More

    ಪಂಪ್‌ವೆಲ್‌ನಲ್ಲಿ ಅಂಡರ್‌ಪಾಸ್: ಸ್ಮಾರ್ಟ್‌ಸಿಟಿಯಿಂದ ಯೋಜನೆ

    ಹರೀಶ ಮೋಟುಕಾನ ಮಂಗಳೂರು

    ನಗರದ ಪಂಪ್‌ವೆಲ್‌ನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಸ್ ಟರ್ಮಿನಲ್ ಯೋಜನೆ ಕಾರ್ಯಗತಗೊಂಡ ಬಳಿಕ ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಮತ್ತೊಂದು ಅಂಡರ್‌ಪಾಸ್ ನಿರ್ಮಾಣಕ್ಕೆ ಸ್ಮಾರ್ಟ್‌ಸಿಟಿಯಿಂದ ಯೋಜನೆ ರೂಪಿಸಲಾಗುತ್ತಿದೆ.

    ಪಂಪ್‌ವೆಲ್‌ನಲ್ಲಿ ನೂತನ ಬಸ್ ಟರ್ಮಿನಲ್ ಯೋಜನೆ ಸದ್ಯದಲ್ಲೇ ಸಾಕಾರಗೊಳ್ಳುವ ನಿರೀಕ್ಷೆಯಲ್ಲಿದೆ. ಬಸ್ ಟರ್ಮಿನಲ್‌ಗೆ ಪೂರಕವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಬಸ್ ಟರ್ಮಿನಲ್ ವಿನ್ಯಾಸದಲ್ಲಿ ಬದಲಾವಣೆಯಾದರೆ ಅಂಡರ್‌ಪಾಸ್ ಬದಲಾಯಿಸುವ ಸನ್ನಿವೇಶ ಎದುರಾಗಬಹುದು. ಅದಕ್ಕಾಗಿ ಅಂಡರ್‌ಪಾಸ್ ನಿರ್ಮಾಣ ಸದ್ಯ ಮುಂದೂಡಿದ್ದಾರೆ.
    ನೂತನ ಅಂಡರ್‌ಪಾಸ್ ಎಲ್ಲ ರೀತಿಯ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸುಮಾರು 5.5 ಮೀ. ಎತ್ತರ ಮತ್ತು 10 ಮೀ. ನಷ್ಟು ಅಗಲವಿರಲಿದೆ. ಪಂಪ್‌ವೆಲ್ ಮೇಲ್ಸೇತುವೆ ಆರಂಭದಲ್ಲಿ, ಬಸ್ ಟರ್ಮಿನಲ್‌ಗೆ ತಾಗಿಕೊಂಡು ಕೆಳ ಸೇತುವೆ ನಿರ್ಮಾಣಕ್ಕೆ ಯೋಚಿಸಲಾಗಿದ್ದು, ಬಳಿಕ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಕಡಿಮೆಯಾಗಬಹುದು ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು.

    ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆ ನಿರ್ಮಾಣದ ವೇಳೆ ಒಂದು ಕಡೆ ಅಂಡರ್‌ಪಾಸ್ ನಿರ್ಮಿಸಲಾಗಿದೆ. ಸುತ್ತಲಿನ ಸಾರ್ವಜನಿಕರ ಬೇಡಿಕೆಯ ಅನ್ವಯ ಇಂಡಿಯಾನ ಆಸ್ಪತ್ರೆ ಕಡೆಯಿಂದ ಕಂಕನಾಡಿ ಕಡೆಗೆ ಹೋಗಲು ಉಜ್ಜೋಡಿಯಲ್ಲಿ ಕೆಳ ಸೇತುವೆ ನಿರ್ಮಾಣಗೊಳಿಸಲಾಗಿದ್ದು, ಇದರಲ್ಲಿ ಲಘು ವಾಹನ ಸಂಚಾರವಿದೆ. ಆದರೆ, ಬಸ್ ಸೇರಿದಂತೆ ಘನ ವಾಹನ ಸಂಚಾರ ಕಷ್ಟ. ಇದೀಗ ನೂತನವಾಗಿ ನಿರ್ಮಾಣವಾಗಲಿರುವ ಪಂಪ್‌ವೆಲ್ ಬಸ್ ಟರ್ಮಿನಲ್ ಬಳಿಯ ಅಂಡರ್‌ಪಾಸ್‌ನಲ್ಲಿ ಬಸ್‌ಗಳ ಸಂಚಾರಕ್ಕೂ ಅನುವು ಮಾಡುವ ನಿರೀಕ್ಷೆ ಇದೆ.

    ಬಸ್ ಟರ್ಮಿನಲ್‌ಗೆ ಮರು ಟೆಂಡರ್: ಬಹುನಿರೀಕ್ಷಿತ ಪಂಪ್‌ವೆಲ್ ಬಸ್ ಟರ್ಮಿನಲ್ ಮರು ಟೆಂಡರ್‌ಗೆ ಸ್ಮಾರ್ಟ್‌ಸಿಟಿ ಸಿದ್ಧತೆ ನಡೆಸುತ್ತಿದ್ದು, ಸದ್ಯದಲ್ಲೇ ನೀಲಿ ನಕ್ಷೆ ಅಂತಿಮಗೊಳ್ಳಲಿದೆ. ಪಂಪ್‌ವೆಲ್ ಬಸ್ ನಿಲ್ದಾಣ ವಿನ್ಯಾಸ ಯಾವ ರೀತಿಯಲ್ಲಿ ಇರಬೇಕು ಎಂಬ ಬಗ್ಗೆ ಸ್ಮಾರ್ಟ್‌ಸಿಟಿಯು ಕೆಲ ಸಂಸ್ಥೆಗಳಿಗೆ ಆಹ್ವಾನ ನೀಡಿತ್ತು. ಅದರಂತೆ ಹೈದರಾಬಾದ್, ಬೆಂಗಳೂರು, ಮಂಗಳೂರು ಸೇರಿದಂತೆ ಕೆಲವೊಂದು ಸಂಸ್ಥೆಗಳು ನೀಲಿ ನಕ್ಷೆ ತಯಾರಿಸಲು ಮುಂದಾಗಿವೆ. ಸದ್ಯದಲ್ಲೇ ಅಂತಿಮಗೊಳ್ಳಲಿದ್ದು, ಬಳಿಕ ಟೆಂಡರ್ ಪ್ರಕ್ರಿಯೆ ನಡೆಸಿ, ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ 445 ಕೋಟಿ ರೂ. ವೆಚ್ಚದಲ್ಲಿ ಪಂಪ್‌ವೆಲ್‌ನಲ್ಲಿ ಇಂಟಿಗ್ರೇಟೆಡ್ ಬಸ್ ಟರ್ಮಿನಲ್ ಮತ್ತು ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಯೋಜನೆಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕೆ ಮೂರು ಬಾರಿ ಟೆಂಡರ್ ಕರೆಯಲಾಗಿದ್ದರೂ ಗುತ್ತಿಗೆ ವಹಿಸಲು ಯಾರೂ ಮುಂದೆ ಬಾರದ ಕಾರಣ ಯೋಜನೆಗೆ ಹಿನ್ನಡೆಯಾಗಿತ್ತು. ಇದೀಗ ಬಸ್ ನಿಲ್ದಾಣದ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿ, ಟೆಂಡರ್ ಮೊತ್ತವನ್ನು 445 ಕೋಟಿ ರೂ. ನಿಂದ ಸುಮಾರು 100 ಕೋಟಿ ರೂ.ಗೆ ಇಳಿಕೆ ಮಾಡಲು ಸ್ಮಾರ್ಟ್‌ಸಿಟಿ ನಿರ್ಧರಿಸಿದೆ.

    ಪಂಪ್‌ವೆಲ್‌ನಲ್ಲಿ ಬಸ್ ಟರ್ಮಿನಲ್ ನಿರ್ಮಾಣ ಯೋಜನೆ ಕಾರ್ಯಗತದಲ್ಲಿದ್ದು, ಅದಕ್ಕೆ ಪೂರಕವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡಲಾಗುವುದು. ಈ ಎರಡು ಯೋಜನೆಗಳು ಕಾರ್ಯಗತಗೊಂಡರೆ ನಗರದಲ್ಲಿ ಸಂಚಾರ ದಟ್ಟಣೆ ಒಂದಷ್ಟು ಕಡಿಮೆಯಾಗಬಹುದು.
    -ಅರುಣಪ್ರಭ, ಜನರಲ್ ಮ್ಯಾನೇಜರ್ ಸ್ಮಾರ್ಟ್‌ಸಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts