More

    ಗೋರಖಪುರ ಹಿಂದಿನ ಲೆಕ್ಕಾಚಾರ; ಬ್ರಾಹ್ಮಣ, ಠಾಕೂರ್ ಮತಗಳ ಮೇಲೆ ಬಿಜೆಪಿ ಕಣ್ಣು

    |ರಾಘವ ಶರ್ಮ ನಿಡ್ಲೆ, ನವದೆಹಲಿ

    ಉತ್ತರ ಪ್ರದೇಶ ಚುನಾವಣಾ ಕಣ ರಂಗೇರುತ್ತಿದೆ. ಅಯೋಧ್ಯೆ ಅಥವಾ ಮಥುರಾದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದ್ದ ಸಿಎಂ ಯೋಗಿ ಆದಿತ್ಯನಾಥ ಅಚ್ಚರಿಯೆಂಬಂತೆ ಗೋರಖಪುರದಿಂದ ಅಖಾಡದಲ್ಲಿದ್ದಾರೆ. ಇಲ್ಲಿಂದ ಸಂಸದರಾಗಿ ಆಯ್ಕೆಯಾಗುತ್ತಿದ್ದ ಯೋಗಿ ಈ ಬಾರಿ ದಲಿತ ಹೋರಾಟಗಾರ, ಆಜಾದ್ ಸಮಾಜಪಾರ್ಟಿ ಮುಖಂಡ ಚಂದ್ರಶೇಖರ್ ಆಜಾದ್​ರನ್ನು ಎದುರಿಸಲಿದ್ದಾರೆ. ಹೀಗಾಗಿ, ಗೋರಖಪುರ ನಗರ ಕ್ಷೇತ್ರ ದೇಶದ ಗಮನಸೆಳೆಯುತ್ತಿದೆ.

    2014ರಿಂದ ಆರಂಭಗೊಂಡು ಉತ್ತರ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಲ್ಲದೆ, 2017ರಲ್ಲಿ ಯೋಗಿ ಸಿಎಂ ಆದ ಬಳಿಕ ಇದು ಮತ್ತಷ್ಟು ವೇಗ ಪಡೆದುಕೊಂಡಿತು. ಸಿಎಂ ಕುರಿತ ಸಾರ್ವಜನಿಕ ಗ್ರಹಿಕೆ ಮತ್ತು ಅಭಿಪ್ರಾಯಗಳು ದೃಢವಾಗಿದ್ದರೂ, ಕೆಲವೊಂದಿಷ್ಟು ಕಾರ್ಯಕರ್ತ ಮತ್ತು ಶಾಸಕ ವರ್ಗದಲ್ಲಿ ಯೋಗಿ ಬಗ್ಗೆ ಅಸಮಾಧಾನಗಳಿರುವುದು ಗುಟ್ಟಾಗಿ ಉಳಿದಿಲ್ಲ. ಮುಖ್ಯವಾಗಿ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ ಎಂಬ ದೂರುಗಳು ದಿಲ್ಲಿ ಕೇಂದ್ರ ಕಚೇರಿಗೂ ತಲುಪಿದ್ದಿದೆ. ಠಾಕೂರ್ ಸಮುದಾಯಕ್ಕೆ ಪ್ರಾಶಸ್ಱ ನೀಡಿ ಇತರೆ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದರೆಂಬ ಆರೋಪವನ್ನು ಯೋಗಿ ಎದುರಿಸುತ್ತಿದ್ದಾರೆ.

    ಏಳೆಂಟು ತಿಂಗಳ ಹಿಂದೆ ಸಿಎಂ ಬದಲಾವಣೆ ಬಗ್ಗೆಯೂ ರಾಜ್ಯ ಬಿಜೆಪಿಯಲ್ಲಿ ವ್ಯಾಪಕ ಚರ್ಚೆಯಾಗಿದ್ದಲ್ಲದೆ, ನಂತರ ದಿಲ್ಲಿ ನಾಯಕರು ಲಖನೌಗೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಯೋಗಿ ವಿರುದ್ಧದ ಬ್ರಾಹ್ಮಣರ ಆಕ್ರೋಶ ತಣಿಸಲೆಂದೇ ಪಿಎಂ ಮೋದಿ ತಮ್ಮ ಆಪ್ತ, ಬ್ರಾಹ್ಮಣ ಸಮುದಾಯದ ಅರವಿಂದ ಕುಮಾರ್ ಶರ್ಮರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿ ಡಿಸಿಎಂ ಅಥವಾ ಸಚಿವರನ್ನಾಗಿ ಮಾಡಬೇಕೆಂದು ಉದ್ದೇಶಿಸಿದ್ದರು. ಆದರೆ, ಅಂತಿಮವಾಗಿ ಅದು ಸಾಧ್ಯವಾಗಲಿಲ್ಲ ಮತ್ತು ಶರ್ಮರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ವಾರಾಣಸಿ ಕ್ಷೇತ್ರದ ಉಸ್ತುವಾರಿ ನೀಡಲಾಯಿತು. ಹಾಲಿ ಚುನಾವಣೆಯಲ್ಲಿ ಶರ್ಮ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಿಲ್ಲ. ಲಖನೌ ಮೇಲೆ ಕಣ್ಣಿದೆ ಎನ್ನಲಾಗುತ್ತಿದೆ.

    ಈ ನಡುವೆ, ಅಯೋಧ್ಯೆ ಅಥವಾ ಮಥುರಾ ಕ್ಷೇತ್ರಗಳಿಂದ ಯೋಗಿ ಸ್ಪರ್ಧೆಗೆ ಹೈಕಮಾಂಡ್ ಒಪ್ಪಲಿಲ್ಲವೇ ಎನ್ನುವುದು ಅನೇಕರ ಪ್ರಶ್ನೆ. ಒಂದು ವೇಳೆ, ಈ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲ್ಲುತ್ತಿದ್ದರೆ ಯೋಗಿ ದೇಶಾದ್ಯಂತ ಹಿಂದುತ್ವದ ಐಕಾನ್ ಆಗಿಬಿಡುವ ಸಾಧ್ಯತೆಗಳಿದ್ದವು. ಯೋಗಿ ಅವರಲ್ಲಿ ಈ ಮಹತ್ವಾಕಾಂಕ್ಷೆಯಿತ್ತಾದರೂ ದಿಲ್ಲಿ ನಾಯಕರು ಬೇರೆಯದೇ ರೀತಿಯಲ್ಲಿ ಯೋಚಿಸಿದ್ದರು. ಮೇಲಾಗಿ, ಅಯೋಧ್ಯೆಯಲ್ಲಿ ಬ್ರಾಹ್ಮಣ ಮತಗಳೂ ದೊಡ್ಡ ಸಂಖ್ಯೆಯಲ್ಲಿರುವುದರಿಂದ ಠಾಕೂರ್ ಸಮುದಾಯದ ಯೋಗಿಯನ್ನು ಜನರು ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸಬಹುದೇ ಎಂಬ ಪ್ರಶ್ನೆಗಳೂ ಎದ್ದಿದ್ದವು. ‘ಬಿಜೆಪಿಯ ದಿಲ್ಲಿ ನಾಯಕರು ಅಯೋಧ್ಯೆಯನ್ನು ಹಿಂದುತ್ವ ರಾಜಕೀಯದ ಕೇಂದ್ರ ತಾಣವನ್ನಾಗಿ ನೋಡುತ್ತಾರೆಯೇ ವಿನಃ ಅದನ್ನು ಓರ್ವ ವ್ಯಕ್ತಿಯ ಪ್ರಾಬಲ್ಯ, ಹಿಡಿತ ಸಾಧಿಸಲು ಬಿಡಲೊಪ್ಪರು. 2014 ಮತ್ತು 2019ರಲ್ಲಿ ವಾರಾಣಸಿಯಿಂದ ಮೋದಿ ಸ್ಪರ್ಧೆಯಿಂದ ಇಡೀ ದೇಶದ ಹಿಂದು ಮತಬ್ಯಾಂಕ್ ಕ್ರೋಡೀಕರಣಗೊಂಡಿತ್ತು. ಆದರೆ, ಯೋಗಿ ಬಗ್ಗೆ ಸಾರ್ವಜನಿಕ ಗ್ರಹಿಕೆ ಗಟ್ಟಿಯಾಗಿದ್ದರೂ, ಪಕ್ಷದ ಇತರೆ ಸಮುದಾಯದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ’ ಎಂದು ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.

    60ರ ದಶಕದಿಂದ ಜನಸಂಘ ಹಾಗೂ ನಂತರದಲ್ಲಿ ಬಿಜೆಪಿಯನ್ನು ಆಯ್ಕೆ ಮಾಡುತ್ತಿರುವ ಗೋರಖಪುರ ಕ್ಷೇತ್ರದ ಮತದಾರರು ಗೋರಖನಾಥ ಮಠದ ಸ್ವಾಮೀಜಿ ಹಾಗೂ ನಾಥ ಪಂಥ ಪ್ರತಿನಿಧಿಸುವ ಯೋಗಿಯವರನ್ನು ಆಯ್ಕೆ ಮಾಡುವ ಸಾಧ್ಯತೆಗಳೇ ಹೆಚ್ಚಿದೆ. ಹಾಗಿದ್ದರೂ, ಅಯೋಧ್ಯೆ ಅಥವಾ ಮಥುರಾ ಬದಲಿಗೆ ಗೋರಖಪುರಕ್ಕೆ ಅವರು ವಾಪಸಾಗಿದ್ದು ಹಲವರ ಹುಬ್ಬೇರಿಸಿದ್ದು ಸುಳ್ಳಲ್ಲ.

    ಸಚಿವೆ ಶೋಭಾಗೆ ಹೊಸ ಸವಾಲು: ದಕ್ಷಿಣ ಭಾರತದ ಯಾವುದೇ ರಾಜಕಾರಣಿಗಿರಲಿ, ಉತ್ತರ ಪ್ರದೇಶ ದಂತಹ ಅತಿ ಹೆಚ್ಚು ಜನಸಂಖ್ಯೆ ಹಾಗೂ ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದ ಸಹ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುವುದು ಹೊಸ ಸವಾಲೇ ಸರಿ. ರಾಜಕೀಯ ಭೌಗೋಳಿಕತೆ, ಸ್ಥಳೀಯ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಕೆಲಸ ಮಾಡಬೇಕಾಗುತ್ತದೆ. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅವಧ್ ಪ್ರದೇಶ ಹಾಗೂ ಸುತ್ತಮುತ್ತಲಿನ 82 ಕ್ಷೇತ್ರಗಳ ಉಸ್ತುವಾರಿ ನೀಡಲಾಗಿದ್ದು, ಕಳೆದ ಏಳೆಂಟು ತಿಂಗಳಿಂದ ಅವರು ನಿರಂತರ ಪ್ರವಾಸ ಕೈಗೊಂಡು ಕಾರ್ಯಕರ್ತರು, ಸಾರ್ವಜನಿಕರೊಂದಿಗೆ ಹತ್ತು ಹಲವು ಸಭೆಗಳನ್ನು ನಡೆಸಿದ್ದಾರೆ. ಲಖನೌ, ಅಯೋಧ್ಯೆ, ಬಲರಾಮಪುರ, ಉನ್ನಾವ್, ಬಾರಬಂಕಿ, ಸೀತಾಪುರ, ರಾಯ್ಬರೇಲಿ ಸೇರಿ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದಾರೆ.

    ‘ನನ್ನ ರಾಜಕೀಯ ಜೀವನದಲ್ಲಿ ಇದು ಹೊಸ ಅನುಭವ. ಕರ್ನಾಟಕ ಮತ್ತು ಇಲ್ಲಿನ ರಾಜಕಾರಣಕ್ಕೆ ಬಹಳ ವ್ಯತ್ಯಾಸವಿದೆ. ಎಲ್ಲಾ 82 ಕ್ಷೇತ್ರಗಳಿಗೆ ಭೇಟಿ ನೀಡಿ ಬಂದಿದ್ದೇನೆ. ಲಖನೌದ ಗೋಮತಿ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಚುನಾವಣೆ ಮುಗಿಯುವ ತನಕ ಓಡಾಟ ನಿರಂತರ. ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಭಾಗಿಯಾಗಿದ್ದು ಕೂಡ ಹೊಸ ಅನುಭವ. ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಲಾಭಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಹುಪಾಲು ಯೋಜನೆಗಳನ್ನು ಜನರಿಗೆ ತಲುಪಿಸಿರುವುದೇ ನಮ್ಮ ಪ್ಲಸ್ ಪಾಯಿಂಟ್’ ಎನ್ನುತ್ತಾರೆ ಶೋಭಾ.

    ಲಖಿಂಪುರ ಗೆಲ್ಲುತ್ತೇವೆ: ರೈತ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಲಖಿಂಪುರ ಖೇರಿ ಕ್ಷೇತ್ರಕ್ಕೂ ಶೋಭಾ ಭೇಟಿ ನೀಡಿದ್ದು, ಪ್ರಚಾರ ನಡೆಸಿದ್ದಾರೆ. 2017ರಲ್ಲಿ ಬಿಜೆಪಿಯ ಯೋಗೇಶ್ ಶರ್ಮ ಸಮಾಜವಾದಿ ಪಕ್ಷದ ಉತ್ಕರ್ಶ್ ವರ್ಮರನ್ನು ಸೋಲಿಸಿದ್ದರು. ‘‘ಹಿಂಸಾ ಚಾರ ಘಟನೆಯಿಂದ ಪಕ್ಷಕ್ಕೆ ಹಿನ್ನಡೆಯಾಗದು. ಯೋಗೇಶ್ ವರ್ಮ ವೈಯಕ್ತಿಕ ವರ್ಚಸ್ಸು ದೊಡ್ಡ ಪ್ರಮಾಣದಲ್ಲಿದ್ದು, ಪಕ್ಷವನ್ನು ರಕ್ಷಿಸಲಿದೆ’ ಎಂದವರು ಭರವಸೆ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿಗೆ ಮನ್ನಣೆ: ಚುಣಾವಣೆ ನಡೆಯಲಿರುವ 5 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪಂಜಾಬ್​ನಲ್ಲಿ ಮಾತ್ರ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಉತ್ತರ ಪ್ರದೇಶದಲ್ಲಿ ಶೇ. 75, ಪಂಜಾಬ್​ನಲ್ಲಿ ಶೇ. 37, ಉತ್ತರಾಖಂಡದಲ್ಲಿ ಶೇ. 59, ಮಣಿಪುರದಲ್ಲಿ ಶೇ. 73, ಗೋವಾದಲ್ಲಿ ಶೇ. 67 ಜನರು ಮೋದಿ ನಾಯಕತ್ವವನ್ನು ಮೆಚ್ಚಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

    ರಾಜ್ಯದಲ್ಲಿ ಮಿತಿ ಮೀರಿದ ಕರೊನಾ ಹಾವಳಿ; ಇಂದು ಕೂಡ ಸೋಂಕಿತರು ಮತ್ತು ಮೃತರ ಸಂಖ್ಯೆಯಲ್ಲಿ ಹೆಚ್ಚಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts