More

    ಉಡುಪಿ-ಬಜ್ಪೆ ಚತುಷ್ಪಥ ಗಗನಕುಸುಮ

    – ಅವಿನ್ ಶೆಟ್ಟಿ, ಉಡುಪಿ
    ಉಡುಪಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಆತ್ರಾಡಿ-ಬಜ್ಪೆ ರಾಜ್ಯ ಹೆದ್ದಾರಿ ಎಕ್ಸ್‌ಪ್ರೆಸ್‌ವೇ ಯೋಜನೆ ನನೆಗುದಿಗೆ ಬಿದ್ದಿದೆ. ಚತುಷ್ಪಥ ರಸ್ತೆ ನಿರ್ಮಿಸಬೇಕೆಂಬ ಪ್ರಸ್ತಾವನೆ ಸರ್ಕಾರದ ಹಂತದಲ್ಲೇ ಬಾಕಿಯಾಗಿದ್ದು, ಪ್ರಸಕ್ತ ಬಿಡಿಬಿಡಿಯಾಗಿ ಗರಿಷ್ಠ 9 ಮೀಟರ್‌ನಷ್ಟು ಅಗಲದ ದ್ವಿಪಥ ರಸ್ತೆಗೆ ಯೋಜನೆ ಸೀಮಿತಗೊಳ್ಳುತ್ತಿದೆ. ಈ ಯೋಜನೆ ಬಗ್ಗೆ ನಮ್ಮ ಬಹಳಷ್ಟು ಜನಪ್ರತಿನಿಧಿಗಳಿಗೆ ಮಾಹಿತಿಯೇ ಇಲ್ಲ ಎನ್ನುವುದು ಕೂಡ ಅಷ್ಟೇ ಸೋಜಿಗ. ರಾಷ್ಟ್ರೀಯ ಹೆದ್ದಾರಿ (ನಂ.66) ಉಡುಪಿ-ಮಂಗಳೂರು ಮಾರ್ಗದ ಒತ್ತಡ ತಗ್ಗಿಸುವುದರ ಜತೆಗೆ ವಿಮಾನ ನಿಲ್ದಾಣಕ್ಕೆ ಅತೀ ಹತ್ತಿರದ ದಾರಿ ಈ ರಾಜ್ಯ ಹೆದ್ದಾರಿ (ನಂ.67) ಆಗಿತ್ತು. ಪ್ರಸಕ್ತ ಆತ್ರಾಡಿಯಿಂದ ಬಜ್ಪೆಗೆ 66.55 ಕಿ.ಮೀ. ದೂರ ಇದ್ದು, ಚತುಷ್ಪಥ ನಿರ್ಮಾಣ ಯೋಜನೆ ಜಾರಿಯಾಗುತ್ತಿದ್ದರೆ 55.9 ಕಿ.ಮೀ.ಗೆ ಇಳಿಕೆಯಾಗುತ್ತಿತ್ತು. ಮೂಡುಬೆಳ್ಳೆ, ಶಿರ್ವ, ಬೆಳ್ಮಣ್, ಮುಂಡ್ಕೂರು, ಮೂರುಕಾವೇರಿ, ಕಟೀಲು ಮೂಲಕ ಈ ರಸ್ತೆ ಸಾಗುತ್ತದೆ. 2013ರಲ್ಲಿ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆಯಾಗಿದ್ದು, 298 ಎಕರೆ ಹೆಚ್ಚುವರಿ ಭೂಸ್ವಾಧೀನಕ್ಕೆ 275 ಕೋಟಿ ರೂ. ಸಹಿತ ಯೋಜನೆಗೆ 580 ಕೋಟಿ ರೂ. ಅಂದಾಜಿಸಲಾಗಿತ್ತು. 11 ಸೇತುವೆ, 11 ಅಂಡರ್‌ಪಾಸ್, 11 ಬೈಪಾಸ್, 169 ಮೋರಿ ಈ ಯೋಜನೆ ಭಾಗವಾಗಿತ್ತು. ಅದರೆ ಜನಪ್ರತಿನಿಧಿಗಳ ಅಸಡ್ಡೆಯಿಂದ ಈ ಯೋಜನೆ ಮೂಲೆ ಗುಂಪಾಗುವಂತಾಯಿತು.

    ಅರೆಬರೆ ಕಾಮಗಾರಿ: ಆತ್ರಾಡಿ -ಬಜ್ಪೆ ರಸ್ತೆ ಕಾಮಗಾರಿ ಯೋಜನೆಯಂತೆ ಸಾಗುತ್ತಿಲ್ಲ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಎಂಬ ಕಾರಣಕ್ಕೆ ಚತುಷ್ಪಥ ಯೋಜನೆ ರೂಪಿಸಲಾಗಿದ್ದರೂ, ಸರ್ಕಾರದ ಅನುದಾನ- ಅನುಮೋದನೆ ಲಭಿಸಿಲ್ಲ. ಹೆದ್ದಾರಿಯು ಆತ್ರಾಡಿಯಿಂದ ಸೂಡದವರೆಗೆ ಉಡುಪಿ ಲೋಕೋಪಯೋಗಿ ಉಪ ವಿಭಾಗ, ಬೆಳ್ಳಣ್‌ನಿಂದ ಮುಂಡ್ಕೂರು ಸೇತುವೆ ವರೆಗೆ ಕಾರ್ಕಳ ಉಪ ವಿಭಾಗ, ಅಲ್ಲಿಂದ ಬಜ್ಪೆವರೆಗೆ ಮಂಗಳೂರು ಉಪ ವಿಭಾಗ ವ್ಯಾಪ್ತಿಗೆ ಸೇರುತ್ತಿದ್ದು, ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರ ಒತ್ತಡದಿಂದ ಅಲ್ಪಸ್ವಲ್ಪ ಅನುದಾನದಲ್ಲಿ ತುಂಡುತುಂಡು ವಿಸ್ತರಣೆ ಕಾಮಗಾರಿ ನಡೆಯುತ್ತಿದೆ.

    ವ್ಯವಸ್ಥಿತ ಕಾಮಗಾರಿ ಬೇಡಿಕೆ: ಆತ್ರಾಡಿ-ಶಿರ್ವ ನಡುವೆ ಶೇ.50ರಷ್ಟು ಮಾತ್ರ ಸಮರ್ಪಕ ಕಾಮಗಾರಿ ನಡೆದಿದೆ. ಆತ್ರಾಡಿಯಿಂದ ರಸ್ತೆ ಸ್ವಲ್ಪ ಚೆನ್ನಾಗಿದ್ದರೂ ಅಪಾಯಕಾರಿ ತಿರುವುಗಳನ್ನು ಹೊಂದಿದೆ. ನೆಲ್ಲಿಕಟ್ಟೆ ಜಂಕ್ಷನ್‌ವರೆಗೆ ಕಾಮಗಾರಿ ನಡೆದಿದೆ. ಮರ್ಣೆಯಲ್ಲಿ ಕಾಮಗಾರಿ ಸರಿಯಾಗಿಲ್ಲ. ಬೆಳ್ಳೆಯಿಂದ ಕುಕ್ಕುದಕಟ್ಟೆ ಶಿರ್ವ, ಶಿರ್ವಪೇಟೆ ದಾಟಿ ಕಾಮಗಾರಿ ನಡೆದಿದೆ. ರಸ್ತೆ ಗುಣಮಟ್ಟ ಹೊಂದಿಲ್ಲ, ಅಲ್ಲಲ್ಲಿ ತೇಪೆ ಹಾಕಲಾಗುತ್ತಿದೆ. ಈ ಹಿಂದೆ ಸರ್ಕಾರಕ್ಕೆ ಸಲ್ಲಿಸಿದ್ದ ಡಿಪಿಆರ್‌ನಂತೆ ವ್ಯವಸ್ಥಿತ ಕಾಮಗಾರಿ ನಡೆಯಬೇಕು ಎನ್ನುವುದು ಬೆಳ್ಳೆ ಗ್ರಾ.ಪಂ ಸದಸ್ಯ ರಾಜೇಂದ್ರ ಶೆಟ್ಟಿ ಅಭಿಪ್ರಾಯ.

    3ನೇ ಹಂತದಲ್ಲಿ ಕಾಮಗಾರಿ: ಆತ್ರಾಡಿಯಿಂದ ಶಿರ್ವದವರೆಗೆ ಕೆಲವೆಡೆ ಅಗಲೀಕರಣ ಬಾಕಿ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾರ್ಯಕ್ರಮದ 3ನೇ ಹಂತದಲ್ಲಿ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈಗ 1ನೇ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, 2ನೇ ಹಂತದ ಟೆಂಡರ್ ಶೀಘ್ರ ನಡೆಯಲಿದೆ. 2021 ಏಪ್ರಿಲ್‌ನಲ್ಲಿ 3ನೇ ಹಂತದ ಹೆದ್ದಾರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಳ್ಳೆ ಪಂಚಾಯಿತಿ ವ್ಯಾಪ್ತಿ, ಶಿರ್ವ ಪೇಟೆ ದಾಟಿದ ಬಳಿಕ ಅಗಲೀಕರಣಕ್ಕೆ ಬಾಕಿ ಇದೆ. 5.5 ಮೀಟರ್ ಇರುವ ರಸ್ತೆಯನ್ನು 9 ಮೀ. ಅಗಲ ಆಗಬೇಕು. ಭೂಸ್ವಾಧೀನ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಆತ್ರಾಡಿ ದಾಟಿ ಬೆಳ್ಳೆಯ ಹಿಂದಕ್ಕೆ ಅಗಲ ಕಡಿಮೆ ಇದ್ದು, ಇದನ್ನು 9 ಮೀ.ಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಬೇಕೆನ್ನುತ್ತಾರೆ ಅಧಿಕಾರಿಗಳು.

    ಬೆಳ್ಮಣ್-ಮುಂಡ್ಕೂರು ಪ್ರಸ್ತಾವನೆ: ಕಾರ್ಕಳ ಲೋಕೋಪಯೋಗಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬೆಳ್ಮಣ್‌ನಿಂದ ಮುಂಡ್ಕೂರು ಸೇತುವೆವರೆಗೆ ಅಗಲೀಕರಣಕ್ಕೆ 55 ಕೋಟಿ ರೂ. ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗ ಮಧ್ಯಮ ಪಥ ರಸ್ತೆ ಇದ್ದು, ದ್ವಿಪಥ ರಸ್ತೆಗೆ ಯೋಜನೆ ರೂಪಿಸಲಾಗಿದೆ. 5.50 ಮೀಟರ್ ಅಗಲವಿರುವ ರಸ್ತೆಯನ್ನು ಅನುದಾನ ನೋಡಿಕೊಂಡು 7 ಅಥವಾ 10 ಮೀಟರ್‌ಗೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆತ್ರಾಡಿ-ಬಜ್ಪೆ ರಾಜ್ಯ ಹೆದ್ದಾರಿ ಸಂಬಂಧಿಸಿ ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ಚುರುಕುಗೊಳಿಸಲು ಪ್ರಯತ್ನಿಸಲಾಗುತ್ತಿದೆ. ವ್ಯವಸ್ಥಿತ ಹೆದ್ದಾರಿ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಅನುದಾನ ಮಂಜೂರಾತಿಗಾಗಿ ಲೋಕೋಪಯೋಗಿ ಇಲಾಖೆ ಸಚಿವರು, ಮುಖ್ಯಮಂತ್ರಿಗಳೊಡನೆ ಮಾತುಕತೆ ನಡೆಸಲಾಗಿದೆ.
    – ಲಾಲಾಜಿ ಮೆಂಡನ್, ಶಾಸಕ, ಕಾಪು

    ಆತ್ರಾಡಿ-ಬಜ್ಪೆ ರಾಜ್ಯ ಹೆದ್ದಾರಿ ಸಂಬಂಧಿಸಿ ಉಡುಪಿ ಉಪ ವಿಭಾಗ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ 3ನೇ ಹಂತದಲ್ಲಿ ಕಾಮಗಾರಿ ನಡೆಯಲಿದೆ. ಉಡುಪಿ ಉಪ ವಿಭಾಗ ವ್ಯಾಪ್ತಿಯಲ್ಲಿ ಅತ್ರಾಡಿಯಿಂದ ಶಿರ್ವವರೆಗೆ ಕೆಲವೆಡೇ ಮತ್ತು ಬೆಳ್ಳೆ ಪಂಚಾಯಿತಿ ವ್ಯಾಪ್ತಿ, ಶಿರ್ವ ಪೇಟೆ ದಾಟಿದ ಅಗಲೀಕರಣ ಬಾಕಿ ಇದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ.
    – ಜಗದೀಶ್ ಭಟ್, ಎಇಇ, ಲೋಕೊಪಯೋಗಿ ಇಲಾಖೆ, ಉಡುಪಿ ಉಪ ವಿಭಾಗ

    ಮುಂದಿನ 3 ವರ್ಷದಲ್ಲಿ ಈ ರಸ್ತೆ ಪೂರ್ತಿ 2 ಲೇನ್ ಆಗಲಿದೆ, ಪ್ರಸ್ತುತ ನಮ್ಮ ವ್ಯಾಪ್ತಿಯಲ್ಲಿ ಮೂರುಕಾವೇರಿ- ಬಜ್ಪೆ ಮಧ್ಯೆ 8 ಕಿ.ಮೀ.ನಷ್ಟು ಭಾಗವನ್ನು 2 ಲೇನ್‌ಗೊಳಿಸುವ ಕಾಮಗಾರಿ ನಡೆಯುತ್ತಿದ್ದು ಈ ವರ್ಷವೇ ಆಗುತ್ತದೆ. ರಸ್ತೆಯನ್ನು 5.5 ಮೀಟರ್‌ನಿಂದ 7ಕ್ಕೆ ಅಗಲಗೊಳಿಸಲಾಗುತ್ತದೆ. ಮೂರುಕಾವೇರಿ, ಕಟೀಲು ಭಾಗದಿಂದ ಬಜ್ಪೆ ಪೇಟೆ ವರೆಗೂ 2 ಲೇನ್ ಆಗುತ್ತದೆ. ಆದರೆ ಬಜ್ಪೆಯಿಂದ ಏರ್‌ಪೋರ್ಟ್ ಕಡೆಗೆ ಬರುವ ರಸ್ತೆ ಸುಮಾರು 4 ಕಿ.ಮೀ ಅಗಲೀಕರಣ ಬಾಕಿ ಇದ್ದು, ಅದನ್ನು ಮುಂದಿನ ವರ್ಷ ಕೈಗೆತ್ತಿಕೊಳ್ಳಲಾಗುವುದು.
    -ಯಶವಂತ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts