More

    ದಲಿತರ ಹಣ ಗ್ಯಾರಂಟಿ ಯೋಜನೆಗೆ ಬಳಕೆ ತಡೆಯಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

    ಬೆಂಗಳೂರು:
    ದಲಿತರಿಗೆ ಮೀಸಲಾಗಿದ್ದ 11 ಸಾವಿರ ಕೋಟಿ ರೂ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ಶುಕ್ರವಾರ ಬಿಜೆಪಿ ಎಸ್ಸಿ ಮೋರ್ಚಾ ಪ್ರತಿಭಟನೆ ನಡೆಸಿತು.
    ದಲಿತರ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಬಳಸಿದ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ದಲಿತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ ಖರ್ಗೆ ಅವರು ವಿರುದ್ದವೂ ೋಷಣೆಗಳನ್ನು ಮೊಳಗಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದರು.
    ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚುನಾವಣೆ ಪೂರ್ವದಲ್ಲಿ ಗ್ಯಾರಂಟಿಗಳಿಗೆ ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣವನ್ನು ಗ್ಯಾರಂಟಿಗಾಗಿ ಬಳಸುವುದಾಗಿ ತಿಳಿಸಬೇಕಿತ್ತು. ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಅದನ್ನು ಮಾಡದೆ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.
    ಈ ಸರ್ಕಾರಕ್ಕೆ 52 ಸಾವಿರ ಕೋಟಿ ರೂ ಹೊಂದಿಸಲಾಗುತ್ತಿಲ್ಲ. 12 ಸಾವಿರ ಕೋಟಿ ಕೊರತೆ ಬಜೆಟ್ ಮಂಡಿಸಿದ್ದು, ದಲಿತರ ಕಲ್ಯಾಣಕ್ಕೆ ಮೀಸಲಾಗಿದ್ದ 11 ಸಾವಿರ ಕೋಟಿ ಹಣವನ್ನು ಬಳಸಿಕೊಳ್ಳುತ್ತಿರುವುದು ಅನ್ಯಾಯ. ಅಲ್ಲದೆ, ಗೃಹಿಣಿಯರಿಗೆ 2 ಸಾವಿರ ರೂ ಕೊಡಲು 5,500 ಕೋಟಿಯನ್ನು ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣವನ್ನೆ ಕೊಡಲಾಗುತ್ತಿದೆ ಎಂದು ದೂರಿದರು.
    ಹಿಂದೆಯೂ ಕಾಂಗ್ರೆಸ್ ಸರ್ಕಾರ 7 ಡಿ ಮೂಲಕ ಬೇರೆ ಉದ್ದೇಶಕ್ಕೆ ಹಣ ಬಳಸಿತ್ತು.
    ನಮ್ಮ ಸರ್ಕಾರ 5 ಮೆಗಾ ಹಾಸ್ಟೆಲ್ ನಿರ್ಮಿಸಿದೆ. ಬಾಬು ಜಗಜೀವನ್‌ರಾಂ ಹೆಸರಿನಲ್ಲಿ ರೂಪಿಸಿದ್ದ ಯೋಜನೆಗಳನ್ನು ಈ ಸರ್ಕಾರ ಗಾಳಿಗೆ ತೂರಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡುವ ಯೋಜನೆ ಜಾರಿ ವಿಚಾರದಲ್ಲೂ ಅನ್ಯಾಯ ಆಗಿದೆ ಎಂದರು.
    ಗ್ಯಾರಂಟಿ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಲಾಗುತ್ತಿದೆ. ಯುವಕರು, ಮಹಿಳೆಯರಿಗೆ ಮೋಸ ಮಾಡಿದ್ದು, ರೈತರನ್ನು ತುಳಿದು ಹಾಕಿದ್ದಾರೆ. ರೈತ ವಿದ್ಯಾನಿಧಿ ಬಂದ್ ಆಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ನೀಡಲಾಗುತ್ತಿದ್ದ 4 ಸಾವಿರ ಹಣ ರದ್ದಾಗಿದೆ ಎಂದರು.
    ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ,
    ಎಸ್‌ಸಿಎಸ್‌ಪಿ ಟಿಎಸ್‌ಪಿ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ನೀಡಲು ವರ್ಗಾಯಿಸಿದ್ದು ಖಂಡನೀಯ. ಈ ಹಣವನ್ನು ಗ್ಯಾರಂಟಿಗೆ ಕೊಡುವುದಾಗಿ ಸಚಿವರಾದ ಮಹದೇವಪ್ಪ, ಪ್ರಿಯಾಂಕ ಖರ್ಗೆ ಅವರ ಉಪಸ್ಥಿತಿಯಲ್ಲೇ ಮುಖ್ಯಮಂತ್ರಿಗಳು ಪ್ರಕಟಿಸಿ, ಇದೀಗ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವ ಸಿಎಂ ದಲಿತ ವಿರೋಧಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ದಲಿತರಿಗೆ ವಂಚನೆ ಮಾಡುವುದು, ನಾಟಕಗಳನ್ನು ಮಾಡುವುದನ್ನು ಬಿಡಲಿ. ನಮ್ಮ ದುಡ್ಡಿಗೆ ಕೈ ಹಾಕದಿರಲಿ ಎಂದು ಎಚ್ಚರಿಸಿದರು.
    ದಲಿತರಿಗೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ, ಸಚಿವರು ರಾಜೀನಾಮೆ ಕೊಟ್ಟು ಸರ್ಕಾರದಿಂದ ಹೊರಕ್ಕೆ ಬರಲಿ ಎಂದು ಅವರು ಆಗ್ರಹಿಸಿದರು.
    ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜನಪ್ರತಿನಿಧಿಗಳು, ಎಸ್‌ಸಿ ಮೋರ್ಚಾ ಪದಾಧಿಕಾರಿಗಳು, ಸದಸ್ಯರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts