More

    ಶ್ರೀಕೃಷ್ಣ ಲೀಲೋತ್ಸವ ಸಂಪನ್ನ

    ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಕೃಷ್ಣಲೀಲೋತ್ಸವನ್ನು (ವಿಟ್ಲಪಿಂಡಿ) ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಶುಕ್ರವಾರ ಸಂಪ್ರದಾಯಬದ್ಧವಾಗಿ ಸರಳ ರೀತಿಯಲ್ಲಿ ಆಚರಿಸಲಾಯಿತು. ಧಾರಾಕಾರ ಮಳೆಯಲ್ಲಿ ಗೊಲ್ಲರು ಕುಂಭಗಳನ್ನು ಒಡೆದು ಮೊಸರ ಧಾರೆಯಲ್ಲಿ ಮಿಂದು ಕುಣಿಯುತ್ತಿದ್ದಂತೆ ಚಿನ್ನದ ತೇರನ್ನೇರಿ ಸಾಗಿಬಂದ ಕೃಷ್ಣನ ಕಂಡು ಭಾವುಕ ಭಕ್ತಜನರು ಹರ್ಷೋದ್ಗಾರ ಮಾಡಿದರು.

    ಮಧ್ಯಾಹ್ನ 3.45ಕ್ಕೆ ಶ್ರೀಕೃಷ್ಣಮಠದಿಂದ ಮೃಣ್ಮಯ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ತಂದು ಮುಖ್ಯದ್ವಾರದಲ್ಲಿ ಚಿನ್ನದ ರಥದಲ್ಲಿಟ್ಟು ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆರತಿ ಬೆಳಗಿದರು. ಮಠದ ಗೋವುಗಳನ್ನು ಪಾಲಿಸುವ ಗೋವಳರು ಎರಡು ಮೊಸರು ಕುಡಿಕೆಗಳನ್ನು ಒಡೆದ ತಕ್ಷಣ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮುಂಭಾಗದಲ್ಲಿ ನವರತ್ನ ರಥದಲ್ಲಿ ಶ್ರೀ ಅನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ಮೂರ್ತಿ ಹಾಗೂ ಚಿನ್ನದ ರಥದಲ್ಲಿ ಶ್ರೀ ಕೃಷ್ಣ ಮೃಣ್ಮಯ ಮೂರ್ತಿ ರಥಬೀದಿಯಲ್ಲಿ ಸಾಗಿಬಂತು. ಮಠದ ಸಿಬ್ಬಂದಿ ಚೆಂಡೆ, ವಾದ್ಯಗಳೊಂದಿಗೆ ತಟ್ಟಿರಾಯನ ವೇಷ, ಕಂಸನ ವೇಷಧರಿಸಿ ಗಮನ ಸೆಳೆದರು. ಕೃಷ್ಣನ ಹಾದಿಯಲ್ಲಿ ಗೋವುಗಳು ಎಂಬ ಪರಿಕಲ್ಪನೆಯಲ್ಲಿ ಕೃಷ್ಣ ಮಠದ ದೇಸಿ ದನಗಳನ್ನು ರಥಬೀದಿ ಸುತ್ತಲೂ ಕಟ್ಟಲಾಗಿದ್ದು, ಜನಾಕರ್ಷಣೆ ಗಳಿಸಿತು.
    ಅನಂತೇಶ್ವರ ದೇವಸ್ಥಾನದ ಬಲಭಾಗದಲ್ಲಿ ಹಾಕಿದ್ದ ವೇದಿಕೆಯಲ್ಲಿ ಭಕ್ತರಿಗೆ ಉಂಡೆ, ಚಕ್ಕುಲಿ ಹಾಗೂ ಲಾಡು, ಫಲವಸ್ತುಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

    ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಮೆರವಣಿಗೆಗೆ ಬಳಿಕ ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನಗೊಳಿಸಲಾಯಿತು. ಅವಭೃತ ಸ್ನಾನ ನಡೆಯಿತು.

    ಮುಂಜಾನೆ ಮಹಾಪೂಜೆ: ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿ ಪ್ರಯುಕ್ತ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಕೃಷ್ಣ ದೇವರಿಗೆ ಯಶೋದೆ ಕೃಷ್ಣ ಅಲಂಕಾರ ಮಾಡಿದರು. ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮುಂಜಾನೆ 6 ಗಂಟೆಗೆ ಮಹಾಪೂಜೆ ನೆರವೇರಿಸಿದರು. ಮುಖ್ಯಪ್ರಾಣ ದೇವರಿಗೆ ಉಂಡೆ ಚಕ್ಕುಲಿಗಳನ್ನು ಸಮರ್ಪಿಸಿದ ಬಳಿಕ ಶ್ರೀಕೃಷ್ಣ ಪ್ರಸಾದವನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ಭಕ್ತರಿಗೆ ವಿತರಿಸಲಾಯಿತು. ಮಠದೊಳಗೆ ಭಕ್ತರಿಗೆ ಪ್ರವೇಶ ನಿರ್ಬಂಧವಿರುವುದರಿಂದ ಕನಕ ಮಂಟಪ ಸಮೀಪ ಸೇವಾ ಕಚೇರಿಯಲ್ಲಿ ಪ್ರಸಾದಗಳನ್ನು ನೀಡಲಾಯಿತು.

    ರಥಬೀದಿಗೆ ನಿರ್ಬಂಧ: ಶ್ರೀಕೃಷ್ಣ ಲೀಲೋತ್ಸವದಲ್ಲಿ ಹೆಚ್ಚಿನ ಜನಸಂದಣಿ ತಪ್ಪಿಸುವ ಉದ್ದೇಶದಿಂದ ಮಧ್ಯಾಹ್ನ 12.30ರಿಂದ ಸಾಯಂಕಾಲ 5.30ರವರೆಗೆ ಸಾರ್ವಜನಿಕರಿಗೆ ರಥಬೀದಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ವಿವಿಧೆಡೆ ನಾಕಾಬಂಧಿ ವಿಧಿಸಲಾಗಿತ್ತು. ವಿವಿಧ ಮಠಾಧೀಶರು, ಅಷ್ಟ ಮಠದ ಸಿಬ್ಬಂದಿಗೆ ಅವಕಾಶ ನೀಡಲಾಗಿತ್ತು. ವಿಟ್ಲಪಿಂಡಿ ಉತ್ಸವಕ್ಕಾಗಿ ಆಗಮಿಸಿದ್ದ ಅನೇಕ ಮಂದಿ ಭಕ್ತರು ದೂರದಲ್ಲೇ ನಿಂತು ರಥೋತ್ಸವ ಕಣ್ತುಂಬಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts