ನಿಲ್ಲದ ಘಟಪ್ರಭಾ, ಮಲಪ್ರಭಾ ಅಬ್ಬರ – ಯಾವುದೇ ಕ್ಷಣದಲ್ಲೂ ಗ್ರಾಮಗಳಿಗೂ ಜಲ ನುಗ್ಗುವ ಅಪಾಯ – ಮಿರ್ಜಿ ಗ್ರಾಮದಲ್ಲಿ ಕಾಳಜಿ ಕೇಂದ್ರ ಆರಂಭ

blank

ಬಾಗಲಕೋಟೆ: ಮಲಪ್ರಭಾ ಮತ್ತು ಘಟಪ್ರಭಾ ನದಿಗಳಲ್ಲಿ ನೀರಿನ ಅಬ್ಬರ ಇನ್ನೂ ಕಡಿಮೆ ಆಗಿಲ್ಲ. ನದಿ ತೀರದ ಜಮೀನುಗಳಲ್ಲಿಯ ವಿವಿಧ ಬೆಳೆಗಳು ನೀರಲ್ಲಿ ನಿಂತಿವೆ.

blank

ಘಟಪ್ರಭೆಗೆ ಬುಧವಾರ ಹೆಚ್ಚಿನ ನೀರು ಬಿಟ್ಟಿಲ್ಲವಾದರೂ ಈ ಮೊದಲೇ ಬಿಟ್ಟಿರುವ ನೀರು ಹರಿದು ಬಂದಿದ್ದರಿಂದ ನದಿ ಅಬ್ಬರ ಜೋರಾಗಿದೆ. ಮುಧೋಳ ತಾಲೂಕಿನ 11 ಸೇತುವೆಗಳ ಪೈಕಿ ಮಾಚಕನೂರು ಸೇತುವೆ ಹೊರತುಪಡಿಸಿ ಉಳಿದೆಲ್ಲ ಸೇತುವೆಗಳು ಜಲಾವೃತಗೊಂಡು ಸಂಪರ್ಕ ಸ್ಥಗಿತವಾಗಿದೆ. ಮುಧೋಳ ನಗರದಲ್ಲಿರುವ ಯಾದವಾಡ ಸೇತುವೆ ಬುಧವಾರ ಬೆಳಗ್ಗೆ ಜಲಾವೃತವಾಗಿದೆ.

ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಯಾವುದೇ ಕ್ಷಣದಲ್ಲಾದರೂ ನೀರು ನುಗ್ಗುವ ಅಪಾಯ ಇದೆ. ಗ್ರಾಮದಲ್ಲಿ ಮಂಗಳವಾರ ರಾತ್ರಿಯಿಂದಲೇ ಕಾಳಜಿ ಕೇಂದ್ರ ಆರಂಭಿಸಿದ್ದು, 15 ಕುಟುಂಬಗಳ 80 ಜನರು ಆಶ್ರಯ ಪಡೆದಿದ್ದಾರೆ.

ಇತ್ತ ಮೂರು ದಿನಗಳಿಂದ ಆರ್ಭಟ ತಗ್ಗಿದ್ದ ಮಲಪ್ರಭಾ ನದಿಯಲ್ಲಿ ಮತ್ತೆ ರಣಕೇಕೆ ಶುರುವಾಗಿದೆ. ನವಿಲುತೀರ್ಥ ಜಲಾಶಯದಿಂದ 13294 ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ತೀರದ ಬಾದಾಮಿ, ಗುಳೇದಗುಡ್ಡ, ಹುನಗುಂದ ತಾಲೂಕಿನಲ್ಲಿ ಆತಂಕ ಸೃಷ್ಟಿಸಿದೆ.

ಒತ್ತುವರಿಯಿಂದಾಗಿ ಮಲಪ್ರಭಾ ಒಡಲು ಚಿಕ್ಕದಾಗಿದ್ದು, 10 ಸಾವಿರ ಕ್ಯೂಸೆಕ್ ನೀರು ದಾಟಿದರೂ ನದಿ ದಡದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿಯನ್ನುಂಟು ಮಾಡುತ್ತದೆ. ಕಳೆದ ವಾರವಷ್ಟೆ ಸ್ಥಳೀಯವಾಗಿ ಸುರಿದಿದ್ದ ಭಾರಿ ಮಳೆ ಹಾಗೂ ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳದ ಆರ್ಭಟದಿಂದಾಗಿ ಮೂರು ತಾಲೂಕುಗಳಲ್ಲೂ ಸಾಕಷ್ಟು ಹಾನಿ ಮಾಡಿತ್ತು. ಇದೀಗ ಒಂದು ವಾರ ಕಳೆಯುವ ಮುಂಚೆಯೇ ಮತ್ತೆ ನೀರು ಬಿಟ್ಟಿದ್ದರಿಂದ ನದಿ ತೀರದ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ.

ಬುಧವಾರ ಬಾದಾಮಿ ತಾಲೂಕಿನ ಕರ್ಲಕೊಪ್ಪ, ಹಾಗನೂರ, ತಳಕವಾಡ, ಆಲೂರ ಎಸ್ಕೆ, ಬಿರನೂರ, ಗೋವನಕೊಪ್ಪ, ಸುಳ್ಳ, ಹೆಬ್ಬಳ್ಳಿ, ಕಿತ್ತಲಿ, ಮುಮರಡಿಕೊಪ್ಪ, ಜಕನೂರ, ನೀರಲಗಿ, ಖ್ಯಾಡ, ಕಾತರಕಿ, ಚೊಳಚಗುಡ್ಡ ಭಾಗದ ಜಮೀನುಗಳಿಗೆ ಮತ್ತೆ ನೀರು ನುಗ್ಗಿದೆ. ಗೋವನಕೊಪ್ಪ ಗ್ರಾಮದ ಗೋವನಕೊಪ್ಪ-ಗದಗ ಜಿಲ್ಲೆಯ ಕೊಣ್ಣೂರ ಗ್ರಾಮಗಳ ಮಧ್ಯದ ಕಿರುಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಉಕ್ಕಿ ಹರಿಯುತ್ತಿದೆ.

ಪ್ರವಾಹ, ಅತಿವೃಷ್ಟಿಯಿಂದ ರೈತಾಪಿ ಜನರಿಗೆ ದಿಕ್ಕು ತೋಚದಂತಾಗಿದೆ. ಸೆಪ್ಟೆಂಬರ್ 1 ರಿಂದ 14ರ ವರೆಗೆ 18929 ಹೆಕ್ಟೇರ್ ಕೃಷಿ ಹಾಗೂ 3823 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 22752 ಹೆಕ್ಟೇರ್ ಪ್ರದೇಶದಲ್ಲಿಯ ಬೆಳೆ ಹಾನಿ ಆಗಿದೆ. ಜಿಲ್ಲೆಯಲ್ಲಿ 778 ಮನೆಗಳಿಗೆ ಹಾನಿಯಾಗಿದೆ.

blank

ಇದೇ ತಿಂಗಳಲ್ಲಿ ಅತಿವೃಷ್ಟಿಯಿಂದಾಗಿ ನಾಲ್ವರು ಸಾವನ್ನಪ್ಪಿದ್ದು, 5 ಜಾನುವಾರು ಬಲಿಯಾಗಿವೆ. ಜೀವಹಾನಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತವೂ ಪರಿಹಾರ ವಿತರಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.

ಸಂತ್ರಸ್ತರಿಗೆ ಆಸರೆ ಕಲ್ಪಿಸಲು ಮಿರ್ಜಿ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, 80 ಜನರು ಆಶ್ರಯ ಪಡೆದಿದ್ದಾರೆ. 223 ಮನೆಗಳಿಗೆ ಮಳೆ ನೀರು ನುಗ್ಗಿ ಗೃಹೋಪಯೋಗಿ ಮತ್ತು ಬಟ್ಟೆ ಬರೆ ಹಾಳಾಗಿದ್ದು, ತಕ್ಷಣದ ಪರಿಹಾರವಾಗಿ ನೊಂದ ಕುಟುಂಬಗಳಿಗೆ 22.30 ಲಕ್ಷ ರೂ. ವಿತರಿಸಲಾಗಿದೆ. 
- ಪಿ.ಸುನೀಲಕುಮಾರ್ 
ಜಿಲ್ಲಾಧಿಕಾರಿ, ಬಾಗಲಕೋಟೆ
Share This Article

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…

ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…

ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?

ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…