More

    ಕೆಐಎನಲ್ಲಿ ದಶಕದ ಬಳಿಕ ಲಾಂಛನದಲ್ಲಿ ಕನ್ನಡ ಬಳಕೆ

    ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಬಿಐಎ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ) ಎಂದು ಹೆಸರು ಬದಲಿಸಿದ ಹತ್ತು ವರ್ಷದ ನಂತರ ಕಂಪನಿಯ ಲಾಂಛನದಲ್ಲಿ ಕನ್ನಡವನ್ನು ಬಳಕೆ ಮಾಡಲಾಗಿದೆ.

    ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೆಐಎಗೆ ಸೂಚನೆ ನೀಡಿದ ಬೆನ್ನಲ್ಲೇ ಎಚ್ಚೆತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಅಧಿಕಾರಿಗಳು ತಮ್ಮ ಲಾಂಛನದಲ್ಲಿ ಕನ್ನಡವನ್ನು ಬಳಸಿಕೊಂಡಿದ್ದಾರೆ. ಆದರೆ, ಕಂಪನಿಯ ವೆಬ್‌ಸೈಟ್‌ನಲ್ಲಿ ಇನ್ನೂ ಬದಲಾದ ಲೋಗೊ ಕಾಣುತ್ತಿಲ್ಲ. ಈಗಲೂ ಇಂಗ್ಲಿಷ್ ಭಾಷೆಯಲ್ಲೇ ಇದೆ.

    ಈವರೆಗೂ ಕೆಐಎ ಲಾಂಛನವು ಸಂಪೂರ್ಣ ಆಂಗ್ಲ ಭಾಷೆಯಲ್ಲಿತ್ತು. ಈ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ವಿಮಾನನಿಲ್ದಾಣದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಪ್ರಾಧಿಕಾರಕ್ಕೆ ಸೂಚಿಸಿದ್ದರು. ಇದರನ್ವಯ ಪ್ರಾಧಿಕಾರವು ವಿಮಾನನಿಲ್ದಾಣದ ವ್ಯವಸ್ಥಾಪಕ ನಿದೇರ್ಶಕರಿಗೆ ಪತ್ರ ಬರೆದು ಲಾಂಛನದಲ್ಲಿರುವ ಇಂಗ್ಲಿಷ್ ಬಳಸಿ ಕನ್ನಡವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳು ಇಲ್ಲಿನ ಭಾಷಾ ಸಂಸ್ಕೃತಿಯನ್ನು ಗೌರವಿಸುವುದು ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂಬುದಾಗಿ ಎಚ್ಚರಿಸಿತ್ತು. ಇದನ್ನಾಧರಿಸಿ ಕಂಪನಿಯ ಅಧಿಕಾರಿ ದಿನೇಶ್ ಕುಮಾರ್ ಅವರು ವಿಮಾನನಿಲ್ದಾಣದ ಪ್ರತಿಯೊಂದು ಸೂಚನಾಲಕಗಳನ್ನು ಕನ್ನಡದಲ್ಲಿ ಬಳಸುವ ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಕನ್ನಡವನ್ನು ಬಳಸುವುದಾಗಿ ಮಾರುತ್ತರ ಬರೆದಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

    ಕೆಐಎ ನಡೆದುಬಂದ ಹಾದಿ:

    2001ರಲ್ಲಿ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಲಿಮಿಟೆಡ್ ಹೆಸರಿನಲ್ಲಿ ಕಂಪನಿ ಸ್ಥಾಪನೆಯಾಯಿತು. 2004ರಲ್ಲಿ ಕಂಪನಿಯು ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು 2006ರಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಿತು. 2008ರಲ್ಲಿ ಕಾಮಗಾರಿ ಪೂರ್ಣಗೊಂಡು ಅದೇ ವರ್ಷದ ಮೇ 24ರಂದು ಮೊದಲ ವಿಮಾನ ಹಾರಾಟವಾಯಿತು. 2013ರಲ್ಲಿ ರಾಜ್ಯ ಸರ್ಕಾರದ ನಿರ್ಣಯ ಆಧರಿಸಿ ಕೆಐಎ ಎಂದು ಪುನರ್ ನಾಮಕರಣ ಮಾಡಲಾಯಿತು. 2022ರಲ್ಲಿ ಎರಡನೇ ಟರ್ಮಿನಲ್ ಉದ್ಘಾಟನೆಗೊಂಡು, ಈ ವರ್ಷದ ಮಧ್ಯಭಾಗದಲ್ಲಿ ಅಧಿಕೃತ ವಿಮಾನ ಹಾರಾಟ ಆರಂಭವಾಗಿದೆ.

    ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ನೆಲ, ಜಲ, ವಿದ್ಯುತ್ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದು, ಸ್ಥಳೀಯ ಭಾಷೆಯ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು. ಭಾಷೆಯ ರಕ್ಷಣೆಗೆ ಸರ್ಕಾರ ಬದ್ಧವಾಗಿಗಿದ್ದು, ವಿಮಾನ ನಿಲ್ದಾಣದಲ್ಲಿ ಕನ್ನಡ ಬಳಕೆ ಮಾಡಿದ ನಿಲ್ದಾಣದ ಅಧಿಕಾರಿಗಳ ನಡೆ ಎಲ್ಲರಿಗೂ ಮಾದರಿಯಾಗಲಿ.
    – ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts