲ್ಲ. 18ರಿಂದ 45 ವಯಸ್ಸಿನವರು ಲಸಿಕೆ ಪಡೆಯಲು ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ಆದರೆ, ಸದ್ಯ ಲಸಿಕೆ ನೀಡುತ್ತಿಲ್ಲ. ರಾಜ್ಯ ಸರ್ಕಾರ ಗುರುತಿಸಿದ ಕೋವಿಡ್ ಫ್ರಂಟ್​ಲೈನ್ ವಾರಿಯರ್ಸ್​ಗೆ ಮಾತ್ರ ನೀಡಲಾಗುತ್ತಿದೆ. ಕೋವಿಡ್ ಲಸಿಕೆ ಸಂಗ್ರಹಕ್ಕೆ ಜಿಲ್ಲೆಯಲ್ಲಿ 92 ಕೋಲ್ಡ್ ಸ್ಟೋರೇಜ್(ಐಎಲ್​ಆರ್)ಗಳನ್ನು ಗುರುತಿಸಲಾಗಿದೆ.

    | ಡಾ. ಎಂ. ಜಯಾನಂದ, ಜಿಲ್ಲಾ ಆರ್​ಸಿಎಚ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts