More

    ಮೇಲೇಳದ ಯಾತ್ರಿ ನಿವಾಸ: ಉರುಸ್‌ಗೆ ಪೂರ್ಣವಾಗದಿದ್ದರೆ ನಿಷ್ಪ್ರಯೋಜಕ

    ಅನ್ಸಾರ್ ಇನೋಳಿ ಉಳ್ಳಾಲ
    ಉಳ್ಳಾಲ ಉರುಸ್ ಸನಿಹದಲ್ಲಿದೆ. ಆದರೆ ಎರಡೂವರೆ ವರ್ಷಗಳ ಹಿಂದೆ ಶಿಲಾನ್ಯಾಸ ನಡೆದಿದ್ದ ಯಾತ್ರಿ ನಿವಾಸ ಇನ್ನೂ ಮೇಲೆದ್ದಿಲ್ಲ. ಉರುಸ್ ವೇಳೆ ಕಾಮಗಾರಿ ಮುಗಿಯದಿದ್ದರೆ ಈ ಯೋಜನೆಯ ಉದ್ದೇಶವೇ ನಿಷ್ಪ್ರಯೋಜಕ ಎನಿಸಲಿದೆ.

    ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳ ಬಳಿ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ ಹೆಸರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಅದರಂತೆ ಉಳ್ಳಾಲ ದರ್ಗಾಕ್ಕೂ ಯಾತ್ರಿ ನಿವಾಸ ಬೇಕೆನ್ನುವ ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಸರ್ಕಾರ ಮಂಜೂರಾತಿ ನೀಡಿತ್ತು. ಇಲ್ಲಿಗೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಸಾಕಷ್ಟು ಯಾತ್ರಿಕರು ಆಗಮಿಸುವುದರಿಂದ ಅವರು ಉಳಿದುಕೊಳ್ಳಲು ಯಾತ್ರಿ ನಿವಾಸ ಅಗತ್ಯವೂ ಆಗಿತ್ತು. ಸರ್ಕಾರ ಯೋಜನೆ ಮಂಜೂರುಗೊಳಿಸಿದರೂ ವಿವಿಧ ಕಾರಣಗಳಿಂದಾಗಿ ಯೋಜನೆ ಬರಲಿಲ್ಲ. ಈಗಿನ ಸಮಿತಿ ಹರಸಾಹಸಪಟ್ಟ ಹಿನ್ನೆಲೆಯಲ್ಲಿ ಕೊನೆಗೂ ಸರ್ಕಾರ ಹಸಿರು ನಿಶಾನೆ ತೋರಿಸಿತು.

    ಇಂದಿಗೂ ಮುಗಿದಿಲ್ಲ ಕೆಲಸ: ನಂತರದ ದಿನಗಳಲ್ಲಿ ಸರ್ಕಾರದ ನಕ್ಷೆಯ ಪ್ರಕಾರ ಕಟ್ಟಡ ನಿರ್ಮಾಣಕ್ಕೆ ಜಮೀನಿನ ಸಮಸ್ಯೆ, ಇತರ ಕಾರಣಗಳು ಅಡ್ಡಿಯಾದವು. ಇವೆಲ್ಲ ಮುಗಿಯುವಷ್ಟರಲ್ಲಿ ಒಂದೂವರೆ ವರ್ಷ ಕಳೆಯಿತು. ಕೊನೆಗೂ 2019 ಜೂನ್ 16ರಂದು 75 ಲಕ್ಷ ರೂ. ಅನುದಾನದಲ್ಲಿ 11 ಕೋಣೆಗಳ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಲಾಯಿತು. 2020ರ ಏಪ್ರಿಲ್‌ನ ಉರುಸ್‌ಗಿಂತ ಮೊದಲು ಕಾಮಗಾರಿ ಮುಗಿದರೆ ಪ್ರವಾಸಿಗರಿಗೆ ಅನುಕೂಲ ಆಗಲಿದೆ ಎಂದು ಭಾವಿಸಲಾಗಿತ್ತು. ಕೆಲ ಸಮಯದ ಬಳಿಕ ಕೆಲಸವೂ ಆರಂಭವಾಯಿತು. ಆದರೆ ಅಂದು ಆರಂಭಗೊಂಡ ಕೆಲಸ ಇಂದಿಗೂ ಮುಗಿದಿಲ್ಲ, ಮಾತ್ರವಲ್ಲದೆ ಅರ್ಧಕ್ಕೇ ನಿಂತಿದೆ. ಪ್ರಸ್ತುತ ಕಟ್ಟಡ ನಿರ್ಮಾಣವಾಗುತ್ತಿರುವ ಜಾಗ ದರ್ಗಾದ ಮುಂಭಾಗದಲ್ಲೇ ಇದ್ದು, ಉರುಸ್ ವೇಳೆ ಕಟ್ಟಡ ಪೂರ್ತಿಯಾಗದಿದ್ದರೆ ಯಾತ್ರಿ ನಿವಾಸವೇ ನಿಷ್ಪ್ರಯೋಜಕ ಎನಿಸಲಿದೆ.

    ಮುಡಿಪು ಬಳಿ ಮಾತ್ರ ನಿರ್ಮಾಣ: ಉಳ್ಳಾಲ ಭಾಗದಲ್ಲಿ ಐದು ಕಡೆ ಯಾತ್ರಿ ನಿವಾಸ ನಿರ್ಮಾಣಕ್ಕೆ ಯೋಚಿಸಲಾಗಿದೆ. ಆದರೆ ಈವರೆಗೆ ಮುಡಿಪು ಸಂತ ಜೋಸೆಫ್ ವಾಜ್ ಚರ್ಚ್ ಬಳಿ ಮಾತ್ರವೇ ನಿರ್ಮಾಣಗೊಂಡಿದೆ. ಉಳ್ಳಾಲ ದರ್ಗಾ ಮತ್ತು ಮಂಜನಾಡಿ ದರ್ಗಾದ ಬಳಿ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಸೋಮೇಶ್ವರದಲ್ಲಿ ಕೆಲ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಭಗವತಿ ಕ್ಷೇತ್ರಕ್ಕೆ ವರ್ಗಾಯಿಸಲಾಗಿತ್ತು. ಇಲ್ಲಿ ಮತ್ತು ತೊಕ್ಕೊಟ್ಟು ಚರ್ಚ್ ಬಳಿಯೂ ಶಿಲಾನ್ಯಾಸ ನಡೆದಿದೆ.

    ಯಾತ್ರಿ ನಿವಾಸ ಮಂಜೂರಾಗಿ ನಾಲ್ಕು ವರ್ಷಗಳಾಗುತ್ತಾ ಬಂದರೂ ಕಾಮಗಾರಿ ಮುಗಿಯುತ್ತಿಲ್ಲ. ಇದನ್ನು ಗಮನಿಸುವಾಗ ಇಲಾಖೆ ತಾರತಮ್ಯ ಭಾವನೆ ಹೊಂದಿರುವಂತೆ ಕಾಣುತ್ತಿದೆ. ಮುಂದಿನ ತಿಂಗಳು ಕಾಮಗಾರಿ ಮುಗಿಯದಿದ್ದರೆ ಉರುಸ್ ಸಂದರ್ಭ ಯಾತ್ರಿ ನಿವಾಸ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಲಿದೆ.
    ಅಬ್ದುಲ್ ರಶೀದ್, ಅಧ್ಯಕ್ಷ, ಉಳ್ಳಾಲ ದರ್ಗಾ

    ಯಾತ್ರಿ ನಿವಾಸ ಕೆಲವು ಕಡೆ ಜಾಗದ ಸಮಸ್ಯೆಯಿಂದಲೂ, ಕೆಲವು ಕಡೆ ಅಪೂರ್ಣ ಕಾಮಗಾರಿಯಿಂದ ಬಾಕಿಯಾಗಿದೆ. ಕೆಆರ್ ಡಿಇಎಲ್ ಸಂಸ್ಥೆ ಇಲ್ಲಿನ ಅನುದಾನವನ್ನು ಇತರ ಕಡೆ ಬಳಕೆ ಮಾಡಿ ಕಾಮಗಾರಿ ನಿಲ್ಲಿಸಿರುವ ಬಗ್ಗೆ ಸಚಿವರಲ್ಲಿ ಚರ್ಚಿಸಲಾಗಿದೆ. ಇಂಜಿನಿಯರ್, ಗುತ್ತಿಗೆದಾರರ ಸಭೆ ನಡೆಸಿ ದರ್ಗಾ ಮತ್ತು ಭಗವತಿ ಕ್ಷೇತ್ರ ಬಳಿಯ ಯಾತ್ರಿ ನಿವಾಸ ತಕ್ಷಣ ಪೂರ್ಣಗೊಳಿಸಲು ಅನುದಾನ ಬಿಡುಗಡೆಗೊಳಿಸಬೇಕು.
    ಯು.ಟಿ.ಖಾದರ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts