More

    ನರೇಗಾ ವ್ಯಾಪ್ತಿಗೆ ಉಡುಪಿ ಮಲ್ಲಿಗೆ

    – ಅವಿನ್ ಶೆಟ್ಟಿ ಉಡುಪಿ
    ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ವ್ಯಾಪ್ತಿಗೆ ಉಡುಪಿ ಮಲ್ಲಿಗೆ ಕೃಷಿ ಸೇರ್ಪಡೆ ಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಮಲ್ಲಿಗೆ ಬೆಳೆಗಾರರ ಬಹುಕಾಲದ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ತೋಟಕಾರಿಕೆ ಪದ್ಧತಿಯಲ್ಲಿ ಅಡಕೆ, ತೆಂಗು, ಬಾಳೆ, ಕಾಳುಮೆಣಸು, ಪಪ್ಪಾಯಿ, ತಾಳೆ, ನುಗ್ಗೆ, ಸೀಬೆ, ಚಿಕ್ಕು ಮೊದಲಾದ ಬೆಳೆಗಳು ನರೇಗಾ ಯೋಜನೆ ವ್ಯಾಪ್ತಿಯಲ್ಲಿದ್ದವು. ಬೆಳೆಗಾರರ ಬೇಡಿಕೆ ಮೇರೆಗೆ ಉಡುಪಿ ಮಲ್ಲಿಗೆ ಸೇರ್ಪಡೆಗೊಳಿಸಲು ಸಾಕಷ್ಟು ಪ್ರಯತ್ನಿಸಿದರೂ, ಸಾಧ್ಯವಾಗಿರಲಿಲ್ಲ. 2014-15ರಿಂದ ಪ್ರತಿವರ್ಷ ಜಿಲ್ಲೆಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತಿದ್ದರೂ ಅನುಮೋದನೆಯಾಗಿರಲಿಲ್ಲ.
    2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಗ್ರಾಮೀಣಭಿವೃದ್ಧಿ ಮಂತ್ರಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ದೀರ್ಘಕಾಲದ ಪುಷ್ಪ ಕೃಷಿಯನ್ನು ವೈಯಕ್ತಿಕ ಕಾಮಗಾರಿಯಾಗಿ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಿದ್ದರಿಂದ ಮೊದಲ ಬಾರಿಗೆ ಗುಲಾಬಿ ಮತ್ತು ಉಡುಪಿ ಮಲ್ಲಿಗೆ ನರೇಗಾ ವ್ಯಾಪ್ತಿಗೆ ಸೇರಿದಂತಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ಮಲ್ಲಿಗೆ ಕೃಷಿ ವಿಸ್ತರಣೆಗೊಳಿಸಿ ದೊಡ್ಡಮಟ್ಟದದಲ್ಲಿ ಬೆಳೆ ತೆಗೆಯಲು ಅನುಕೂಲವಾಗುತ್ತದೆ, ನರೇಗಾ ಉದ್ಯೋಗ ಚೀಟಿ ಹೊಂದಿದ ಸಣ್ಣ ರೈತರು, ಮಹಿಳಾ ಬೆಳೆಗಾರರು ಇದರ ಪ್ರಯೋಜನ ಪಡೆಯಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 5 ಸೆಂಟ್ಸ್‌ನಿಂದ ಒಂದು ಎಕರೆವರೆಗಿನ 5 ಮಾದರಿ ಅನುಮೋದನೆಗೆ ಅವಕಾಶ ಸಿಕ್ಕಿದೆ. ಬೆಳೆಗಾರರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ವಿಚಾರ ತಿಳಿಸಿ ಕಾಮಗಾರಿ ಬೇಡಿಕೆಗೆ ಅರ್ಜಿ ಸಲ್ಲಿಸಬೇಕು.

    116 ಹೆಕ್ಟೇರ್ ಬೆಳೆ: 2019-20ನೇ ಸಾಲಿನ ಬೆಳೆ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಉಡುಪಿ 68, ಕುಂದಾಪುರದಲ್ಲಿ 3, ಕಾರ್ಕಳ ತಾಲೂಕಿನಲ್ಲಿ 45 ಹೆಕ್ಟೇರ್ ಸೇರಿದಂತೆ ಒಟ್ಟು 116 ಹೆಕ್ಟೇರ್ ವ್ಯಾಪ್ತಿಯಲ್ಲಿ ಉಡುಪಿ ಮಲ್ಲಿಗೆ ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಮಣಿಪುರ, ಅಲೆವೂರು, ಶಿರ್ವ, ಕಟಪಾಡಿ, ಕುರ್ಕಾಲು, ಇನ್ನಂಜೆ, ಮುದರಂಗಡಿ, ಎಲ್ಲೂರು, ಮಜೂರು, ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಲ್ಲಿಗೆ ಬೆಳೆಯ ಲಾಗುತ್ತದೆ.

    ನರೇಗಾ ಯೋಜನೆಯಡಿ ಮಲ್ಲಿಗೆ ಕೃಷಿ ಕೈಗೆತ್ತಿಕೊಳ್ಳಲು ಅನುಮೋದನೆ ದೊರೆತಿದೆ. ಮಲ್ಲಿಗೆ ಕೃಷಿ ಆಸಕ್ತ, ಉದ್ಯೋಗ ನರೇಗಾ ಚೀಟಿ ಹೊಂದಿರುವ ಸಣ್ಣ, ಅತಿ ಸಣ್ಣ ಮಹಿಳಾ ರೈತರು ಈ ಯೋಜನೆ ಪ್ರಯೋಜನ ಪಡೆಯಬೇಕು. ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಜಿಯನ್ನು ಸಂಬಂಧಪಟ್ಟ ಗ್ರಾ.ಪಂ.ಗಳಿಗೆ ಬೆಳೆಗಾರರು ನೀಡಬೇಕು.
    – ಭುವನೇಶ್ವರಿ, ಉಪ ನಿರ್ದೇಶಕಿ, ತೋಟಗಾರಿಕೆ ಇಲಾಖೆ ಉಡುಪಿ 

    ಮಾದರಿ ಅಂದಾಜು ಕೂಲಿ ಸಾಮಗ್ರಿ
    100 ಸೆಂಟ್ಸ್ 640 ಗಿಡ ನಾಟಿ 46,899 ರೂ. 14,610 ರೂ.
    50 ಸೆಂಟ್ಸ್ 320 ಗಿಡ ನಾಟಿ 23450 ರೂ. 8805 ರೂ.
    25 ಸೆಂಟ್ಸ್ 160 ಗಿಡ ನಾಟಿ 11725 ರೂ. 5903 ರೂ.
    10 ಸೆಂಟ್ಸ್ 64 ಗಿಡ ನಾಟಿ 4690 ರೂ. 4161 ರೂ.
    5 ಸೆಂಟ್ಸ್ 32 ಗಿಡ ನಾಟಿ 2345 ರೂ. 3581 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts