More

    ಧರ್ಮ ದಾರಿಯಲ್ಲಿ ನಡೆದರೆ ನೆಮ್ಮದಿ ಸಾಧ್ಯ

    ಹಾಸನ: ಪ್ರತಿಯೊಬ್ಬ ವ್ಯಕ್ತಿಯೂ ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರ ನೆಮ್ಮದಿಯ ಜೀವನ ಕಾಣಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.


    ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮದಲ್ಲಿ ಶ್ರೀ ಬಾಣೇಶ್ವರ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.


    ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿದ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ವ್ಯರ್ಥವಾಗುತ್ತದೆ. ಧರ್ಮದ ಆಚರಣೆಯಿಂದ ಸುಖವನ್ನು ಪರಿಪಾಲನೆ ಮಾಡಬೇಕಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿ ಸಕಲರ ಬಾಳಿಗೂ ಬೆಳಕನ್ನು ತೋರಿದ್ದಾರೆ ಎಂದು ಸ್ಮರಿಸಿದರು.


    ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರು ವೀರಶೈವ ಧರ್ಮ ಸಂಸ್ಕೃತಿಯನ್ನು ಬೆಳೆಸಿದರು. ಪ್ರಾಚೀನ ಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ,್ವ ಸಿದ್ಧಾಂತಗಳನ್ನು ಶರಣರು ಅಚ್ಚ ಕನ್ನಡದಲ್ಲಿ ಜನತೆಗೆ ಮುಟ್ಟಿಸುವ ಕಾರ್ಯವನ್ನು ಮಾಡಿದ್ದಾರೆ ಎಂದರು.


    ಶಿವಪಥವನವರಿವೊಡೆ ಗುರುಪಥ ಮೊದಲು ಎನ್ನುವ ಸೂಕ್ತಿಯಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು, ಬದುಕಿನ ಕತ್ತಲೆ ದೂರ ಮಾಡಲು ಶ್ರೀ ಗುರು ಬೇಕೇ ಬೇಕು ಎಂದು ತಿಳಿಸಿದರು.


    ರಾಮಾಯಣದ ಕುರುಹು ಆಗಿರುವ ಬಾಣಾವರ ಇತಿಹಾಸ ಪ್ರಸಿದ್ಧವಾದ ಬಾಣೇಶ್ವರ ದೇವಸ್ಥಾನವನ್ನು ಭವ್ಯವಾಗಿ ಶಿಲಾಮಂಟಪ ನಿರ್ಮಿಸಿ ಮರು ಪ್ರತಿಷ್ಠಾಪನೆ ಮಾಡಿರುವುದು ಸಂತೋಷ ತಂದಿದೆ. ಇದಕ್ಕಾಗಿ ಶ್ರಮಿಸಿದ ಸಮಿತಿಯ ಸದಸ್ಯರಿಗೆ ಮತ್ತು ಸತ್ಪಾತ್ರ ದಾನ ಮಾಡಿದ ಭಕ್ತರಿಗೆ ಭಗವಂತ ಒಳಿತು ಮಾಡಲಿ ಎಂದು ಆಶಿರ್ವದಿಸಿದರು.


    ಹೂಲಿಕೆರೆ ದೊಡ್ಡಮಠದ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯರು, ದೊಡ್ಡಗುಣಿ ಹಿರೇಮಠದ ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯರು, ಕೆ.ಬಿದರೆ ದೊಡ್ಡಮಠದ ಶ್ರೀಪ್ರಭುಕುಮಾರ ಶಿವಾಚಾರ್ಯರು ಪಾಲ್ಗೊಂಡು ಉಪದೇಶಾಮೃತ ನೀಡಿದರು.


    ಸಮಾರಂಭಕ್ಕೂ ಮುನ್ನ ಮುಖ್ಯ ರಸ್ತೆಯಿಂದ ದೇವಸ್ಥಾನದವರೆಗೆ ಅಲಂಕೃತ ಸಾರೋಟು ಮೆರವಣಿಗೆ ಮೂಲಕ ಜಗದ್ಗುರುವನ್ನು ಬರಮಾಡಿಕೊಳ್ಳಲಾಯಿತು. ಆರತಿ ಹಿಡಿದ ಸುಮಂಗಲೆಯರು, ವೀರಗಾಸೆ, ವಾದ್ಯ ವೈಭವಗಳೊಂದಿಗೆ ಭವ್ಯ ಮೆರವಣಿಗೆ ಸಾಗಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts