More

    ಶ್ರದ್ಧಾಭಕ್ತಿಯಿಂದ ಜರುಗಿದ ಉಮಾಮಹೇಶ್ವರ ರಥೋತ್ಸವ

    ಕುಶಾಲನಗರ: ಶಿರಂಗಾಲದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಥೋತ್ಸವ ಸೋಮವಾರ ಶ್ರದ್ಧಾ-ಭಕ್ತಿಯಿಂದ ನಡೆಯಿತು.

    ಗ್ರಾಮ ದೇವತಾ ಸಮಿತಿಯ ವತಿಯಿಂದ ನಡೆದ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ-ಹವನ, ಪೂಜಾ ಕೈಂಕರ್ಯಗಳು, ಅಭಿಷೇಕಗಳು ನಡೆದ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಸ್ವಾಮಿಯ ವಿಗ್ರಹವನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಬಳಿಕ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ರಥಕ್ಕೆ ಮಹಾಮಂಗಳಾರತಿ ಮಾಡುವ ಮೂಲಕ ಚಾಲನೆ ನೀಡಿದರು.

    ಮಂಗಳವಾದ್ಯ, ಮಂಡ್ಯದ ಡೊಳ್ಳು ಕುಣಿತ, ಮಾರಮ್ಮ ಕುಣಿತ, ವೀರಗಾಸೆ, ಗೊಂಬೆ ಕುಣಿತದ ಸಮ್ಮುಖದಲ್ಲಿ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ರಥವನ್ನು ಗ್ರಾಮದೊಳಗೆ ಎಳೆದು ಸಾಗಿದರು. ರಥ ಸಾಗುವ ದಾರಿಯಲ್ಲಿ ಗ್ರಾಮಸ್ಥರು ರಥಕ್ಕೆ ಪೂಜೆ ಸಲ್ಲಿಸಿ, ಮತ್ತೆ ಕೆಲವರು ಮಜ್ಜಿಗೆ ಪಾನಕ ವಿತರಿಸಿದರು.
    ದಾನಿಗಳಾದ ಚಂದ್ರಿಕಾ ಕೃಷ್ಣಶೆಟ್ಟಿ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು, ಹೋಮ-ಹವನ, ಪ್ರಸಾದ, ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದರು.
    ಗ್ರಾಮ ದೇವತಾ ಸಮಿತಿಯ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ಮಾತನಾಡಿ, ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯಕ್ಕೆ 550 ವರ್ಷಗಳ ಇತಿಹಾಸವಿದೆ. ಏಕಶಿಲೆಯಲ್ಲಿ ದೇವಸ್ಥಾನದ ಮೂರ್ತಿಗಳ ನಿರ್ಮಾಣವಾಗಿದೆ. ಪ್ರತಿ ಶಿವರಾತ್ರಿ ಕಳೆದು 15 ದಿನಗಳ ನಂತರ ಬರುವ ಮೊದಲ ಹುಣ್ಣಿಮೆ ಸೋಮವಾರ ಇಲ್ಲಿ ರಥೋತ್ಸವ ಜರುಗುವುದು ಇತಿಹಾಸ ಎಂದು ತಿಳಿಸಿದರು.

    ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿ ಹೊಂದಿರುವ ಈ ದೇವಸ್ಥಾನ ಮತ್ತಷ್ಟು ಪ್ರಸಿದ್ಧಿ ಹೊಂದುವ ಅಗತ್ಯವಿದೆ. ಗ್ರಾಮದ ಮೂಲ ದೇವಸ್ಥಾನ ಮಂಟಿಗಮ್ಮ ಕ್ಷೇತ್ರದಂತೆ ಈ ದೇವಾಲಯಕ್ಕೆ ಕೂಡ ಭಕ್ತರ ಸಂಖ್ಯೆ ವೃದ್ಧಿಸಬೇಕಿದೆ ಎಂದು ತಿಳಿಸಿದರು.

    ದೇವತಾ ಸಮಿತಿ ಕಾರ್ಯದರ್ಶಿ ಎಂ.ಎಸ್.ಗಣೇಶ್ ಮಾತನಾಡಿ, ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಈ ದೇವಾಲಯ ಪವಿತ್ರ ಕಾವೇರಿ ಬದಿ ತಟದಲ್ಲಿ ಸ್ಥಾಪನೆಯಾಗಿದೆ. ಗ್ರಾಮಸ್ಥರು, ದಾನಿಗಳ ನೆರವಿನಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ರಥೋತ್ಸವ ವಿಜೃಂಭಣೆಯಿಂದ ಜರುಗಿದೆ ಎಂದು ವಿವರಿಸಿದರು.
    ಸಮಿತಿ ಉಪಾಧ್ಯಕ್ಷ ಉಮೇಶ್, ಪ್ರಮುಖರಾದ ನಂಜುಂಡಪ್ಪ, ಎನ್.ಎಸ್.ರಮೇಶ್, ಧನಪಾಲ, ಕೃಷ್ಣಶೆಟ್ಟಿ, ಜಯಪ್ರಕಾಶ್, ವೆಂಕಟೇಶ್, ರಮೇಶ್, ಸಿ.ಎನ್.ಲೋಕೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts