More

    ಮಾದರಿ ಗ್ರಾಪಂ ತ್ಯಾಜ್ಯ ವಿಲೇವಾರಿ ವಿಫಲ

    ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

    ಘನತ್ಯಾಜ್ಯ ವಿಲೇವಾರಿಯಲ್ಲಿ ಮಾದರಿ ಗ್ರಾಮ ಪಂಚಾಯಿತಿ ಎಂದು ಹೆಸರಾಗಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವಾಸ್ತವತೆ ಬೆಳಕಿಗೆ ಬಂದಿದ್ದು, ತನ್ನಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳನ್ನು ಸಮರ್ಪಕ ವಿಲೇವಾರಿಗೊಳಿಸುವಲ್ಲಿ ವಿಫಲವಾಗಿದೆ. ಇದರಿಂದ ಸುತ್ತಮುತ್ತಲು ದುರ್ನಾತ ಆರಂಭಗೊಂಡು ಪಂಚಾಯಿತಿ ಆಡಳಿತ ಮುಜುಗರಕ್ಕೊಳಗಾಗಿದೆ.

    ಉಪ್ಪಿನಂಗಡಿ ಗ್ರಾಪಂನ ತ್ಯಾಜ್ಯ ನಿರ್ವಹಣೆ ಘಟಕ ವೀಕ್ಷಿಸಲು ಹೊರ ಜಿಲ್ಲೆಗಳ ಪಂಚಾಯಿತಿ ನಿಯೋಗಗಳು ಭೇಟಿ ನೀಡುತ್ತಿದ್ದು, ತ್ಯಾಜ್ಯ ನಿರ್ವಹಣೆಯನ್ನು ಲಾಭದಾಯ ಉದ್ಯಮವಾಗಿಸಬಹುದೆಂದು ಈ ಪಂಚಾಯಿತಿ ಸಾಬೀತುಗೊಳಿಸಿತ್ತು. ಜತೆಗೆ ನೆರೆಯ ಗ್ರಾ.ಪಂಗಳೂ ಉಪ್ಪಿನಂಗಡಿ ಗ್ರಾ.ಪಂನ್ನು ಮಾದರಿಯಾಗಿ ಸ್ವೀಕರಿಸಿದ್ದವು. ತ್ಯಾಜ್ಯ ವಿಲೇವಾರಿ ಕೇಂದ್ರವಾಗಿದ್ದ ಇದು ಬಳಿಕ ತ್ಯಾಜ್ಯ ಸಂಗ್ರಹಣಾ ಕೇಂದ್ರವಾಗಿ ಪರಿವರ್ತನೆಗೊಂಡಿತು. ಘನ ತ್ಯಾಜ್ಯ ನಿರ್ವಹಣೆಯ ಹೆಗ್ಗಳಿಕೆಯೊಂದಿಗೆ ಪಡೆದಿದ್ದ ಪಂಚಾಯಿತಿಗೆ ತ್ಯಾಜ್ಯ ಸಂಗ್ರಹಣೆಯ ಸಮಸ್ಯೆ ಕಗ್ಗಂಟಾಗಿದೆ.

    ಗ್ರಾಪಂ ಸೂಚನೆ ಕಡೆಗಣನೆ

    ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಪಂಚಾಯಿತಿ ಆಡಳಿತ ಸತತ ನಿರ್ದೇಶನ ನೀಡಿದ್ದರೂ ಗುತ್ತಿಗೆದಾರರಿಂದ ಸೂಕ್ತ ಸ್ಪಂದನ ದೊರಕಿರಲಿಲ್ಲ. ಆದ್ದರಿಂದ ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಮಾಸಿಕ ಮೊತ್ತವನ್ನು ಪಂಚಾಯಿತಿ ಆಡಳಿತ ತಡೆ ಹಿಡಿದಿದ್ದು, ಕಸ ವಿಲೇವಾರಿ ಸಮರ್ಪಕವಾದ ಬಳಿಕ ಪಾವತಿಸಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೂ ಗುತ್ತಿಗೆದಾರರು ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಲು ನಿರಾಕರಿಸಿದ್ದಾರೆ.

    ಒಂದಷ್ಟು ಕಸಗಳನ್ನು ವಿಲೇವಾರಿ ಮಾಡಿಯಾಗಿದೆ. ಇನ್ನೂ ತುಂಬಾ ಪ್ರಮಾಣದಲ್ಲಿ ಬಾಕಿ ಉಳಿದಿದ್ದು, ಅದನ್ನು ಕೆದಂಬಾಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ಘಟಕಕ್ಕೆ ವರ್ಗಾಹಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ.
    -ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾ.ಪಂ ಉಪಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts