More

    ಅಮೆರಿಕ-ತಾಲಿಬಾನ್​ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ: 18 ವರ್ಷಗಳ ಸಂಘರ್ಷಕ್ಕೆ ತೆರೆ

    ದೋಹಾ(ಕತಾರ್​): ಅಫ್ಘಾನಿಸ್ತಾನದ ತಾಲಿಬಾನ್​ ಸಂಘಟನೆಯೊಂದಿಗೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕುವ ಮೂಲಕ 18 ವರ್ಷಗಳ ದೀರ್ಘಕಾಲದ ರಕ್ತಸಿಕ್ತ ಯುದ್ಧ ಸನ್ನಿವೇಶಕ್ಕೆ ಇಂದು ತೆರೆ ಎಳೆದಿದೆ. ಒಪ್ಪಂದದ ಅನ್ವಯ ಆಫ್ಘಾನ್​ನಲ್ಲಿರುವ ತನ್ನ ಸೇನಾ ಪಡೆಯನ್ನು ಅಮೆರಿಕ ಕಾಲಮಿತಿಯಲ್ಲಿ ವಾಪಸ್​ ಕರೆಸಿಕೊಳ್ಳಲಿದೆ.

    ಶನಿವಾರ ದೋಹಾದಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ಅಮೆರಿಕ, ತಾಲಿಬಾನ್​ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು. ಮುಂದಿನ ನಾಲ್ಕರಿಂದ ಐದು ತಿಂಗಳಲ್ಲಿ ಒಟ್ಟು 13,000 ಸಾವಿರ ಸೈನಿಕರಲ್ಲಿ 8,600 ಸೈನಿಕರನ್ನು ಅಲ್ಲಿಯೇ ಉಳಿಸಿ, ಉಳಿದವರನ್ನು ತವರಿಗೆ ಕರೆಸಿಕೊಳ್ಳಲಿದೆ.

    ಇನ್ನುಳಿದವರನ್ನು ಮುಂದಿನ 14 ತಿಂಗಳಲ್ಲಿ ಕರೆಯಿಸಿಕೊಳ್ಳಲಿದೆ. ಆದರೆ ಅದು, ತಾಲಿಬಾನ್​ನೊಂದಿಗೆ ನಡೆಯುವ ಮತ್ತೊಂದು ಸಭೆಯ ಮೇಲೆ ನಿರ್ಧಾರವಾಗಿರಲಿದೆ. ಭಯೋತ್ಪದನಾ ನಿಗ್ರಹ ಪರಿಸ್ಥಿತಿಗಳು ಹಾಗೂ ತಾಲಿಬಾನ್​ ಅನುಸರಣೆಯನ್ನು ನಿರ್ಣಯಿಸಿದ ಬಳಿಕ ಇನ್ನುಳಿದ ಯೋಧರನ್ನು ಅಮೆರಿಕ ವಾಪಸ್​ ಕರೆಸಿಕೊಳ್ಳಲು ನಿರ್ಧರಿಸಿದೆ.

    ಈ ಒಂದು ಒಪ್ಪಂದದಿಂದ ತಾಲಿಬಾನ್​ ಮತ್ತು ಆಫ್ಘಾನ್​ ಸರ್ಕಾರದ ನಡುವೆ ಮಾತುಕತೆ ನಡೆಯುವ ನಿರೀಕ್ಷೆಗಳಿದ್ದು, ಒಂದು ವೇಳೆ ಮಾತುಕತೆ ಯಶಸ್ವಿಯಾದರೆ 18 ವರ್ಷಗಳ ದೀರ್ಘಕಾಲಿಕ ಸಂಘರ್ಷಕ್ಕೆ ಅಂತಿಮ ಮುದ್ರೆ ಬೀಳುವುದು ಖಚಿತವಾಗುತ್ತದೆ.

    ತಾಲಿಬಾನ್​ ಬಂಡಾಯಗಾರ ಮುಲ್ಲಾ ಬರಾದರ್ ಹಾಗೂ​ ಅಮೆರಿಕ ಮುಖ್ಯ ಸಂಧಾನಕಾರ ಜಲ್ಮೇ ಖಲೀಲ್​ಜದ್ ಜತೆ ದೋಹಾದ ಲಕ್ಸುರಿ ಹೋಟೆಲ್​ನಲ್ಲಿ ಶಾಂತಿ ಒಪ್ಪಂದ ನಡೆದಿದೆ. ಉಭಯ ನಾಯಕರು ಸಭೆಯಲ್ಲಿ ಒಟ್ಟಿಗೆ ಕೈಕುಲಕಿ ಸ್ನೇಹ ಸಂದೇಶ ಸಾರಿದರು. ಈ ವೇಳೆ ಸಭೆಯಲ್ಲಿ ನೆರೆರದಿದ್ದ ಜನರು ದೇವರೇ ಶ್ರೇಷ್ಠವೆಂದು ಹರ್ಷೋದ್ಘಾರ ಕೂಗಿದರು.

    ಇನ್ನು ಒಪ್ಪಂದದ ಬಗ್ಗೆ ಮಾತನಾಡಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಮೈಕ್​ ಪೊಂಪಿಯೊ ಅಲ್​ ಖೈದಾ ಜತೆಗಿನ ಒಪ್ಪಂದಗಳನ್ನು ಕಡಿದುಕೊಂಡು ನಿಮ್ಮ ಭರವಸೆಗಳನ್ನು ಉಳಿಸಿಕೊಳ್ಳಿ ಎಂದು ತಾಲಿಬಾನ್​ಗೆ ಒತ್ತಾಯಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೂಡ​ ಹೊಸ ಭವಿಷ್ಯದ ಅವಕಾಶವನ್ನು ಆಫ್ಘಾನ್​ ಜನ ಸ್ವೀಕರಿಸಲಿ ಎಂದು ಸಂದೇಶ ರವಾನಿಸಿದ್ದಾರೆ.

    2001, ಸೆಪ್ಟೆಂಬರ್​ 11ರಂದು ಅಮೆರಿಕದಲ್ಲಿ ನಡೆದ ಉಗ್ರ ದಾಳಿಯ ಬಳಿಕ ತಾಲಿಬಾನ್​ ಮತ್ತು ಅಮೆರಿಕ ನಡುವೆ ಸಂಘರ್ಷ ಉಂಟಾಗಿತ್ತು. ಅಂದಿನಿಂದ ತಾಲಿಬಾನ್​ ಉಗ್ರ ನಿಗ್ರಹ ಹಾಗೂ ಆಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಅಮೆರಿಕ 1 ಟ್ರಿಲಿಯನ್​ ಡಾಲರ್​ಗೂ ಹೆಚ್ಚು ವ್ಯಯಿಸಿದೆ. ಈವೆರೆಗೂ ಸುಮಾರು 2400 ಅಮೆರಿಕ ಯೋಧರು ಹತ್ಯೆಯಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts