More

    ಉಡುಪಿ ಜಿಲ್ಲೆಯ ಗಡಿ ಸೀಲ್‌ಡೌನ್

    ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಗುಣಮುಖವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗಗಳಲ್ಲಿ ಶನಿವಾರದಿಂದ ಸೀಲ್‌ಡೌನ್ ಮಾಡಿ ಅನಗತ್ಯ ವಾಹನಗಳ ಸಂಚಾರ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.
    ಉತ್ತರಕನ್ನಡ ಜಿಲ್ಲೆಯಿಂದ ಸಂಪರ್ಕ ಕಲ್ಪಿಸುವ ಶಿರೂರು, ಕೊಲ್ಲೂರು, ಶಿವಮೊಗ್ಗ ಜಿಲ್ಲೆಯ ಹೊಸಂಗಡಿ, ಆಗುಂಬೆ, ಚಿಕ್ಕಮಗಳೂರು ಜಿಲ್ಲೆ ಸಂಪರ್ಕಿಸುವ ಮಾಳ, ದಕ್ಷಿಣ ಕನ್ನಡ ಜಿಲ್ಲೆಯ ಬಜಗೋಳಿ, ಸಾಣೂರು, ಮುಲ್ಲಡ್ಕ, ಹೆಜಮಾಡಿ, ಕರ್ನಿರೆ ಗಡಿಗಳನ್ನು ಮುಚ್ಚಲಾಗಿದ್ದು, ಅಗತ್ಯವಸ್ತು ಸಾಗಾಟ ಹಾಗೂ ವೈದ್ಯಕೀಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

    ಪಲಿಮಾರು ಗ್ರಾಮದ ಮೂಲಕ ದ.ಕ. ಜಿಲ್ಲೆ ಸಂಪರ್ಕಿಸುವ ರಸ್ತೆಯಲ್ಲಿ ಅಕ್ರಮವಾಗಿ ಜನ ಹಾಗೂ ವಾಹನ ಸಂಚಾರ ತಡೆಯುವ ನಿಟ್ಟಿನಲ್ಲಿ ಪಲಿಮಾರು ಸೇತುವೆ ಬಳಿ ರಸ್ತೆಗೆ ಮಣ್ಣು ಹಾಕಿ ಇಟ್ಟಿಗೆಯಿಂದ ತಡೆಗೋಡೆ ನಿರ್ಮಿಸಲು ತಹಸೀಲ್ದಾರ್ ಮಹಮ್ಮದ್ ಇಸಾಕ್ ಸೂಚಿಸಿದ್ದಾರೆ. ಅಗತ್ಯ ವಸ್ತುಗಳ ವಾಹನಗಳ ಹೊರತು ಯಾವುದೆೇ ವಾಹನಗಳು ಸಂಚರಿಸದಂತೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ. ಕ್ಷುಲ್ಲಕ ಕಾರಣ ನೀಡಿ ಸಂಚರಿಸಲು ಮುಂದಾಗುವ ವಾಹನಗಳನ್ನು ಮುಲಾಜಿಲ್ಲದೆ ಹಿಂದಕ್ಕೆ ಕಳುಹಿಸಿಲಾಗುತ್ತಿದೆ. ಅಗತ್ಯ ವಸ್ತುಗಳ ಸಾಗಾಟದ ವಾಹನಗಳ ಮೇಲೂ ನಿಗಾ ವಹಿಸಿ ಮಾಹಿತಿ ಪಡೆದು ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ದಾಖಲಿಸಲಾಗುತ್ತಿದೆ.

    350 ವಾಹನ ಜಪ್ತಿ:ಜಿಲ್ಲೆಯಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಅನಗತ್ಯ ಸಂಚರಿಸಿದ 350ಕ್ಕೂ ಅಧಿಕ ವಾಹನಗಳನ್ನು ಜಿಲ್ಲಾಡಳಿತ ಜಪ್ತಿ ಮಾಡಿದೆ. ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 7ರಿಂದ 11ರವರೆಗೆ ಅವಕಾಶ ನೀಡಲಾಗಿದ್ದು, ನಿಗದಿತ ಸಮಯ ಮುಗಿದ ಬಳಿಕವೂ ಕೆಲವರು ಅನಗತ್ಯ ಓಡಾಟ ನಡೆಸಿದ ಕಾರಣ ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಜನರು ಅನಗತ್ಯವಾಗಿ ತಿರುಗಾಡದೆ ಸರ್ಕಾರದ ಆದೇಶ ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ. ವಿಜಯಪುರ ಜಿಲ್ಲೆ ನೋಂದಣಿ ಹೊಂದಿರುವ ಕಾರೊಂದು ಮಾಧ್ಯಮವೊಂದರ ಹೆಸರು ಬಳಸಿ ಜನ ಸಾಗಾಟ ಮಾಡುತ್ತಿದ್ದ ಪ್ರಕರಣ ಹೆಜಮಾಡಿ ಗಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts