More

    ದೀಪಾವಳಿ ದೀವಟಿಗೆ ಉತ್ಸವ ಸಂಪನ್ನ

    ಬೆಟ್ಟದಪುರ: ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೀಪಾವಳಿ ದೀವಟಿಗೆ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

    ದೇವಸ್ಥಾನದಲ್ಲಿನ ಬೆಳ್ಳಿ ಬಸಪ್ಪ, ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಉತ್ಸವ ಮೂರ್ತಿಗಳನ್ನು ಸೋಮವಾರ ರಾತ್ರಿ ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಮಂಗಳವಾರ ಮುಂಜಾನೆ ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು.

    ಗ್ರಾಮದ ಮುಖ್ಯ ಬೀದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಗಳನ್ನು ಮಲ್ಲಿಕಾರ್ಜುನಸ್ವಾಮಿ ಹಾಗೂ ಪವಾಡ ಬಸವೇಶ್ವರ ದೇವಾಲಯದಲ್ಲಿ ಇರಿಸಿ, ಪೂಜೆ ಸಲ್ಲಿಸಲಾಯಿತು. ನಂತರ ಪಂಜಿನೊಂದಿಗೆ ಆರಂಭಗೊಂಡ ದೀಪಾವಳಿ ದೀವಟಿಗೆ ಉತ್ಸವ ಬೆಟ್ಟದಪುರ, ಬೆಟ್ಟದತುಂಗ, ಡಿ.ಜಿ.ಕೊಪ್ಪಲು, ಬಾರಸೆ, ಕುಡುಕೂರು, ಕೂರಗಲ್ಲು ಸೇರಿದಂತೆ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ಸಾಗಿದ ಬಳಿಕ ಬೆಟ್ಟದಪುರಕ್ಕೆ ಕರೆತರಲಾಯಿತು.

    ಕುಡುಕೂರು ಜಾತ್ರೆ ವಿಡಿಯೋ ವೈರಲ್: ಸ್ವಾಮಿಗೆ ಹರಕೆ ಹೊತ್ತ ಭಕ್ತರು ತಮ್ಮ ಮನೆ ಮುಂದೆ ಹಸಿರು ಚಪ್ಪರ ಹಾಕಿ ಉತ್ಸವ ಮೂರ್ತಿಗಳನ್ನು ಆರಾಧಿಸಿದರು. ದೀವಟಿಗೆ ಉತ್ಸವ ಕುಡುಕೂರು ಗ್ರಾಮಕ್ಕೆ ಬಂದಾಗ ಪಂಜಿನ ಮೆರವಣಿಗೆ ಎಲ್ಲರ ಮನಸೆಳೆಯಿತು. ಇದೇ ವೇಳೆ ಗ್ರಾಮದ ವಿವಿಧ ಸಂಘ-ಸಂಸ್ಥೆಗಳು ಅನ್ನಸಂತರ್ಪಣೆ ಮಾಡಿತು.

    ಅರಸು ಮನೆಗೆ ಭೇಟಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಹುಟ್ಟೂರು ಬೆಟ್ಟದತುಂಗ ಗ್ರಾಮಕ್ಕೆ ಆಗಮಿಸಿದ್ದ ಭಕ್ತರು ಅರಸು ಅವರ ಮನೆಗೆ ಭೇಟಿ ನೀಡಿ ವಸ್ತುಗಳನ್ನು ನೋಡಿದರು. ಕೆಲವರು ಮನೆ ಮುಂದೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.

    3108 ಮೆಟ್ಟಿಲ ಬೆಟ್ಟಕ್ಕೆ ಭಕ್ತರ ದಂಡು: ಬೆಟ್ಟದ 3108 ಮೆಟ್ಟಿಲುಗಳನ್ನು ಭಕ್ತರು ಹತ್ತಿ ಸಿಡಿಲು ಮಲ್ಲಿಕಾರ್ಜುನಸ್ವಾಮಿಗೆ ಪೂಜೆ ಸಲ್ಲಿಸಿದರು. ಹೆಚ್ಚು ಜನರು ಬೆಟ್ಟ ಹತ್ತಿದ ಪರಿಣಾಮ ಬೆಟ್ಟದ ಮಧ್ಯಭಾಗದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts