More

    ಅಭಿವೃದ್ಧಿ ವಂಚಿತ ಚಿನ್ನದ ಗಣಿ ಪ್ರದೇಶ, ಸರಕಾರದ ಅನುದಾನವೂ ಮರೀಚಿಕೆ

    ಹಟ್ಟಿಚಿನ್ನದಗಣಿ: ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬೂತ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನ ಹೊಂದಿರುವ ಚಿನ್ನದ ಗಣಿ ಕಂಪನಿ ವ್ಯಾಪ್ತಿಯ ಅಧಿಸೂಚಿತ ಪ್ರದೇಶ ಸಮಿತಿ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿ ಅಭಿವೃದ್ಧಿ ವಿಚಾರದಲ್ಲಿ ನಿಷ್ಕಾಳಜಿಗೊಳಪಟ್ಟಿವೆ.

    ಜಿಲ್ಲಾ ಕೇಂದ್ರ, ಮಾನ್ವಿ ಬಳಿಕ ಹಟ್ಟಿಯಲ್ಲಿ ಅತಿ ಹೆಚ್ಚಿನ ಬೂತ್‌ಗಳಿವೆ. ಈ ಮೂಲಕ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಪ್ರದೇಶವಾಗಿದ್ದರೂ ಹಟ್ಟಿ ಸಂಪೂರ್ಣ ನಿಷ್ಕಾಳಜಿಗೊಳಪಟ್ಟಿದೆ. ಅಧಿಸೂಚಿತ ಪ್ರದೇಶ ಸಮಿತಿಗೆ 17 ಬೂತ್‌ಗಳು ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 11 ಬೂತ್‌ಗಳು ಒಳಪಟ್ಟಿವೆ. ಎರಡೂ ಪ್ರದೇಶ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ.

    ತಾಲೂಕು ಕೇಂದ್ರವಾಗುವ ಅರ್ಹತೆ ಹೊದಿದ್ದರೂ ಪಟ್ಟಣ ಪಂಚಾಯಿತಿಗೆ ಸೀಮಿತವಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನೆಮ್ಮದಿ ಕೇಂದ್ರ, ಹೋಬಳಿ, ಕೃಷಿ ವಿಸ್ತರಣಾ ಕೇಂದ್ರ, ಪಶು ಚಿಕಿತ್ಸಾಲಯ, ಸಮುದಾಯ ಆರೋಗ್ಯ ಕೇಂದ್ರ, ಬಸ್ ಡಿಪೊ ಸೇರಿ ಯಾವುದೇ ಸೌಲಭ್ಯಗಳು ಇಲ್ಲಿಲ್ಲ. ಚಿನ್ನದ ಗಣಿ ಮೂಲಕ ಹಟ್ಟಿ ವಿಶ್ವ ಭೂಪಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ.

    ಅಧಿಸೂಚಿತ ಪ್ರದೇಶ ವ್ಯಾಪ್ತಿಯಲ್ಲಿ ಹಟ್ಟಿಚಿನ್ನದಗಣಿ ಕಂಪನಿಯಿಂದ ರಸ್ತೆ, ಕುಡಿವ ನೀರು, ಆಸ್ಪತ್ರೆ ಸೇರಿ ಇತರ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುವ ಅವಶ್ಯವೂ ಇಲ್ಲಿನ ಜನರಿಗಿಲ್ಲ. ಆದರೆ, ಕ್ಷೇತ್ರದ ಶಾಸಕ, ಸಂಸದರು, ವಿಧಾನ ಪರಿಷತ್ ಸದಸ್ಯರು ಅನುದಾನ ನೀಡಿ ಅಭಿವೃದ್ಧಿಪಡಿಸಿದ ಉದಾಹರಣೆಗಳಿಲ್ಲ.

    ವಲಸಿಗರೇ ಹೆಚ್ಚು

    ಪಟ್ಟಣದಲ್ಲಿನ ಶೇ.75 ನಿವಾಸಿಗಳು ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿರುವ ವಲಸಿಗರಾಗಿದ್ದಾರೆ. ಇದರಿಂದಾಗಿ ಸಾರಿಗೆ ಇಲಾಖೆಗೂ ಹೆಚ್ಚಿನ ಆದಾಯ ಇದೆ. ಆದರೂ, ಹಟ್ಟಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ತೀವ್ರವಾದ ಕುಡಿವ ನೀರಿನ ಸಮಸ್ಯೆ ಇದೆ. ಒಟ್ಟಾರೆ ಪಟ್ಟಣ ಸರ್ವಾಂಗೀಣ ಅಭಿವೃದ್ಧಿಯಿಂದ ಮರೀಚಿಕೆಯಾಗಿದೆ. ಹಟ್ಟಿಚಿನ್ನದಗಣಿ ಕಂಪನಿಯಿಂದ ನೀರು, ರಸ್ತೆ, ಆಸ್ಪತ್ರೆ ಸೇರಿ ಸಕಲ ಸೌಕರ್ಯಗಳು ದೊರೆಯುತ್ತಿವೆ. ಅಧಿಸೂಚಿತ ಪ್ರದೇಶ ಸಮಿತಿ ಕಚೇರಿ ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಾಗಿದೆ. ಮತದಾರರ ಗುರುತಿನ ಚೀಟಿ ಇದೆ, ಮತವನ್ನೂ ಚಲಾಯಿಸುತ್ತೇವೆ. ಆದರೆ, ಸರ್ಕಾರ ಅಭಿವೃದ್ಧಿ ಕಡೆಗಣಿಸಿದೆ ಎಂಬುದು ಹಟ್ಟಿ ಕ್ಯಾಂಪ್ ನಿವಾಸಿಗಳ ಅಸಮಾಧಾನವಾಗಿದೆ.

    ತಾಲೂಕು ಕೇಂದ್ರವಾಗುವ ಅರ್ಹತೆ ಹೊಂದಿರುವ ಹಟ್ಟಿ ಹೋಬಳಿ ಕೇಂದ್ರವೂ ಆಗದಿರುವುದು ಆಡಳಿತ ನಡೆಸಿದ ನಾಯಕರ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಸ್ಥಳೀಯ ನಾಯಕರಲ್ಲಿ ಇಚ್ಛಾ ಶಕ್ತಿ ಬೇಕಿದೆ. ಯಾವ ಪಕ್ಷದವರೂ ಕೈ ಹಿಡಿಯದಿರುವುದರಿಂದ ಅಭಿವೃದ್ಧಿ ಮರೀಚಿಕೆಯಾಗಿದೆ.
    | ಸಿದ್ರಾಮಪ್ಪ ಸಂಗೇಪಾಗ್, ಕಾರ್ಮಿಕ ಪ್ರಮುಖ, ಹಟ್ಟಿ

    ಹಟ್ಟಿ ಗ್ರಾಪಂ ಪ.ಪಂ ಆಗಿ ಮೇಲ್ದರ್ಜೇಗೇರಿಸಲಾಗಿದೆ. ಹೋಬಳಿ ಕೇಂದ್ರ ಮಂಜೂರಾತಿ ನನೆಗುದಿಗೆ ಬಿದ್ದಿದೆ. ಈ ಕುರಿತು ಆದಷ್ಟು ಬೇಗ ಕ್ರಮ ವಹಿಸಲಾಗುವುದು. ಹಟ್ಟಿ ಪಟ್ಟಣಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಉಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಇತ್ಯರ್ಥಪಡಿಸಲಾಗುವುದು.
    | ಮಾನಪ್ಪ ವಜ್ಜಲ್, ಶಾಸಕ, ಲಿಂಗಸುಗೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts