More

    ಏಕತೆಯೇ ಸಂವಿಧಾನದ ಆಶಯ: ಓದು ಅಭಿಯಾನ ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ಅಭಿಮತ

    ಮಾಗಡಿ: ವಿವಿಧತೆಯಲ್ಲಿ ಏಕತೆ ಸಾಧಿಸಲು ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಗಳನ್ನು ಪರಿಚಯಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಹೇಳಿದರು.

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನಯಡಿ ಸೋಮವಾರ ಏರ್ಪಡಿಸಿದ್ದ ಅಂಬೇಡ್ಕರ್ ಓದು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶಭಕ್ತಿ, ಸೌಹಾರ್ದತೆ, ಭಾವೈಕ್ಯತೆ ಕಲಿಸುವುದರ ಜತೆಗೆ ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳನ್ನು ಬೆಳೆಸಲು ಅಭಿಯಾನ ಆಯೋಜಿಸಲಾಗಿದೆ ಎಂದರು.

    ಕನ್ನಡ ಸಹೃದಯ ಬಳಗದ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಮೇಜರ್ ಡಾ.ಮುನಿರಾಜಪ್ಪ ಮಾತನಾಡಿ, ವರ್ಗ ಸಂಘರ್ಷ, ಜಾತೀಯತೆ ತೊಲಗಿಸಲು ಜೀವನ ಪೂರ್ತಿ ಶ್ರಮಿಸಿದ್ದ ಅಂಬೇಡ್ಕರ್ ಜೀವನ ಚರಿತ್ರೆ, ಅವರು ರಚಿಸಿರುವ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ಹಿಂದು ಸಮಾಜದಲ್ಲಿ ಸ್ತ್ರೀಯರ ಸಬಲೀಕರಣವಾಗಿಲ್ಲ. ಪತ್ನಿ ಚುನಾವಣೆಯಲ್ಲಿ ಆಯ್ಕೆಯಾದರೂ ಸಹ ಗಂಡ ಅಧಿಕಾರ ಚಲಾಯಿಸುವುದನ್ನು ಕಾಣುತ್ತಿದ್ದೇವೆ. ಗ್ರಾಮಪಂಚಾಯಿತಿಯಿಂದ ಸಂಸತ್ತಿನವರೆಗೆ ಮತ ಖರೀದಿ ನಡೆದಿದೆ. ಪಂಚಾಯತ್ ರಾಜ್ ಗೆ ಮಹತ್ವ ತಂದು ಕೊಟ್ಟಿದ್ದ ನಜೀರ್ ಸಾಬ್ ಅವರ ಆದರ್ಶಗಳು ಇಂದು ಮಣ್ಣು ಪಾಲಾಗಿವೆ ಎಂದರು.

    ಅಂಬೇಡ್ಕರ್ ಬೋಧಿಸಿದ್ದ ಮೂರು ರತ್ನಗಳಾದ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ದಲಿತರಲ್ಲಿ ಪ್ರಾಮಾಣಿಕ ನಾಯಕತ್ವ ಬೆಳೆಯಬೇಕು ಎಂದರು.

    ಪ್ರಾಂಶುಪಾಲೆ ಡಾ. ಎಸ್. ಶೈಲಜಾ ಮಾತನಾಡಿ, ನಿರ್ಬಂಧಗಳ ನಡುವೆ ಅರಳಿದ ಅಮರಜ್ಯೋತಿ ಅಂಬೇಡ್ಕರ್. ಅವರ ಆದರ್ಶಗಳನ್ನು ನಾವೆಲ್ಲರೂ ಮನನ ಮಾಡಿಕೊಳ್ಳಬೇಕಿದೆ. ಪರಿವರ್ತನೆಗೆ ಅಂಬೇಡ್ಕರ್ ಮಾರ್ಗದರ್ಶನ ಮರೆಯಬಾರದು ಎಂದರು.

    ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಡಾ. ಪಿ. ನಂಜುಂಡ, ಸಂಸ್ಕೃತಿ ಚಿಂತಕ ಡಾ. ಅಂಕನಹಳ್ಳಿ ಪಾರ್ಥ ಮಾತನಾಡಿದರು. ಕನ್ನಡ ಸಹೃದಯ ಬಳಗದ ಕಾರ್ಯದರ್ಶಿ ಬಿ.ಎಂ.ಮಾರಣ್ಣ, ಪೊ›. ತಿಮ್ಮಹನುಮಯ್ಯ, ಪೊ›. ಎಸ್. ಮಂಜುನಾಥ, ಪೊ›. ಸೀಮಾ ಕೌಸರ್, ಪೊ›. ಜಗದೀಶ್ ನಡುವಿನ ಮಠ, ಡಾ. ಸಿ. ಚಿದಾನಂದ ಸ್ವಾಮಿ ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಮಾತನಾಡಿದರು. ಪೊ›. ವಿ. ಭಾಸ್ಕರ್ ಸಾಕ್ಷ್ಯಚಿತ್ರ ಪ್ರದರ್ಶಿಸಿದರು. ಬೋಧಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

    ಆಶುಭಾಷಣ ಸ್ಪರ್ಧೆ ವಿಜೇತರು: ಅಂಬೇಡ್ಕರ್ ಓದು ಅಧ್ಯಯನದ ಬಗ್ಗೆ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ 26 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಚಲಾ (ಪ್ರಥಮ), ಎಂ.ಎಸ್. ದೇವಿಕಾ (ದ್ವಿತೀಯ), ಕಾವ್ಯಶ್ರೀ (ತೃತೀಯ) ಬಹುಮಾನ ಗಳಿಸಿದರು.

    ಸಹಾಯಕ ನಿರ್ದೇಶಕ ವಿನಯ್ಕುಮಾರ್.ಬಿ.ವಿ.ಅಂಬೇಡ್ಕರ್ ಕೃತಿ ಶ್ರೇಣಿಯ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts