More

    ಸಿದ್ಧವಾಗದ ಹಾಸ್ಟೆಲ್ ಹೊಸ ಕಟ್ಟಡ, ಖಾಸಗಿ ಕಟ್ಟಡದಲ್ಲೇ ವಾಸ್ತವ್ಯ

    ಲಕ್ಷ್ಮೇಶ್ವರ: ಪಟ್ಟಣದಲ್ಲಿ 4 ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ವಿದ್ಯಾರ್ಥಿಗಳಿಗೆ ಹೊಸ ಕಟ್ಟಡ ಭಾಗ್ಯದಿಂದ ವಂಚಿತರಾಗಿದ್ದಾರೆ.
    ಪಟ್ಟಣದ ಇಟ್ಟಿಕೇರಿ ಹತ್ತಿರ 2020ರಲ್ಲಿ 3.12 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಯಿತು. ಗುತ್ತಿಗೆ ಪಡೆದ ಸಂಸ್ಥೆಯವರು ನಿಗದಿಯಂತೆ 18 ತಿಂಗಳ ಅವಧಿಯಲ್ಲಿ ಕೆಲಸ ಮುಗಿಸಬೇಕಿತ್ತು. ಆದರೆ, 3 ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.
    ಸರ್ಕಾರ ಗ್ರಾಮೀಣ ಭಾಗದ ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಾಂತರ ರೂಪಾಯಿ ಅನುದಾನ ಕಲ್ಪಿಸಿದರೂ ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷೃದಿಂದ ಉದ್ದೇಶಗಳು ಈಡೇರುತ್ತಿಲ್ಲ. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಮುಂಬರುವ ಶೈಕ್ಷಣಿಕ ವರ್ಷಕ್ಕಾದರೂ 100 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಓದಲು ಅವಕಾಶ ಸಿಕ್ಕಂತಾಗುತ್ತದೆ ಎಂಬುದು ಪಾಲಕರ ಮತ್ತು ವಿದ್ಯಾರ್ಥಿಗಳ ಒತ್ತಾಯ.
    ಖಾಸಗಿ ಕಟ್ಟಡದಲ್ಲಿ ಹಾಸ್ಟೆಲ್: ಕಳೆದ ಹಲವು ವರ್ಷಗಳಿಂದ ಡಿ.ದೇವರಾಜ ಅರಸು ಬಾಲಕಿಯರ ವಸತಿ ನಿಲಯ ಪಟ್ಟಣದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯವಾಗಿ 100 ವಿದ್ಯಾರ್ಥಿಗಳು ಇರಬಹುದಾದ ಈ ವಸತಿ ನಿಲಯಕ್ಕೆ ಸ್ವಂತ ಕಟ್ಟಡ ಇಲ್ಲದ್ದರಿಂದ ಪ್ರತಿವರ್ಷ 65ರಿಂದ 70 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಸ್ವಂತ ಕಟ್ಟಡ ಇಲ್ಲದ್ದರಿಂದ ಸರ್ಕಾರದಿಂದ ಬರುವ ಸೌಲಭ್ಯಗಳೂ ಬರುತ್ತಿಲ್ಲ. ವಿದ್ಯಾರ್ಥಿಗಳು ಅಗತ್ಯ ಸೌಲಭ್ಯಗಳಿಲ್ಲದೆ ಕಾಲ ಕಳೆಯುವಂತಾಗಿದೆ. ಪಟ್ಟಣದಲ್ಲಿ ಇಂಜನಿಯರಿಂಗ್, ಬಿ.ಇಡಿ, ಪದವಿ, ಪಪೂ ಕಾಲೇಜ್ ಇರುವುದರಿಂದ ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಅಗತ್ಯ ಬಹಳಷ್ಟಿದೆ. ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖೆಯ 3 ಹಾಸ್ಟೆಲ್‌ಗಳು ಹಲವು ವರ್ಷದಿಂದ ಖಾಸಗಿ ಕಟ್ಟಡದಲ್ಲಿ ಮೂಲಸೌಲಭ್ಯಗಳ ಕೊರತೆಯ ನಡುವೆ ವರ್ಷ ಕಳೆಯುತ್ತಿವೆ.

    ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸಿದರೆ ಬರುವ ಶೈಕ್ಷಣಿಕ ವರ್ಷಕ್ಕಾದರೂ 100 ವಿದ್ಯಾರ್ಥಿನಿಯರಿಗೆ ಅವಕಾಶ ಸಿಗಬಹುದು. ಕಟ್ಟಡದ ಕಾಮಗಾರಿ ಬೇಗ ಮುಕ್ತಾಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರ ಸಂಸ್ಥೆಗೆ ಹಿರಿಯ ಅಧಿಕಾರಿಗಳು, ಶಾಸಕರು ಸೂಚಿಸಿದ್ದಾರೆ. ಗುತ್ತಿಗೆದಾರರು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ.
    -ಎಸ್.ಬಿ. ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts