More

    ಬಾಸ್ಕೆಟ್​ಬಾಲ್ ದಿಗ್ಗಜ ಕೋಬ್ ಬ್ರಿಯಾಂಟ್ ದುರಂತ ಸಾವು

    ಲಾಸ್ ಏಂಜಲಿಸ್: ಅಮೆರಿಕದ ಬಾಸ್ಕೆಟ್​ಬಾಲ್ ದಿಗ್ಗಜ ಕೋಬ್ ಬ್ರಿಯಾಂಟ್ ಭಾನುವಾರ ಸಂಭವಿಸಿದ ಹೆಲಿಕಾಪ್ಟರ್ ಪತನದಿಂದ ಸಾವನ್ನಪ್ಪಿದ್ದಾರೆ. 41 ವರ್ಷದ ಕೋಬ್ ಜತೆಗೆ 13 ವರ್ಷದ ಪುತ್ರಿ ಜಿಯಾನ್ನ ಸೇರಿದಂತೆ ಹೆಲಿಕಾಪ್ಟರ್​ನಲ್ಲಿದ್ದ ಇತರ 7 ಮಂದಿಯೂ ಅಸುನೀಗಿದ್ದಾರೆ. ಕೋಬ್ ನಿಧನಕ್ಕೆ ಕ್ರೀಡಾ ಜಗತ್ತು ಕಂಬನಿ ಮಿಡಿದಿದೆ.

    ಲಾಸ್ ಏಂಜಲಿಸ್​ನಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. 16 ಬಾರಿಯ ನ್ಯಾಷನಲ್ ಬಾಸ್ಕೆಟ್​ಬಾಲ್ ಅಸೋಸಿಯೇಷನ್ (ಎನ್​ಬಿಎ) ಚಾಂಪಿಯನ್ ಲಾಸ್ ಏಂಜಲಿಸ್ ಲ್ಯಾಕರ್ಸ್​ನ ದಿಗ್ಗಜ ಆಟಗಾರ ಹಾಗೂ ‘ಬ್ಲ್ಯಾಕ್ ಮಾಂಬಾ’ ಖ್ಯಾತಿಯ ಕೋಬ್ ಬ್ರಿಯಾಂಟ್ 20 ವರ್ಷಗಳ ವರ್ಣಮಯ ವೃತ್ತಿಜೀವನ ಕಂಡಿದ್ದರು. 2001ರಲ್ಲಿ ವನೆಸ್ಸಾರನ್ನು ಮದುವೆಯಾಗಿದ್ದ ಬ್ರಿಯಾಂಟ್ ದಂಪತಿಗೆ ಒಟ್ಟು 4 ಹೆಣ್ಣು ಮಕ್ಕಳಿದ್ದರು. ಈ ಪೈಕಿ 2ನೇ ಮಗಳು ಜಿಯಾನ್ನ ದುರಂತದಲ್ಲಿ ಕೋಬ್ ಜತೆಗೆ ಮಡಿದಿದ್ದಾರೆ. ಮಾಜಿ ಎನ್​ಬಿಎ ಆಟಗಾರ ಜೋಯಿ ಜೆಲ್ಲಿಬೀನ್ ಬ್ರಿಯಾಂಟ್ ಮಗನಾದ ಕೋಬ್, 1978ರಲ್ಲಿ ಫಿಲಡೆಲ್ಪಿಯಾದಲ್ಲಿ ಜನಿಸಿದ್ದರು. ಇಟಲಿಯಲ್ಲಿ ಬಾಲ್ಯವನ್ನು ಕಳೆದಿದ್ದ ಕೋಬ್​ಗೆ ತಂದೆಯೇ ಮೊದಲ ಕೋಚ್ ಆಗಿದ್ದರು.

    ಕೋಬ್ ಆಡುವಾಗ ಲ್ಯಾಕರ್ಸ್ ತಂಡ 5 ಬಾರಿ ಎನ್​ಬಿಎ ಚಾಂಪಿಯನ್ ಆಗಿತ್ತು. 2008ರ ಬೀಜಿಂಗ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್​ಗಳಲ್ಲಿ ಸ್ವರ್ಣ ಜಯಿಸಿದ ಅಮೆರಿಕ ಬಾಸ್ಕೆಟ್​ಬಾಲ್ ತಂಡದ ಸದಸ್ಯರಾಗಿದ್ದರು. ಅಮೆರಿಕ ಬಾಸ್ಕೆಟ್​ಬಾಲ್ ಕ್ಷೇತ್ರದ ದಂತಕಥೆಯಾಗಿದ್ದ ಕೋಬ್, ಸ್ನೇಹಿತರ ವಲಯದಲ್ಲಿ ‘ಬ್ಲಾ್ಯಕ್ ಮಾಂಬಾ’ ಎಂದು ಕರೆಸಿಕೊಂಡಿದ್ದರು. 2016ರ ಏಪ್ರಿಲ್​ನಲ್ಲಿ ಎನ್​ಬಿಎಯಿಂದ ನಿವೃತ್ತಿ ಹೊಂದಿದ್ದರು. 2008ರ ಎನ್​ಬಿಎ ಆಟಗಾರ, 2 ಬಾರಿಯ ಎನ್​ಬಿಎ ಫೈನಲ್ ಆಟಗಾರ ಪ್ರಶಸ್ತಿಗೆ ಕೋಬ್ ಪಾತ್ರರಾಗಿದ್ದರು. ಎನ್​ಬಿಎ ವೃತ್ತಿಜೀವನದ 1,346 ಪಂದ್ಯಗಳಲ್ಲಿ ಅವರು 33,643 ಅಂಕ ಗಳಿಸಿದ್ದರು. 7,047 ರಿಬೌಂಡ್ಸ್ ಮತ್ತು 6,306 ಅಂಕ ಗಳಿಕೆಗಳಿಗೆ ನೆರವಾಗಿದ್ದರು. ಕೋಬ್ ನಿವೃತ್ತಿಯ ನಂತರ ಮಗಳನ್ನು ಬಾಸ್ಕೆಟ್​ಬಾಲ್ ಆಟಗಾರ್ತಿಯಾಗಿ ಬೆಳೆಸುವತ್ತ ಹೆಚ್ಚಿನ ಕಾಳಜಿ ವಹಿಸಿದ್ದರು.

    ಕಂಬನಿ ಮಿಡಿದ ಬಾಸ್ಕೆಟ್​ಬಾಲ್ ಕ್ಷೇತ್ರ: ಕೋಬ್ ಸಾವಿನ ಸುದ್ದಿ ತಿಳಿದ ಕೂಡಲೇ ಅಮೆರಿಕದಲ್ಲಿ ಬಾಸ್ಕೆಟ್​ಬಾಲ್ ಅಂಗಳದಲ್ಲೇ ಆಟಗಾರರು ದುಃಖ ದಲ್ಲಿ ಮುಳುಗಿದರು. ಅದೆಷ್ಟೋ ಪಂದ್ಯಗಳು ಮೊಟಕುಗೊಂಡವು. -ಏಜೆನ್ಸೀಸ್

    ಚುರುಕುಗೊಂಡ ತನಿಖೆ

    ಹೆಲಿಕಾಪ್ಟರ್ ಅವಘಡದ ಬಗ್ಗೆ ಹಲವು ಫೆಡೆರಲ್ ಏಜೆನ್ಸಿಗಳು ಕ್ಯಾಲಿಫೋರ್ನಿಯ ಅಧಿಕಾರಿಗಳ ಜತೆಗೂಡಿ ತನಿಖೆ ಚುರುಕುಗೊಳಿಸಿವೆ. ಕೋಬ್, ಪುತ್ರಿ ಸೇರಿದಂತೆ 9 ಮಂದಿ ಹೊಂದಿದ್ದ ಸಿಕೊರ್​ಸ್ಕೈ ಎಸ್-76 ಹೆಲಿಕಾಪ್ಟರ್ ಕಲಾಬಾಸಸ್ ಬೆಟ್ಟದ ಬಳಿ ಬೆಳಗ್ಗೆ 9.47ಕ್ಕೆ ಸಾಗುತ್ತಿದ್ದಂತೆಯೇ ಅತಿಯಾದ ಮಂಜಿನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೋಬ್ ಬ್ರಿಯಾಂಟ್ ಪುತ್ರಿಯನ್ನು ಕ್ಯಾಲಿಫೋರ್ನಿಯಾದ ಥೌಸೆಂಡ್ ಓಕ್ಸ್ ನಲ್ಲಿರುವ ಮಾಂಬಾ ಸ್ಪೋರ್ಟ್ಸ್

    ಅಕಾಡೆಮಿಗೆ ಕರೆದೊಯ್ಯುತ್ತಿದ್ದರು. ಕೋಬ್ ಜತೆಗೆ ಆರೆಂಜ್ ಕೋಸ್ಟ್ ಕಾಲೇಜಿನ ಬೇಸ್​ಬಾಲ್ ಕೋಚ್ ಜಾನ್ ಅಟ್ಲೊಬೆಲ್ಲಿ, ಅವರ ಪತ್ನಿ ಕೆರಿ, ಮಗಳು ಅಲೈಸಾ, ಸ್ಥಳೀಯ ಶಾಲಾ ತಂಡದ ಕೋಚ್​ಗಳಿದ್ದರು ಎಂದು ತಿಳಿದು ಬಂದಿದೆ. ‘ಹೆಲಿಕಾಪ್ಟರ್ ಹಾರಾಟಕ್ಕೆ ಬೇಕಾದ ಕನಿಷ್ಠ ಪೂರಕ ವಾತಾವರಣವೂ ಅಲ್ಲಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

    ನಂ.24 ಜೆರ್ಸಿಗೂ ವಿದಾಯ

    ಎನ್​ಬಿಎ ಇತಿಹಾಸದಲ್ಲಿ 2 ಜೆರ್ಸಿ ಸಂಖ್ಯೆ ಹೊಂದಿದ್ದ ಏಕೈಕ ಆಟಗಾರ ಕೋಬ್ ಬ್ರಿಯಾಂಟ್. ವೃತ್ತಿ ಜೀವನದ ಆರಂಭಿಕ ಅರ್ಧ ಅವಧಿ ಜೆರ್ಸಿ ನಂ.8 ತೊಟ್ಟಿದ್ದರೆ, 2006-07 ರಿಂದ ಜೆರ್ಸಿ ನಂಬರ್ 24 ಹಾಕುತ್ತಿದ್ದಾರೆ. ಇದೀಗ ಕೋಬ್ ಧರಿಸುತ್ತಿದ್ದ ನಂ.24 ಜೆರ್ಸಿಗೂ ವಿದಾಯ ಹೇಳಲು ಎನ್​ಬಿಎ ನಿರ್ಧರಿಸಿದೆ ಎಂದು ಡಲ್ಲಾಸ್ ಮೇವರಿಕ್ಸ್ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.

    ಕ್ರಿಕೆಟ್ ವಲಯದಿಂದಲೂ ಶ್ರದ್ಧಾಂಜಲಿ

    ಕೋಬ್ ಬ್ರಿಯಾಂಟ್ ದುರಂತ ಸಾವಿಗೆ ಕ್ರಿಕೆಟ್ ಜಗತ್ತು ಕೂಡ ಕಂಬನಿ ಮಿಡಿದಿದ್ದು, ದಿಗ್ಗಜ ಸಚಿನ್ ತೆಂಡುಲ್ಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್, ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಸಹಿತ ಹಲವು ಹಾಲಿ-ಮಾಜಿ ಕ್ರಿಕೆಟಿಗರು ಟ್ವಿಟರ್​ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ಈ ಜಾದುಗಾರನ ಆಟ ನೋಡಲು ಬೆಳಗ್ಗೆ ಬೇಗನೆ ಎದ್ದು ಟಿವಿಯಲ್ಲಿ ಎನ್​ಬಿಎ ಪಂದ್ಯ ನೋಡುತ್ತಿದ್ದ ಬಾಲ್ಯದ ಹಲವಾರು ನೆನಪುಗಳು ನನ್ನೊಂದಿಗಿವೆ. ಕೋಬ್ ಬ್ರಿಯಾಂಟ್ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ’ ಎಂದು ಕೊಹ್ಲಿ ಹೇಳಿದ್ದಾರೆ.

    ಶ್ರೀಮಂತ ಕ್ರೀಡಾಪಟು

    2015ರ ನವೆಂಬರ್​ನಲ್ಲಿ ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ 10ನೇ ಸ್ಥಾನ ಸಂಪಾದಿಸಿದ್ದ ಬ್ರಿಯಾಂಟ್, 4.5 ಸಾವಿರ ಕೋಟಿ ರೂ. ಜೀವಮಾನದ ಸಂಪಾದನೆ ಹೊಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts