More

    ವರ್ಷಾಂತ್ಯದೊಳಗೆ ಪೂರ್ಣ ಅನುದಾನ ಬಳಸಿ

    ಹಾವೇರಿ: ಪ್ರಸಕ್ತ ಸಾಲಿನ ಆರ್ಥಿಕ ವರ್ಷಾಂತ್ಯದೊಳಗೆ ಇಲಾಖಾವಾರು ಬಿಡುಗಡೆಯಾಗಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ನಿಗದಿತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಒಂದು ವೇಳೆ ಅನುದಾನ ಬಳಕೆಯಾಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಎಚ್ಚರಿಸಿದರು.

    ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ವಿವಿಧ ರಸ್ತೆ ಕಾಮಗಾರಿ, ಅಂಗನವಾಡಿ, ಶಾಲೆ ಮತ್ತಿತರ ಕಟ್ಟಡಗಳು, ನೀರಾವರಿ ಯೋಜನೆಗಳು, ಕೆರೆ ನಿರ್ವಣ, ದುರಸ್ತಿ, ಕಾಮಗಾರಿಗಳ ಅನುಷ್ಠಾನಕ್ಕೆ ನಿವೇಶನದ ಕೊರತೆ, ಯೋಜನೆಗಳ ಬದಲಾವಣೆ ಸೇರಿ ಯಾವುದೇ ತೊಡಕುಗಳು ಕಂಡುಬಂದರೆ ಆಯಾ ಭಾಗದ ಜಿಪಂ ಸದಸ್ಯರು, ಜನಪ್ರತಿನಿಧಿಗಳನ್ನು ಸಂರ್ಪಸಿದರೆ ಸಮಸ್ಯೆಗಳನ್ನು ನಿವಾರಿಸಲಾಗುವುದು. ಆದರೆ, ಯಾವುದೇ ಸಮಸ್ಯೆ ಇಲ್ಲದಿದ್ದರೂ ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕ್ರಮ ನಿಶ್ಚಿತ ಎಂದರು.

    ಸಿಇಒ ರಮೇಶ ದೇಸಾಯಿ ಮಾತನಾಡಿ, ಪ್ರಧಾನ ಮಂತ್ರಿ ಗ್ರಾಮ ಸಡಕ್(ಪಿಎಂಜಿಎಸ್​ವೈ) ಯೋಜನೆಯಡಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನು 5ವರ್ಷದವರೆಗೆ ಗುತ್ತಿಗೆದಾರರೇ ನಿರ್ವಹಿಸಬೇಕು. ಆದರೆ, ಕಾಮಗಾರಿಗಳು ಕಳಪೆಯಾಗಿವೆ. ನಿರ್ವಹಣೆ ಸಮರ್ಪಕವಾಗಿಲ್ಲ. ಲೋಪ ಎಸಗಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದರು.

    ಸಮಾಜಕಲ್ಯಾಣ ಇಲಾಖೆ ಸೇರಿದಂತೆ ವಿವಿಧೆಡೆ ಮಂಜೂರಾಗಿರುವ ಸಮುದಾಯ ಭವನಗಳನ್ನು ನಿಗದಿತ ಸ್ಥಳದಲ್ಲಿ ನಿರ್ವಿುಸಬೇಕು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಫೆಬ್ರವರಿ 2021ರೊಳಗಾಗಿ ಪೂರ್ಣಗೊಳಿಸಬೇಕು ಎಂದು ನಿರ್ವಿುತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ ಅವರಿಗೆ ಸೂಚಿಸಲಾಯಿತು.

    ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ 64 ಅಂಗನವಾಡಿ ಕಟ್ಟಡ, 172 ಶಾಲೆ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ತುಂಗಾ ಮೇಲ್ದಂಡೆ ಯೋಜನೆಯಡಿ ಕೈಗೊಂಡಿರುವ ನೀರಾವರಿ ಕಾಮಗಾರಿಗಳು, ಸಣ್ಣ ನೀರಾವರಿ ಇಲಾಖೆಯಡಿ ಕೈಗೊಂಡಿರುವ ಚೆಕ್ ಡ್ಯಾಂಗಳ ಪ್ರಗತಿಯನ್ನು ಪರಿಶೀಲಿಸಬೇಕು. ಸಣ್ಣ ನೀರಾವರಿ ಕೆರೆಗಳು ಮಳೆಯಿಂದ ಭರ್ತಿಯಾಗದಿದ್ದರೆ ಕಾಲುವೆ ಮೂಲಕ ನೀರು ತುಂಬಲು ಕ್ರಮವಹಿಸುವಂತೆ ಸಿಇಒ ಸೂಚಿಸಿದರು.

    ಸಭೆಯಲ್ಲಿ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಸ್ಥಾಯಿ ಸಮಿತಿ ಸದಸ್ಯರಾದ ಶಿವಾನಂದ ಕನ್ನಪ್ಪಳವರ, ಟಾಕನಗೌಡ ಪಾಟೀಲ ಉಪಸ್ಥಿತರಿದ್ದರು.

    ಕಾಮಗಾರಿ ಕಳಪೆ ದೂರು: ತುಂಗಾ ಮೇಲ್ದಂಡೆ ಯೋಜನೆಯಡಿ ಕೈಗೊಂಡಿರುವ ದೇವರಗುಡ್ಡ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆ ಎಂದು ದೂರುಗಳು ಬಂದಿವೆ. ಈ ಕುರಿತಂತೆ ಜಿಪಂ ಅಧ್ಯಕ್ಷರು, ಸಿಇಒ, ತುಂಗಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಪರಿಶೀಲನೆ ನಡೆಸಿ ಕಾಮಗಾರಿಗಳಲ್ಲಿ ನ್ಯೂನತೆ ಕಂಡು ಬಂದರೆ ಅದನ್ನು ಸರಿಪಡಿಸಿದ ನಂತರ ಹಸ್ತಾಂತರಿಸಲು ಕ್ರಮವಹಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

    ತುಂಗಾ ಮೇಲ್ದಂಡೆ ಯೋಜನೆಯಡಿ ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಇದೇ ಆರ್ಥಿಕ ವರ್ಷಾಂತ್ಯದಲ್ಲಿ ಪರಿಹಾರ ಹಣ ಪಾವತಿಸಲು ಕ್ರಮ ವಹಿಸಬೇಕು. ಕಾಗಿನೆಲೆ ಸೌಂದಯರ್ಿಕರಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಇಂಜಿನಿಯರ್​ಗೆ ಸಿಇಒ ಸೂಚಿಸಿದರು.

    ಪರಿಹಾರ ಪಾವತಿಗೆ 121 ಕೋಟಿ ರೂ. ಅನುದಾನ ಅಗತ್ಯವಿದ್ದು, ಇದರಲ್ಲಿ 52 ಕೋಟಿ ರೂ. ಬಿಡುಗಡೆಯಾಗುವ ನಿರೀಕ್ಷೆಯಿದೆ. 126 ಭೂ ಸ್ವಾಧೀನ ಪ್ರಕರಣಗಳಿದ್ದು, ಅದರಲ್ಲಿ 26 ಪ್ರಕರಣಗಳು ಇತ್ಯರ್ಥವಾಗಿವೆ. ಕಾಯಂ ಭೂಸ್ವಾಧೀನ ಅಧಿಕಾರಿಗಳು ಇಲ್ಲದಿರುವ ಕಾರಣ ವಿಳಂಬವಾಗಿದೆ. ಮಾರ್ಚ್ ಒಳಗಾಗಿ ಪರಿಹಾರ ಪಾವತಿಗೆ ಪ್ರಯತ್ನಿಸಲಾಗುವುದು ಎಂದು ಯುಟಿಪಿ ಇಂಜಿನಿಯರ್ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts