More

    ಸರ್ಕಾರಿ ಶಾಲೆ ಮಕ್ಕಳಿಗೆ ಬಯಲು ಶೌಚವೇ ಗತಿ

    ಉಪ್ಪಿನಬೆಟಗೇರಿ: ಸರ್ಕಾರಿ ಶಾಲೆಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದರಿಂದ ಅದೆಷ್ಟೋ ಶಾಲೆಗಳು ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿವೆ.
    ಗ್ರಾಮದಲ್ಲಿ 158 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಳೆದ ಮೇನಲ್ಲಿ ಎರಡು ದಿನ ಶಾಲೆಯ ಶತಮಾನೋತ್ತರ ಸಮಾರಂಭ ಮಾಡಲಾಗಿದೆ. ಈ ಶಾಲೆಗೆ ಮುಖ್ಯವಾಗಿ ಇರಬೇಕಿದ್ದ ಶೌಚಗೃಹವೇ ಇಲ್ಲ. ಹೀಗಾಗಿ, ಮಕ್ಕಳು ಬಯಲಿನಲ್ಲೇ ಮೂತ್ರ ವಿಸರ್ಜನೆ ಮಾಡುವಂತಾಗಿದೆ.
    ಬಯಲು ಶೌಚಮುಕ್ತ ಗ್ರಾಮ ಮಾಡಲು ಪಣ ತೊಟ್ಟಿರುವ ಸರ್ಕಾರಕ್ಕೆ ಶಾಲೆಗಳಿಗೆ ಸುಸಜ್ಜಿತ ಶೌಚಗೃಹ ನಿರ್ಮಿಸುವುದು ದೊಡ್ಡ ಸಮಸ್ಯೆಯಲ್ಲ. ಆದರೆ, ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಇಲ್ಲವೆ ಸ್ಥಳೀಯ ಗ್ರಾಪಂ ಆಗಲಿ ಈ ಸಮಸ್ಯೆ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸ.
    ಶಾಲೆಯಲ್ಲಿ 200ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮೂತ್ರ ವಿಸರ್ಜನೆಯನ್ನು ಬಯಲಿನಲ್ಲೇ ಮಾಡುತ್ತಾರೆ. ಬಹಿರ್ದೆಸೆಗೆ ಮನೆಗೇ ಹೋಗಿಬರಬೇಕು. ಇರುವ ಒಂದು ಸಣ್ಣ ಶೌಚಗೃಹವನ್ನು ಶಾಲೆ ಸಿಬ್ಬಂದಿ ಬಳಸುತ್ತಾರೆ. ಎಸ್‌ಡಿಎಂಸಿ ಸದಸ್ಯರ ಮನವಿ ಮೇರೆಗೆ ಗ್ರಾಪಂ ಕಳೆದ ವರ್ಷ 4.5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ಶೌಚಗೃಹಕ್ಕೆ ಭೂಮಿ ಪೂಜೆ ಕೂಡ ಮಾಡಲಾಗಿದೆ. ಆದರೆ, ಕಾಮಗಾರಿ ಮುಂದುವರಿಯಲಿಲ್ಲ.
    ಶತಮಾನ ಕಂಡ ಸರ್ಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಮುನ್ನ ಗ್ರಾಪಂನವರು ನರೇಗಾ ಯೋಜನೆಯಡಿ ಅಂದಾಜು 43 ಲಕ್ಷ ರೂ.ಗಳ ಅನುದಾನ ನೀಡಿದ್ದರು. ಈ ಅನುದಾನದಲ್ಲಿ ಶಾಲೆಗೆ ಅಗತ್ಯ ಕಾಮಗಾರಿ ಮಾಡಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

    ಶಾಲೆಗೆ ಶೌಚಗೃಹ ನಿರ್ಮಾಣ ಕುರಿತು ಗ್ರಾಪಂ ಅನುದಾನ ಬಿಡುಗಡೆ ಮಾಡಿದೆ. ಗುತ್ತಿಗೆದಾರ ಹಾಗೂ ಎಸ್‌ಡಿಎಂಸಿ ನಡುವೆ ಜಾಗದ ಗೊಂದಲ ಮತ್ತು 4.5 ಲಕ್ಷ ರೂ. ಅನುದಾನ ಸಾಕಾಗುವುದಿಲ್ಲ ಎಂದು ಗುತ್ತಿಗೆದಾರ ತಿಳಿಸಿದ್ದಾನೆ. ಗ್ರಾಪಂ ಆಡಳಿತ ಮಂಡಳಿ ಜತೆಗೆ ಮಾತನಾಡಿದ್ದೇನೆ. ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಸದ್ಯ ಇರುವ ಅನುದಾನದಲ್ಲಿ ಶೌಚಗೃಹ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ.
    ಆರ್.ಆರ್. ಸದಲಗಿ
    ಬಿಇಒ ಧಾರವಾಡ ಗ್ರಾಮೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts