More

    ಪಪೂ ಕಾಲೇಜು ಮಂಜೂರಾತಿಗೆ ಪಾದಯಾತ್ರೆ ನಾಳಿದ್ದು; ಬೂದಗುಂಪಾ ಸೇರಿ ತ್ರಿವಳಿ ಗ್ರಾಮಸ್ಥರ ನಿರ್ಧಾರ

    ಕಾರಟಗಿ: ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ತಾಲೂಕಿನ ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಗ್ರಾಮಸ್ಥರು ಜ.24ರಂದು ಪಟ್ಟಣದ ತಹಸಿಲ್ ಕಚೇರಿವರೆಗೆ ಪಕ್ಷಾತೀತವಾಗಿ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.

    ಬೂದಗುಂಪಾ ಗ್ರಾಮದ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಜತೆಗೆ ನಂದಿಹಳ್ಳಿ, ಕಕ್ಕರಗೋಳ, ಶೇಷಗಿರಿ ಕ್ಯಾಂಪ್, ಈಳಿಗನೂರು ಕ್ಯಾಂಪ್‌ಗಳ ವಿದ್ಯಾರ್ಥಿಗಳು ಪ್ರೌಢಶಾಲೆ ಬಳಿಕ ಮುಂದಿನ ಶಿಕ್ಷಣಕ್ಕೆ ಕಾರಟಗಿ, ಸಿಂಧನೂರು, ಗಂಗಾವತಿ ಸೇರಿದಂತೆ ವಿವಿಧ ಕಡೆಗೆ ಅಲೆದಾಡುವಂತಾಗಿದೆ. ಆದ್ದರಿಂದ ಪದವಿ ಪೂರ್ವ ಕಾಲೇಜು ಅಗತ್ಯವಿದೆ. ಇದು 30 ವರ್ಷಗಳ ಬೇಡಿಕೆಯಾಗಿದೆ. ಕಾಲೇಜಿಗಾಗಿ ಮೂರು ಎಕರೆ ಜಮೀನು ಮೀಸಲಿಟ್ಟು ಗ್ರಾಪಂ ಸಾಮಾನ್ಯ ಸಭೆಯಲ್ಲೂ ಠರಾವು ಪಾಸ್ ಮಾಡಲಾಗಿದೆ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಬೂದಗುಂಪಾ ಗ್ರಾಮಕ್ಕೆ ಪಪೂ ಕಾಲೇಜು ಮಂಜೂರಾಗುತ್ತಿಲ್ಲ. ಈ ಕುರಿತು ಸ್ಥಳೀಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಮಂಜೂರು ಮಾಡಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.

    ಸಭೆಯಲ್ಲಿ ಬಿಜೆಪಿ ಮುಖಂಡರಾದ ಗುರುಸಿದ್ದಪ್ಪ ಯರಕಲ್, ವೀರನಗೌಡ ಮಾಲೀಪಾಟೀಲ್, ಭರತೇಶ ಕೆಂಡದ್, ಶ್ರೀಧರ ಗೋನಾಳ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲೀಪಾಟೀಲ್, ಕಾಂಗ್ರೆಸ್ ಮುಖಂಡರಾದ ಬಸವರಾಜಪ್ಪ ಕುಲಕರ್ಣಿ, ಶಿವಕುಮಾರ ಬಜಾರ್, ಕೆ.ಚನ್ನಪ್ಪ ಹಾಗೂ ಹಳೇ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts