More

    ಬಸ್ ಟರ್ವಿುನಲ್ ಖಾಲಿಖಾಲಿ

    ಬಸವರಾಜ ಇದ್ಲಿ ಹುಬ್ಬಳ್ಳಿ

    ಇಲ್ಲಿಯ ಹೊಸೂರಲ್ಲಿ ಬಿಆರ್​ಟಿಎಸ್ ಹಾಗೂ ವಾಯವ್ಯ ಸಾರಿಗೆ ಸಂಸ್ಥೆಯಿಂದ ನಿರ್ವಿುಸಲಾಗಿರುವ ಪ್ರಾದೇಶಿಕ ಬಸ್ ಟರ್ವಿುನಲ್ ಹಾಗೂ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆಯಾಗಿ 22 ದಿನ ಕಳೆದರೂ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ.

    ಫೆ. 2ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೊಸೂರ ಬಸ್ ಟರ್ವಿುನಲ್ ಹಾಗೂ ಬಿಆರ್​ಟಿಎಸ್ ಯೋಜನೆ ಲೋಕಾರ್ಪಣೆಗೊಳಿಸಿದ್ದರು. ಬಿಆರ್​ಟಿಎಸ್ ಯೋಜನೆಯಡಿ ಬಸ್​ಗಳು ಮಾತ್ರ ಕಾರ್ಯಾಚರಣೆ ಆರಂಭಿಸಿವೆ. ಆದರೆ, ಇದುವರೆಗೆ ಹೊಸೂರ ಟರ್ವಿುನಲ್ ಆರಂಭವಾಗಿಲ್ಲ.

    ಹಳೇ ಬಸ್ ನಿಲ್ದಾಣ ಹಾಗೂ ಕಿತ್ತೂರ ಚನ್ನಮ್ಮ ವೃತ್ತದ ಮೇಲಿನ ವಾಹನ ಒತ್ತಡ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಬಿಆರ್​ಟಿಎಸ್ ಯೋಜನೆ ಅಡಿ ಹೊಸೂರಲ್ಲಿ ಟರ್ವಿುನಲ್ ನಿರ್ವಿುಸಲಾಗಿದೆ. ಹಳೇ ಬಸ್ ನಿಲ್ದಾಣದಿಂದ ಬಸ್ ಶೆಡ್ಯೂಲ್​ಗಳು ಹೊಸೂರಿಗೆ ಸ್ಥಳಾಂತರವಾದರೆ ಸಾಕಷ್ಟು ಬದಲಾವಣೆಯಾಗಲಿದೆ. ಆದರೆ, ಟರ್ವಿುನಲ್ ಹಿಂಬದಿ (ಉಣಕಲ್ಲ ಕ್ರಾಸ್- ಹೊಸೂರ) ನಾಲ್ಕು ಪಥ ನಿರ್ಮಾಣ ಕಾರ್ಯ ಆಮೆ ಗತಿಯಲ್ಲಿ ನಡೆದಿರುವುದು ಸ್ಥಳಾಂತರಕ್ಕೆ ಪ್ರಮುಖ ಅಡ್ಡಿ ಎಂದು ಹೇಳಲಾಗುತ್ತಿದೆ.

    ಸಾರ್ವಜನಿಕ ಸಮಸ್ಯೆಯಾಗಿರುವುದರಿಂದ ಮೊದಲೇ ಅರಿತುಕೊಂಡು ಅಡೆತಡೆಗಳನ್ನು ನಿವಾರಿಸಿಕೊಳ್ಳಬೇಕಿತ್ತು. ಕಾಮಗಾರಿಗೆ ವೇಗ ನೀಡಬೇಕಿತ್ತು. ಅದ್ಯಾವುದೂ ಆಗಲೇ ಇಲ್ಲ.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಸಿಆರ್​ಎಫ್ ನಿಧಿ ತಂದು ರಸ್ತೆ ಸುಧಾರಣೆಯನ್ನೇನೋ ಕೈಗೊಂಡರು. ಆದರೆ, ಯಾವುದಕ್ಕೂ ಕಾಲಮಿತಿ ಇಲ್ಲದ ಕಾರಣ ವರ್ಷಗಳಿಂದ ಜನರು ಪರದಾಡುವಂತಾಗಿದೆ. ಧೂಳು ಮುಕ್ತ ನಗರ ಎಂದು ಜನನಾಯಕರು ಹೇಳಿಕೊಳ್ಳುತ್ತಲೇ ಇದ್ದಾರೆ. ಆದರೆ, ಅಂತಹ ವಾತಾವರಣ ಮಾತ್ರ ಸೃಷ್ಟಿಯಾಗುತ್ತಿಲ್ಲ.

    ಅದೇ ರೀತಿ ನೂತನ ನ್ಯಾಯಾಲಯ ಎದುರು, ವಾಣಿ ವಿಲಾಸ ವೃತ್ತದ ರಸ್ತೆ ಸುಧಾರಣೆ ಕಾಣದಿರುವುದರಿಂದ ಸಂಚಾರ ಸಂಕಟಮಯವಾಗಿ ಪರಿಣಮಿಸಿದೆ. ಸಿಆರ್​ಎಫ್ ಅಡಿ ನಡೆದಿರುವ ಅನೇಕ ರಸ್ತೆ ಕೆಲಸಗಳು ಸಹ ಜನರಿಗೆ ಸಹ್ಯವಾಗುತ್ತಿಲ್ಲ. ಬಹಳಷ್ಟು ಕಡೆ ಅತಿಕ್ರಮಣವಾಗಿರುವಲ್ಲಿ ರಸ್ತೆಯನ್ನು ಯಥಾವತ್ ಕಾಂಕ್ರೀಟ್ ಹಾಕಿ ಕೈ ತೊಳೆದುಕೊಳ್ಳಲಾಗುತ್ತಿದೆ.

    ಅತಿಕ್ರಮಣವಾಗಿರುವಲ್ಲಿ ತೆರವು ಮಾಡುತ್ತಿಲ್ಲ. ಹಾಗಾಗಿ ರಸ್ತೆ ಸುಧಾರಣೆಯಾದರೂ ಉಪಯೋಗಕ್ಕೆ ಬರದಂತಹ ಸ್ಥಿತಿ ಇದೆ. ಹೊಸೂರ ವಾಣಿ ವಿಲಾಸ ವೃತ್ತದಿಂದ ನ್ಯಾಯಾಲಯ ಕಟ್ಟಡ ದವರೆಗೆ ಅತಿಕ್ರಮಣ ಕಾರಣಕ್ಕಾಗಿಯೇ ರಸ್ತೆ ಅಭಿವೃದ್ಧಿ ತಡವಾಗಿದೆ. ಹಣ ತಂದಿದ್ದೇವೆ ಎಂದು ಹೇಳಿಕೊಳ್ಳುವ ಸಚಿವರು ಸುಧಾರಣೆಗೆ ಅಡ್ಡಿಯಾಗಿರುವ ಅಂಶಗಳ ಬಗ್ಗೆಯೂ ಗಮನ ಹರಿಸದಿರುವುದು ವಿಪರ್ಯಾಸ ಎಂಬ ಟೀಕೆ ಸ್ಥಳೀಯರಿಂದ ಕೇಳಿಬರುತ್ತಿದೆ.

    ಕೆಲಸ ಬಾಕಿ: ಬಿಆರ್​ಟಿಎಸ್ ಯೋಜನೆಯ ಪ್ರಮುಖ ಕೆಲಸಗಳ ಪೈಕಿ ನವಲೂರು ಸೇತುವೆ ಪೂರ್ತಿಗೊಳಿಸುವುದು ಒಂದಾಗಿದೆ. ಅವಳಿ ನಗರ ಮಧ್ಯೆ ಎರಡೂ ಕಡೆ ಫುಟ್​ಪಾತ್ ಅವಶ್ಯವಾಗಿತ್ತು. ಅದು ಅಲ್ಲಲ್ಲಿ ಮಾತ್ರ ನಿರ್ವಿುಸಲಾಗಿದೆ.

    ಇನ್ನು ನವನಗರ, ಉಣಕಲ್ಲ ಬಳಿಯ ಫ್ಲೈಓವರ್ ಕೆಳಗೆ ಭೂಮಿ ಸಮತಟ್ಟು ಮಾಡಿಲ್ಲ. ಸುಂದರಗೊಳಿಸಿಲ್ಲ. ಫ್ಲೈಓವರ್ ನಿರ್ವಿುಸಿ ಉಳಿದ ಕೆಲಸ ಹಾಗೇ ಬಿಡಲಾಗಿದೆ. ಇಂತಹ ಅನೇಕ ಕೆಲಸಗಳು ಬಾಕಿ ಉಳಿದುಕೊಂಡಿವೆ.

    ಮಾ. 1ರಿಂದ ಕಾರ್ಯಾಚರಣೆ: ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ ಮಾ. 1ರಿಂದ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಹೊಸೂರ ವೃತ್ತ, ಹಿಂಬದಿಯ ರಸ್ತೆಯಲ್ಲಿ ವಾಹನ ಸಂಚಾರ ಕುರಿತು ಪೊಲೀಸ್ ಇಲಾಖೆ ಪರಿಶೀಲನೆ ಮಾಡಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ. ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಮಾ. 1ರಿಂದ ಬಸ್​ಗಳನ್ನು ಹೊಸೂರಿಗೆ ಸ್ಥಳಾಂತರ ಮಾಡಬಹುದು ಎಂದು ತಿಳಿಸಿದ್ದಾರೆ. ಅಲ್ಲಿಯವರೆಗೆ ರಸ್ತೆ ಕಾಮಗಾರಿ ಬಹುತೇಕ ಮುಗಿಯಲಿದೆ. ಹೊಸೂರಿಗೆ ಹಳೇ ಬಸ್ ನಿಲ್ದಾಣದ ಸುಮಾರು 300 ಬಸ್​ಗಳು ಸ್ಥಳಾಂತರವಾಗಲಿವೆ. ಅದೇ ರೀತಿ ಹೊಸ ಬಸ್ ನಿಲ್ದಾಣಕ್ಕೆ 150 ಬಸ್ ಕಳಿಸಲಾಗುವುದು ಎಂದು ಅವರು ತಿಳಿಸಿದರು. ಬಿಆರ್​ಟಿಎಸ್ ಯೋಜನೆಯಂತೆ ನವಲೂರ ಮೇಲ್ಸೇತುವೆ ಪೂರ್ಣಗೊಳಿಸಲು ಗ್ರಾಮಸ್ಥರ ಸಲಹೆಯಂತೆ ಹೊಸದಾಗಿ ನಕ್ಷೆ ತಯಾರಿಸಲಾಗಿದೆ. ಈಗಾಗಲೇ ಅನುಮೋದನೆ ನೀಡಲಾಗಿದ್ದು, ಶೀಘ್ರ ಕೆಲಸ ನಡೆಯಲಿದೆ. ನವಲೂರ ವಿಠ್ಠಲ ಮಂದಿರ ಬಳಿ ಚಿಗರಿ ಬಸ್ ಶೆಲ್ಟರ್ ನಿರ್ವಿುಸಲಾಗುವುದು ಎಂದು ಚೋಳನ್ ತಿಳಿಸಿದರು.

    ಹೊಸೂರ ಹಾಗೂ ಹೊಸ ಬಸ್ ನಿಲ್ದಾಣಗಳಿಗೆ ಸ್ಥಳಾಂತರವಾಗುವ ಬಸ್​ಗಳ ಬಗ್ಗೆ ಶೀಘ್ರ ಸಂಸ್ಥೆಯಿಂದ ಅಧಿಸೂಚನೆ ಹೊರಡಿಸಲಾಗುವುದು. ಮಾ. 1ರಿಂದ ಹಂತಹಂತವಾಗಿ ಹೊಸೂರ ನಿಲ್ದಾಣ ಬಳಕೆಯಾಗಲಿದೆ.

    | ರಾಜೇಂದ್ರ ಚೋಳನ್ಎಂ, ಡಿ ವಾಯವ್ಯ ಸಾರಿಗೆ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts