More

    ಹತ್ರಾಸ್ ರೇಪ್​​ ಕೇಸ್​: ಸಿಎಂ ಯೋಗಿಗೆ ಸೂಕ್ಷ್ಮವಾಗಿ ಬುದ್ಧಿ ಹೇಳಿ, ಎಚ್ಚರಿಕೆಯನ್ನೂ ನೀಡಿದ ಉಮಾ ಭಾರತಿ

    ಲಖನೌ: ಹತ್ರಾಸ್​​ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಮೃತಪಟ್ಟ ದಲಿತ ಯುವತಿಯ ಮನೆಗೆ ಭೇಟಿ ನೀಡಲು ರಾಜಕಾರಣಿಗಳಿಗೆ, ಪತ್ರಕರ್ತರಿಗೆ ಅವಕಾಶ ಕೊಡಿ ಎಂದು ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಒತ್ತಾಯಿಸಿದ್ದಾರೆ.

    ನಿನ್ನೆ ಮೃತ ಯುವತಿಯ ಮನೆಗೆ ಭೇಟಿ ನೀಡಲು ಹೋದ ಕಾಂಗ್ರೆಸ್ ಮುಖಂಡರನ್ನು ತಡೆದು, ಬಂಧಿಸಲಾಗಿತ್ತು. ಇಂದು ಟಿಎಂಸಿ ನಿಯೋಗಕ್ಕೂ ಅವಕಾಶ ಸಿಗಲಿಲ್ಲ. ಹಾಗೇ..ಸ್ಥಳಕ್ಕೆ ತೆರಳಿ ವರದಿ ಮಾಡಲು ಪತ್ರಕರ್ತರಿಗೂ ನಿಷೇಧಿಸಲಾಗಿದೆ. ಇದೇ ವಿಚಾರವಾಗಿ ಯುಪಿ ಸರ್ಕಾರ ಮತ್ತು ಪೊಲೀಸರು ಟೀಕೆಗೆ ಗುರಿಯಾಗುತ್ತಿದ್ದಾರೆ.
    ಇದೀಗ ಉಮಾಭಾರತಿ ಅವರು ಟ್ವೀಟ್​ ಮೂಲಕವೇ ಯೋಗಿ ಆದಿತ್ಯನಾಥ್ ಅವರಿಗೆ ಬುದ್ಧಿಮಾತು ಹೇಳಿದ್ದಾರೆ. ನನಗೆ ಕರೊನಾ ಸೋಂಕು ತಗುಲಿ ಇಂದಿಗೆ 7 ದಿನ. ಏಮ್ಸ್​ನ ಕೊವಿಡ್​-19 ವಾರ್ಡ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ಯಾರನ್ನೂ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​ ತೀರ್ಪು ನೀಡುವಾಗಲೂ ನನಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಫೋನ್​ ಮೂಲಕವೂ ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಟಿವಿ ನ್ಯೂಸ್​ ಮೂಲಕವೇ ನಡೆಯುತ್ತಿರುವ ಘಟನೆಗಳನ್ನು ಗಮನಿಸುತ್ತಿದ್ದೇನೆ. ಇದನ್ನೂ ಓದಿ: ‘ಕಾಶ್ಮೀರಿ ಕಣಿವೆಯ ಯುವಕರನ್ನು ತರಬೇತಿಗಾಗಿ ಪಾಕ್​ಗೆ ಕಳಿಸುತ್ತಿದ್ದರು ಪ್ರತ್ಯೇಕತಾವಾದಿಗಳು’

    ಸಿಎಂ ಯೋಗಿ ಜೀ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ, ಕುಶಲತೆಯಿಂದ ನಿಭಾಯಿಸುತ್ತಿರುವುದು ನನಗೆ ಗೊತ್ತಾಗಿದೆ. ಆದರೆ ಪೊಲೀಸರು ಕುಟುಂಬದವರನ್ನು ಲಾಕ್​ ಮಾಡಿದ್ದು, ರಾಜಕಾರಣಿಗಳನ್ನು, ಮಾಧ್ಯಮಗಳನ್ನು ಬಿಡದೆ ಇರುವುದು ಹಲವು ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ಉಮಾಭಾರತಿ ಟ್ವೀಟ್​ನಲ್ಲಿ ಬರೆದಿದ್ದಾರೆ.
    ಎಸ್​ಐಟಿ ತನಿಖೆ ನಡೆಯುತ್ತಿದ್ದಾಗ ಕುಟುಂಬದವರನ್ನು ಮಾಧ್ಯಮಗಳು, ರಾಜಕಾರಣಿಗಳು ಭೇಟಿ ಮಾಡಬಾರದು ಎಂಬ ಯಾವ ನಿಯಮಗಳ ಬಗ್ಗೆಯೂ ನನಗೆ ಗೊತ್ತಿಲ್ಲ. ಇದು ವಿಶೇಷ ತನಿಖಾ ತಂಡದ ಕಾರ್ಯವನ್ನೇ ಪ್ರಶ್ನಿಸುವಂತಿದೆ. ಉತ್ತರ ಪ್ರದೇಶ ಪೊಲೀಸರ ಈ ಕ್ರಮ ಯುಪಿ ಸರ್ಕಾರಕ್ಕೆ ಅಷ್ಟೆ ಅಲ್ಲದೆ..ಕೇಂದ್ರ ಬಿಜೆಪಿ ಸರ್ಕಾರಕ್ಕೂ ಕಳಂಕ ತರುವಂತಿದೆ ಎಂದು ಸೂಕ್ಷ್ಮವಾಗಿಯೇ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಯತ್ನಿಸಿದ್ದಾರೆ. ಹಾಗೇ ಇತ್ತೀಚೆಗಷ್ಟೇ ನಡೆದ ಅಯೋಧ್ಯಾ ರಾಮಜನ್ಮಭೂಮಿ ಭೂಮಿಪೂಜೆಯನ್ನು ಉಲ್ಲೇಖಿಸಿ, ನಾವು ರಾಮ ರಾಜ್ಯ ಸ್ಥಾಪನೆಗೆ ಬದ್ಧರಾಗಿದ್ದೇವೆ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಹತ್ರಾಸ್​ ಸಂತ್ರಸ್ತೆ ಕುಟುಂಬದ ಭೇಟಿಗೆ ಅವಕಾಶ ನೀಡುತ್ತಿಲ್ಲ: ನಿರ್ಭಯಾ ವಕೀಲೆಯಿಂದ ಆಕ್ರೋಶ

    ಓರ್ವ ಮುಖ್ಯಮಂತ್ರಿಯಾಗಿ ನೀವು ತುಂಬ ಸ್ವಚ್ಛವಾದ ಇಮೇಜ್​ ಸೃಷ್ಟಿಸಿಕೊಂಡಿದ್ದೀರಿ. ಅದರ ಬಗ್ಗೆ ಮಾತಿಲ್ಲ. ಆದರೆ ಈಗ ಹತ್ರಾಸ್​ ಸಂತ್ರಸ್ತೆಯ ಮನೆಗೆ ರಾಜಕಾರಣಿಗಳು, ಪ್ರತಿಪಕ್ಷ ಮುಖಂಡರು, ಮಾಧ್ಯಮಗಳು ಭೇಟಿ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನಾನಂತೂ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಖಂಡಿತ ಆ ಕುಟುಂಬವನ್ನು ಭೇಟಿ ಮಾಡುತ್ತೇನೆ ಎಂಬ ಸಣ್ಣ ಎಚ್ಚರಿಕೆಯನ್ನೂ ನೀಡಿದ್ದಾರೆ.
    ನಾನು ಪಕ್ಷದಲ್ಲಿ ನಿಮಗಿಂತಲೂ ಹಿರಿಯಳು. ಹಾಗೇ ನಿಮಗೆ ಹಿರಿಯ ಅಕ್ಕನಂತೆ. ನನ್ನ ಸಲಹೆಯನ್ನು ನೀವು ನಿರಾಕರಿಸುವುದಿಲ್ಲ ಎಂದು ಭಾವಿಸುತ್ತೇನೆ..ಹಾಗೇ ತಿರಸ್ಕರಿಸಬೇಡಿ ಎಂದು ಆಗ್ರಹಿಸುತ್ತೇನೆ ಎಂದು ಉಮಾ ಭಾರತಿ ಸ್ಪಷ್ಟವಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    ಕರೊನಾ ಸೋಂಕಿನ ವಿರುದ್ಧ 101 ದಿನ ಹೋರಾಡಿ, ಗೆದ್ದ ಕಾಂಗ್ರೆಸ್ ಮುಖಂಡ; ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts