More

    ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ; ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ

    ತಿಪಟೂರು: ಕಲ್ಪತರು ನಾಡಿನಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ದೊರೆಯಿತು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಹೊನ್ನವಳ್ಳಿ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಿಯೇ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

    ತಾಲೂಕಿನ ಬಿದರೆಗುಡಿಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಬಿದರಾಂಬಿಕಾ ದೇವಿಯ ಪೂಜೆಯೊಂದಿಗೆ ಬುಧವಾರ ಜಿಲ್ಲೆಯಲ್ಲಿ ಪಂಚರತ್ನ ರಥ ಯಾತ್ರೆಗೆ ಚಾಲನೆ ನೀಡಿದ ಬಳಿಕ ಹೊನ್ನವಳ್ಳಿಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ತಂದೆ ಎಚ್.ಡಿ.ದೇವೇಗೌಡರಿಗೆ ಕ್ಷೇತ್ರದಲ್ಲಿ ಅತಿಹೆಚ್ಚು ಮತ ನೀಡಿದ್ದೀರಿ. ಈ ಭಾಗದ ಶಾಶ್ವತ ನೀರಾವರಿ ಯೋಜನೆ ರೂಪಿಸುವಂತೆ ನನಗೆ ಮನವಿ ಕೊಟ್ಟಿದ್ದನ್ನು ಮರೆತಿಲ್ಲ. ಆದರೆ, ನಮ್ಮ ಸರ್ಕಾರ ಪತನವಾಗಿದ್ದು ನಿಮಗೆ ಗೊತ್ತಿದೆ ಎಂದರು.

    ಟ್ರಿಬ್ಯೂನಲ್‌ನಲ್ಲಿ ನೀರಿನ ಹಂಚಿಕೆಯಾಗಿದ್ದರೂ ನಮ್ಮ ಪಾಲಿನ ನೀರನ್ನು ದಕ್ಕಿಸಿಕೊಳ್ಳಲು ಅಡ್ಡಿಪಡಿಸುತ್ತಿರುವ ತಮಿಳುನಾಡು, ತೆಲಂಗಾಣ ಮತ್ತು ಆಂಧ್ರದ ವಿಷಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಮೂಲಕ ರಾಜ್ಯದ ಪಾಲಿನ ಒಂದು ಹನಿ ನೀರನ್ನೂ ವ್ಯರ್ಥಮಾಡದೆ, ಇಡೀ ರಾಜ್ಯಕ್ಕೆ ಸಮಗ್ರ ಮತ್ತು ಶಾಶ್ವತ ನೀರಾವರಿ ಯೋಜನೆಯನ್ನು ರೂಪಿಸುವುದು ಪಂಚರತ್ನ ಯಾತ್ರೆಯ ಧ್ಯೇಯ ಎಂದು ಎಚ್ಡಿಕೆ ಹೇಳಿದರು.

    ಜನರ ಹಣ ಲೂಟಿ ಮಾಡುವ ಬಿಜೆಪಿ: ಓರ್ವ ಬಿಜೆಪಿ ಶಾಸಕರ ಮನೆಯಲ್ಲಿ ಲೆಕ್ಕವಿಲ್ಲದ 8 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಸಾರ್ವಜನಿಕರ ಹಣವನ್ನು ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಕುಮಾರಸ್ವಾಮಿ ಗುಡುಗಿದರು. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಬಡತನ, ಶ್ರೀಮಂತಿಕೆಯ ತಾರತಮ್ಯ ಮುಂದುವರಿದಿದೆ. ಜಾತಿಗಳ ಮಧ್ಯೆ ಅಪನಂಬಿಕೆ ಸೃಷ್ಟಿಸಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿವೆ. ಧರ್ಮ, ಜಾತಿಯ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡುವ ಈ ಪಕ್ಷಗಳಿಗೆ ಜನರ ಕಷ್ಟದ ಬಗ್ಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಸಾರ್ವಜನಿಕವಾಗಿ ಸಂಘರ್ಷವನ್ನು ಉಂಟುಮಾಡಿ ಮತ ಪಡೆಯಲು ಹೊರಟಿದ್ದಾರೆ. ಈ ಪಕ್ಷಗಳ ಸಹವಾಸ ಬೇಡವೆಂದು ಜನ ನಿರ್ಧರಿಸಿದ್ದಾರೆ ಎಂದರು.

    ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ತಡಸೂರು ಗುರುಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಶಿವಸ್ವಾಮಿ, ಮಾಜಿ ಅಧ್ಯಕ್ಷ ಜಕ್ಕನಹಳ್ಳಿ ಲಿಂಗರಾಜು, ರಮೇಶ್, ರೇಖಾಅನೂಪ್, ಜಿಪಂ ಮಾಜಿ ಸದಸ್ಯೆ ರಾಧಾನಾರಾಯಣ್, ಗೊರಗೊಂಡನಹಳ್ಳಿ ಟಿಎಪಿಸಿಎಂಎಸ್‌ನ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

    ನನ್ನದು ಏಕಾಂಗಿ ಹೋರಾಟ: ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನಾಯಕರ ದಂಡೇ ಇದೆ. ಆದರೆ ಜೆಡಿಎಸ್‌ನಲ್ಲಿ ನನ್ನದು ಏಕಾಂಗಿ ಹೋರಾಟ. ಪಕ್ಷದ ಅಭ್ಯರ್ಥಿ ಕೆ.ಟಿ.ಶಾಂತಕುಮಾರ್ ಕಳೆದ ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕೂರದೇ ಜನರ ಕಷ್ಟಗಳಲ್ಲಿ ಭಾಗಿಯಾಗಿ ನಿಮ್ಮೆಲ್ಲರ ದನಿಯಾಗಿದ್ದಾರೆ. ಅವರ ಒಳ್ಳೆಯ ನಡವಳಿಕೆಯನ್ನು ಜನ ಗುರುತಿಸಿದ್ದಾರೆ. ತಾಲೂಕಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಶಾಂತಕುಮಾರ್ ಅವರನ್ನು ಗೆಲ್ಲಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
    ಹುಸಿ ಆಶ್ವಾಸನೆ ನೀಡಿ ವಂಚನೆ: ರಾಜಕಾರಣಿಗಳ ಹುಸಿ ಆಶ್ವಾಸನೆಗಳನ್ನು ನಂಬಿ ಈ ಭಾಗದ ರೈತರು ವಂಚನೆಗೆ ಒಳಗಾಗಿದ್ದಾರೆ. ನೀರಿಗಾಗಿ ಇಲ್ಲಿ ಹಲವಾರು ಹೋರಾಟ, ಚುನಾವಣೆ ಬಹಿಷ್ಕಾರಗಳು ನಡೆದರೂ ಗೆದ್ದು ಅಧಿಕಾರ ಅನುಭವಿಸುತ್ತಿರುವ ರಾಜಕಾರಣಿಗಳು ಇತ್ತ ತಲೆ ಹಾಕಿಲ್ಲ. ತಾಲೂಕಿನಲ್ಲಿ ಒಂದೇ ಒಂದೂ ಪ್ರಗತಿಪರ ಕೆಲಸ ನಡೆದಿಲ್ಲ. ಹಿಂದುತ್ವದ ಮಂತ್ರ ಜಪಿಸಿಕೊಂಡು ರಾಜಕಾರಣ ಮಾಡುವುದು ಬಿಟ್ಟರೆ ಇಲ್ಲಿನ ಶಿಕ್ಷಣ ಸಚಿವರಿಗೆ ಸೋರುತ್ತಿರುವ ಶಾಲೆಗಳ ಸೂರುಗಳ ಬಗ್ಗೆ ಗಮನವಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಕೆ.ಟಿ.ಶಾಂತಕುಮಾರ್ ಹರಿಹಾಯ್ದರು.

    3 ಇಂಚಿನ ಪೈಪ್ ಮೂಲಕ ಹೊನ್ನವಳ್ಳಿ ಕೆರೆ ತುಂಬಿಸಲು ಹೊರಟಿದ್ದಾರೆ. ಈ ಭಾಗದಲ್ಲಿ ಆಗಬೇಕಿದ್ದ ಎತ್ತಿನಹೊಳೆ ಯೋಜನೆಯ ಚೆಕ್ ಡ್ಯಾಂ ಅನ್ನು ಸಚಿವರ ಅನುಕೂಲಕ್ಕಾಗಿ ಹಾಲ್ಕುರಿಕೆ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ನಿರ್ಮಿಸುತ್ತಿರುವುದಕ್ಕೆ ನನ್ನ ವಿರೋಧವಿದೆ. ನನ್ನನ್ನು ಗೆಲ್ಲಿಸಿದರೆ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿಯೇ ಸಿದ್ದ ಎಂದರು.

    ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ; ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ

    ಹೊನ್ನವಳ್ಳಿ ಭಾಗದ ಕೆರೆಗಳನ್ನು ಯಾವ ರಾಜಕಾರಣಿಗಳೂ ತುಂಬಿಸಿಲ್ಲ. ದೇವರ ದಯೆ ಮತ್ತು ಪ್ರಕೃತಿಯ ಕೃಪೆಯಿಂದ ಕೆರೆಗಳು ತುಂಬಿವೆ. ಹೊನ್ನವಳ್ಳಿ ಭಾಗಕ್ಕೆ ಎತ್ತಿನಹೊಳೆ ನೀರು ದಕ್ಕಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹೇಮಾವತಿ ನೀರಿನಿಂದ ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಿಯೇ ಸಿದ್ದ, ಇಲ್ಲದಿದ್ದರೆ ನಮ್ಮ ಪಕ್ಷವನ್ನು ವಿಸರ್ಜಿಸುತ್ತೇನೆ.
    | ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

    ಹೊನ್ನವಳ್ಳಿ ಭಾಗದ ಜನತೆ ರಾಜಕಾರಣಿಗಳ ಹುಸಿ ಭರವಸೆ ನಂಬಿ ವಂಚಿತರಾಗಿದ್ದಾರೆ. ಮುಂದಿನ ರಾಜಕಾರಣಿಯ ಆಯ್ಕೆ ಈ ಭಾಗದ ಜನರ ತೀರ್ಮಾನದ ಮೇಲೆ ಅವಲಂಬಿತವಾಗಿದೆ. ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿದ್ದರೂ ಇಲ್ಲಿನ ಸಚಿವರು ಒಮ್ಮೆಯೂ ರೈತರ ಪರ ದನಿ ಎತ್ತಿಲ್ಲ.
    ಕೆ.ಟಿ. ಶಾಂತಕುಮಾರ್ ಜೆಡಿಎಸ್ ಅಭ್ಯರ್ಥಿ

    ಎಚ್ಡಿಕೆ ಕಣ್ಣಿಗೆ ಬೀಳಲಿಲ್ಲ! ಬಿದರೆಗುಡಿಗೆ ಹೋಗುವ ಮಾರ್ಗದಲ್ಲಿ ನಗರದ ರಸ್ತೆಬದಿಯಲ್ಲಿ ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆಗಾಗಿ ಕಳೆದ 17 ದಿನಗಳಿಂದ ಧರಣಿ ಕುಳಿತಿರುವ ಮಣ್ಣಿನ ಮಕ್ಕಳ ಹೋರಾಟವು ಮಣ್ಣಿನ ಮಗ ಎಚ್.ಡಿ.ಕುಮಾರಸ್ವಾಮಿ ಕಣ್ಣಿಗೆ ಬೀಳಲೇ ಇಲ್ಲ.

    ದಾರಿತಪ್ಪಿ ಜೆಡಿಎಸ್ ಬಸ್ ಹತ್ತಿದ್ದವರು! ಸಚಿವ ಕೆ.ನಾರಾಯಣಗೌಡ ದಾರಿತಪ್ಪಿ ಜೆಡಿಎಸ್ ಬಸ್ ಹತ್ತಿದ್ದವರು, ಈಗ ಎಲ್ಲೊ ಹೋದರೆ ನಾವೇನು ಮಾಡಲಿ ಎಂದು ಬಾಂಬೆ ಬಾಯ್ಸ ಪಕ್ಷಾಂತರದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತನ್ನ ವಿರುದ್ಧ ದೇವೇಗೌಡರ ಸ್ಪರ್ಧೆಗೆ ಸವಾಲು ಹಾಕಿರುವ ನಾರಾಯಣಗೌಡ ಅಂತಹ ದೊಡ್ಡವರ ವಿರುದ್ಧ ನಾನು ಏನು ಹೇಳಲಿ ಎಂದು ವ್ಯಂಗ್ಯವಾಡಿದರು.

    ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ; ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ

    ರೈತರ ಮಕ್ಕಳ ಮದುವೆ ಆಗುವ ಹೆಣ್ಮಕ್ಕಳಿಗೆ 2 ಲಕ್ಷ ರೂ., ಪ್ರೋತ್ಸಾಹಧನ ! ಹಳ್ಳಿಯ ರೈತರ ಮಕ್ಕಳನ್ನು ಮದುವೆಯಾದರೆ 2 ಲಕ್ಷ ರೂ., ಪ್ರೋತ್ಸಾಹಧನ ಕೊಡುವ ಯೋಜನೆಯನ್ನು ಜೆಡಿಎಸ್ ಸರ್ಕಾರ ಬಂದರೆ ಜಾರಿಗೆ ತರಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

    ಹಳ್ಳಿಯ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲ್ಲ. ಹಾಗಾಗಿ, ರೈತರ ಮಕ್ಕಳನ್ನು ಮದುವೆಯಾಗೋ ಹೆಣ್ಮಕ್ಕಳಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹಧನವಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಡುವುದಾಗಿ ಹಾಲ್ಕುರ್ಕೆಯಲ್ಲಿ ಭರವಸೆ ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts