More

    ತ್ರಾಣವಿಲ್ಲದ ತಂಗುದಾಣಗಳು ಏಕಯ್ಯಾ?

    ವಿಕ್ರಮ ನಾಡಿಗೇರ ಧಾರವಾಡ
    ನಗರದ ಜನರು ತಮ್ಮ ಬಡಾವಣೆಗಳಿಂದ ಮಾರುಕಟ್ಟೆ, ಇತರ ಸ್ಥಳಗಳಿಗೆ ಬಸ್ ಮೂಲಕ ತೆರಳುವಾಗ ಬಿಸಿಲು, ಮಳೆಯಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಬಡಾವಣೆಗಳಲ್ಲಿ ಬಸ್ ತಂಗುದಾಣ (ಶೆಲ್ಟರ್) ನಿರ್ವಿುಸಲಾಗುತ್ತದೆ. ಆದರೆ, ನಗರದ ಬಹುತೇಕ ಕಡೆಗಳಲ್ಲಿ ತಂಗುದಾಣಗಳೇ ಇಲ್ಲ. ಕೆಲವೆಡೆ ಇದ್ದರೂ ಉಪಯೋಗಕ್ಕೆ ಬಾರದಂತಾಗಿವೆ.
    ಪ್ರಮುಖ ಪ್ರದೇಶಗಳಲ್ಲಿ ನೂತನ ತಂಗುದಾಣಗಳನ್ನು ನಿರ್ವಿುಸಿ ಪ್ರಯಾಣಿಕರಿಗೆ ಅನುಕೂಲ ಮಾಡಿದ್ದರೆ, ಕೆಲವೆಡೆ ಹೊಸ ಶೆಲ್ಟರ್ ಇರಲಿ, ಇರುವುದನ್ನೇ ನಿರ್ವಹಣೆ ಮಾಡದ ಕಾರಣ ಕಸ ತುಂಬಿ ನಿರಾಶ್ರಿತರ ತಾಣಗಳಾಗಿವೆ. ಇನ್ನು ಕೆಲವೆಡೆ ತಂಗುದಾಣಗಳೇ ಇಲ್ಲದೆ ಬಿಸಿಲು, ಮಳೆಯಲ್ಲೇ ಬಸ್​ಗೆ ಕಾಯುವ ಸ್ಥಿತಿ ಇದೆ. ಬಿಸಿಲಿನ ತಾಪ ದಿನೇದಿನೆ ಏರುತ್ತಿರುವ ಕಾರಣ ಪ್ರಯಾಣಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇ ಬಸ್​ಗೆ ಕಾಯುವಂತಾಗಿದೆ.
    ನಗರದ ಪ್ರಮುಖ ಸ್ಥಳಗಳಾದ ಜುಬಿಲಿ ವೃತ್ತ, ಹಳೇ ಡಿಎಸ್​ಪಿ ವೃತ್ತ, ಕೋರ್ಟ್ ಸರ್ಕಲ್, ಸಪ್ತಾಪುರ ಭಾವಿ, ಶಿವಾಜಿ ವೃತ್ತ ಸೇರಿ ಬಹುತೇಕ ಕಡೆ ತಂಗುದಾಣಗಳೇ ಇಲ್ಲ. ಸಂಪಿಗೆನಗರ, ಶ್ರೀನಗರ, ಸಾಧನಕೇರಿ, ನಾರಾಯಣಪುರ, ತೇಜಸ್ವಿನಗರ, ಇತರ ಕಡೆ ತಂಗುದಾಣಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಕೆಲ ಶೆಲ್ಟರ್​ಗಳ ಮೇಲ್ಛಾವಣಿ ಕಿತ್ತಿದ್ದರೆ, ಮತ್ತೊಂದರಲ್ಲಿ ಕೂಡಲು ಆಸನಗಳಿಲ್ಲ.
    ತಂಗುದಾಣ ನಿರ್ವಿುಸಿ ಅವುಗಳ ಮೇಲೆ ಆಯಾ ಪ್ರದೇಶಗಳ ಹೆಸರು ನಮೂದಿಸಲಾಗುತ್ತದೆ. ಇದು ಪರ ಊರಿನಿಂದ ಬರುವ ಜನರಿಗೆ ಸರಳವಾಗಿ ಸ್ಥಳಗಳ ಗುರುತಿಸಲು ಅನುಕೂಲವಾಗಲಿದೆ. ಆದರೆ, ಇತ್ತೀಚೆಗೆ ನಿರ್ವಿುಸಿದ ತಂಗುದಾಣ ಜಾಹೀರಾತು ಫಲಕಗಳಾಗಿ ಪರಿವರ್ತನೆ ಆಗಿವೆ. ಪಾಲಿಕೆಗೆ ಆದಾಯ ಬರಲಿ ಎಂಬ ಕಾರಣಕ್ಕೆ ಜಾಹೀರಾತು ಫಲಕ ಅಳವಡಿಕೆಗೆ ಅವಕಾಶ ನೀಡುತ್ತಾರೆ. ಆದರೆ ಜಾಹೀರಾತು ಹಾಕುವವರು ಪ್ರದೇಶದ ಹೆಸರೂ ಕಾಣದಂತೆ ಜಾಹೀರಾತು ಹಾಕುತ್ತಿದ್ದಾರೆ. ಆದಾಗ್ಯೂ ಸಂಬಂಧಿಸಿದವರು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ.
    ರಸ್ತೆಯಲ್ಲೇ ವೇಟಿಂಗ್: ಜುಬಿಲಿ ವೃತ್ತದಿಂದ ಪಾವಟೆನಗರ, ಕೃಷಿ ವಿವಿ, ಹೊಸ ಬಸ್ ನಿಲ್ದಾಣ ಸೇರಿ ದಾಂಡೇಲಿ, ಹಳಿಯಾಳ ಇತರ ಪ್ರದೇಶಗಳಿಗೆ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಇಲ್ಲಿ ತಂಗುದಾಣ ಇಲ್ಲದೆ ರಸ್ತೆಯಲ್ಲೇ ಬಸ್ ಹತ್ತಬೇಕಿದೆ. ಇದರಿಂದ ವೃದ್ಧರು, ಅಂಗವಿಕಲರು, ಮಹಿಳೆಯರು ಸಮಸ್ಯೆ ಅನುಭವಿಸುತ್ತಿದ್ದಾರೆ.
    ಇನ್ನಾದರೂ ಪಾಲಿಕೆ ಸೇರಿ ಸಂಬಂಧಿಸಿದ ಅಧಿಕಾರಿಗಳು ತಂಗುದಾಣಗಳನ್ನು ನಿರ್ವಿುಸಿ ನಗರದ ಪ್ರಯಾಣಿಕರಿಗೆ ಸೂಕ್ತ ರಕ್ಷಣೆ ಒದಗಿಸಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.
    ಇವರು ಮಾದರಿ
    ಮಾಳಮಡ್ಡಿ ವನವಾಸಿ ರಾಮಮಂದಿರ ಬಳಿ ತಂಗುದಾಣ ಇಲ್ಲದ್ದನ್ನು ಕಂಡ ವೀರ ಸಾವರಕರ ಗೆಳೆಯರ ಬಳಗದ ಸದಸ್ಯರು ಕಸದಿಂದ ರಸ ಎಂಬ ಯೋಜನೆ ರೂಪಿಸಿ 2021ರಲ್ಲಿ ‘ಕಸದ ಕಾಸಿಂದ ತಂಗುದಾಣ’ ನಿರ್ವಿುಸಿದ್ದಾರೆ. ಸುತ್ತಲಿನ ಬಡಾವಣೆಗಳ ಸಾವಿರಾರು ಮನೆಗಳಿಂದ ರದ್ದಿ ಪೇಪರ್ (10 ಸಾವಿರ ಕೆಜಿ) ಸಂಗ್ರಹಿಸಿ ಅಂದಾಜು 1ಲಕ್ಷ ರೂ. ವೆಚ್ಚದಲ್ಲಿ ತಂಗುದಾಣ ನಿರ್ವಿುಸಿದ್ದಾರೆ. ಅದನ್ನೂ ಕೆಲವರು ಅಂದಗೆಡಿಸುವ ಕೆಲಸ ಮಾಡಿದ್ದರು. ಕೂಡಲೇ ಎಚ್ಚೆತ್ತ ಪದಾಧಿಕಾರಿಗಳು ಮತ್ತೆ ಸುಸ್ಥಿತಿಗೆ ತಂದಿದ್ದಾರೆ.


    ನಗರದ ಎಲ್ಲ ಬಡಾವಣೆ, ಪ್ರಮುಖ ಸ್ಥಳಗಳಲ್ಲಿ ತಂಗುದಾಣಗಳು ಇಂದಿನ ದಿನಗಳಲ್ಲಿ ಅಗತ್ಯವಾಗಿವೆ. ಆದರೆ, ನಮ್ಮ ನಗರದಲ್ಲಿ ಶೆಲ್ಟರ್​ಗಳ ಕೊರತೆ ಸಾಕಷ್ಟಿದೆ. ಕೆಲ ಕಡೆಗಳಲ್ಲಿ ಇದ್ದರೂ ಸರಿಯಾದ ನಿರ್ವಹಣೆ ಇಲ್ಲ. ಹೀಗಾಗಿ, ಸಂಬಂಧಿಸಿದವರು ತಂಗುದಾಣ ಇಲ್ಲದ ಕಡೆಗಳಲ್ಲಿ ಹೊಸದಾಗಿ ನಿರ್ವಿುಸಬೇಕು. ಇರುವುದನ್ನೇ ಸರಿ ಮಾಡುವ ಕೆಲಸ ಆಗಬೇಕಿದೆ.
    | ಅಮಿತ ವಡವಡಗಿ, ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts