More

    ಕೆಸರು ಗದ್ದೆಯಾದ ಉರಿಗಾಂಪೇಟೆ ರಸ್ತೆ

    ಗುಂಡಿ ಯಾವುದೆಂದು ಹುಡುಕುವ ಪರಿಸ್ಥಿತಿ : ದುರಸ್ತಿಗೆ ಸಾರ್ವಜನಿಕರ ಆಗ್ರಹ

    ಕೆಜಿಎಫ್​: ನಗರದಿಂದ ಉರಿಗಾಂಪೇಟೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹದಗೆಟ್ಟು 8 ವರ್ಷಗಳೇ ಕಳೆದಿದ್ದರೂ ಅಧಿಕಾರಿಗಳು ದುರಸ್ತಿಗೆ ಮುಂದಾಗದ ಕಾರಣ ರಸ್ತೆ ಮಧ್ಯ ಹೊಂಡ&ಗುಂಡಿಗಳು ಸೃಷ್ಟಿಯಾಗಿವೆ. ಇದರಿಂದಾಗಿ ಮಳೆಯಾದಾಗಲೆಲ್ಲ ರಸ್ತೆ ಕೆಸರು ಗದ್ದೆಯಂತಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅನನುಕೂಲವನ್ನುಂಟು ಮಾಡುತ್ತಿದೆ.
    ಕೆಜಿಎ್​ ನಗರಸಭೆ ವ್ಯಾಪ್ತಿಗೆ ಸೇರುವ ಉರಿಗಾಂಪೇಟೆ ಪ್ರಮುಖ ವಾರ್ಡ್​ಗಳಲ್ಲೊಂದಾಗಿದ್ದು, ವಾರ್ಡ್​ನಿಂದ ನೆರೆಯ ಪೆದ್ದಪಲ್ಲಿ, ಕೊತ್ತೂರು, ಯರನಾಗನಹಳ್ಳಿ, ಪಿಚ್ಚಹಳ್ಳಿ, ಚನ್ನಪಲ್ಲಿ, ಅಡಂಪಲ್ಲಿ ಗ್ರಾಮಗಳು ಹಾಗೂ ವಾರ್ಡ್​ ನಂ.3 ಕೋರಮಂಡಲ್​, ವಾರ್ಡ್​ ನಂ.19 ಅಶೋಕ್​ನಗರ್​, ವಾರ್ಡ್​ ನಂ.20 ಶ್ರೀರಾಮನಗರ, ವಾರ್ಡ್​ ನಂ.21 ಸೋಮೇಶ್ವರ ಬ್ಲಾಕ್​ ವಾರ್ಡ್​ಗಳಿಗೆ ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ಆದರೆ ರಸ್ತೆ ಹದಗೆಟ್ಟಿರುವ ಕಾರಣ ವಾಹನ ಸವಾರರು, ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಆಸ್ಪತ್ರೆಗೆಂದು ತೆರಳುವ ರೋಗಿಗಳು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
    4-5 ಸಾವಿರ ಜನ ಸಂಚಾರ: ರಸ್ತೆಯ ಮಧ್ಯಭಾಗದಲ್ಲಿ ಸುಮಾರು ಮೊಣಕಾಲುದ್ದದ ಗುಂಡಿಗಳು ನಿಮಾರ್ಣವಾಗಿವೆ. ಮಳೆ ನೀರು ಗುಂಡಿಗಳಲ್ಲಿ ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೋರಮಂಡಲ್​, ಬೆಮೆಲ್​ ಕಾರ್ಖಾನೆ ಮತ್ತು ನೆರೆಯ ಗಾರ್ಮೆಂಟ್ಸ್​ ಕಂಪನಿಗಳಿಗೆ ಪ್ರತಿನಿತ್ಯ ಬೆಳಗಿನ ಜಾವ 4 ಗಂಟೆಯಿಂದಲೇ ಸುಮಾರು 4-5 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ಮಾರ್ಗದ ಮೂಲಕ ಪ್ರಯಾಣಿಸುತ್ತಾರೆ. ಆದರೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದರಿಂದ ಅನೇಕ ವೇಳೆ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿರುವ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಉರಿಗಾಂಪೇಟೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹೆಚ್ಚಿದ್ದು, ವಿದ್ಯಾರ್ಥಿಗಳು ಸಹ ಇದೇ ಮಾರ್ಗದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

    ಚರಂಡಿ ಪಾಲಾದ ವೆಟ್​ಮಿಕ್ಸ್​
    ನಗರೋತ್ಥಾನ ಯೋಜನೆಯಡಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತಾದರೂ ರಸ್ತೆಗೆ ವೆಟ್​ಮಿಕ್ಸ್​ ತುಂಬಿ ಕೈಚೆಲ್ಲಿದ್ದರು. ಆದರೆ ಈಗ ಸುರಿದ ಮಳೆಗೆ ವೆಟ್​ಮಿಕ್ಸ್​ ಸಂಪೂರ್ಣ ಕರಗಿ ಚರಂಡಿ ಪಾಲಾಗಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

    ಮಳೆ ಬಂತೆಂದರೆ ನಗರದಿಂದ ಉರಿಗಾಂಪೇಟೆಗೆ ಬರಲು ಹರಸಾಸಹಪಡಬೇಕು. ರಸ್ತೆ ಸರಿಪಡಿಸುವಂತೆ ಈಗಾಗಲೇ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ದುರಸ್ತಿ ಮಾಡಿ, ಸಮಸ್ಯೆ ಬಗೆಹರಿಸಿ.

    | ವಿನೋದ್​, ಮಂಜುನಾಥನಗರ ನಿವಾಸಿ

    ಉರಿಗಾಂಪೇಟೆ ಮುಖ್ಯರಸ್ತೆಯು 4 ಮಂದಿ ನಗರಸಭೆ ಸದಸ್ಯರ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಒಬ್ಬರೂ ಸಹ ರಸ್ತೆ ಸರಿಪಡಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗೋಜಿಗೆ ಹೋಗದಿರುವುದು ವಿಷಾದನೀಯ.

    | ನಿತೀಶ್​ ಭಾರದ್ವಾಜ್​, ನಿವಾಸಿ ಉರಿಗಾಂಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts