More

    ಉಡುಪಿಯಲ್ಲಿ ಕರೊನಾ ಮಹಾಸ್ಫೋಟ, ಒಂದೇ ದಿನ 204 ಮಂದಿಗೆ ಸೋಂಕು ದೃಢ

    ಉಡುಪಿ: ನಾಲ್ಕು ದಿನಗಳಿಂದ ಸತತ 60ಕ್ಕಿಂತ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದ್ದ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 204 ಮಂದಿಗೆ ಕರೊನಾ ಸೋಂಕು ದೃಢಗೊಂಡಿದೆ. ಇದರೊಂದಿಗೆ ಐದೇ ದಿನಗಳಲ್ಲಿ 580 ಪ್ರಕರಣಗಳನ್ನು ಕಂಡಿರುವ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 768ಕ್ಕೆ ಏರಿಕೆ ಕಂಡಿದೆ.

    ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಶುಕ್ರವಾರ ಸೋಂಕು ಖಚಿತಗೊಂಡ ಎಲ್ಲ 203 ಮಂದಿಯೂ ಮಹಾರಾಷ್ಟ್ರದಿಂದ ಬಂದು ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ, ಹೋಂ ಕ್ವಾರಂಟೈನ್‌ನಲ್ಲಿದ್ದವರಾಗಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯೊಂದಿಗೆ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ ಎಂಬ ಪಟ್ಟ ಉಡುಪಿಗೆ ದಕ್ಕಿದೆ.

    ಸೋಂಕಿತರಲ್ಲಿ 161 ಮಂದಿ ಬೈಂದೂರು, 34 ಕುಂದಾಪುರ, 4 ಕಾರ್ಕಳ, 2 ಕಾಪು ಹಾಗೂ ಉಡುಪಿ, ಬ್ರಹ್ಮಾವರ, ಹೆಬ್ರಿ ತಲಾ ಒಬ್ಬರಿದ್ದಾರೆ. 157 ಪುರುಷರು, 40 ಮಹಿಳೆಯರು, 7 ಮಕ್ಕಳಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಪೇದೆಗೂ ಸೋಂಕು ಖಚಿತಗೊಂಡಿದ್ದು, ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

    143 ಮಂದಿ ಆಸ್ಪತ್ರೆಗೆ: ಸೋಂಕಿತ 204 ಮಂದಿಯಲ್ಲಿ ಶುಕ್ರವಾರ ಸಾಯಂಕಾಲವರೆಗೆ 143 ಜನರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಶುಕ್ರವಾರ 83 ಕಂಟೇನ್ಮೆಂಟ್ ಜೋನ್ ಮಾಡಲಾಗಿದ್ದು, ಒಟ್ಟು ಕಂಟೇನ್ಮೆಂಟ್ ಜೋನ್ ಸಂಖ್ಯೆ 201ಕ್ಕೇರಿದೆ.
    767 ವರದಿ ನೆಗೆಟಿವ್: ಜಿಲ್ಲೆಯಲ್ಲಿ ಶುಕ್ರವಾರ 767 ಮಂದಿಯ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 1, ಕೋವಿಡ್ ಸೋಂಕಿತರ ಸಂಪರ್ಕ 4, ಇಲ್‌ನೆಸ್‌ಗೆ ಸಂಬಂಧಿಸಿ 3 ಸೇರಿದಂತೆ 8 ಜನರ ಮಾದರಿ ಸಂಗ್ರಹಿಸಲಾಗಿದೆ. 14 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 769 ಮಂದಿಯ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ ಶುಕ್ರವಾರ 10 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕಾರ್ಕಳದಲ್ಲಿ 10, ಉಡುಪಿ ಆಸ್ಪತ್ರೆಯಿಂದ 14 ಮಂದಿ ಸೇರಿದಂತೆ ಒಟ್ಟು 24 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 634 ಸಕ್ರಿಯ ಪ್ರಕರಣಗಳಿವೆ.

    8500 ಟೆಸ್ಟ್ ಮುಕ್ತಾಯ: ಜಿಲ್ಲೆಗೆ ಮುಂಬೈ ಸೇರಿದಂತೆ ಹೊರ ರಾಜ್ಯ, ವಿದೇಶದಿಂದ ಬಂದಿದ್ದ 8,500ಕ್ಕೂ ಅಧಿಕ ಮಂದಿಯ ಗಂಟಲ ದ್ರವ ವೈದ್ಯಕೀಯ ಪರೀಕ್ಷೆ (ಕೋವಿಡ್-19) ಮುಕ್ತಾಯ ಹಂತದಲ್ಲಿದೆ. 769 ಮಂದಿಯ ಪರೀಕ್ಷೆ ಬಾಕಿ ಇದ್ದು, ಶುಕ್ರವಾರಕ್ಕೆ ಎಲ್ಲ ಪರೀಕ್ಷೆಗಳು ಮುಗಿಯುತ್ತವೆ. ಬಳಿಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಭರವಸೆ ನೀಡಿದ್ದಾರೆ. ಎರಡು ಸಾವಿರಕ್ಕಿಂತಲೂ ಅಧಿಕ ಮಾದರಿ ಪರೀಕ್ಷೆಯಲ್ಲಿ 204 ಪಾಸಿಟಿವ್ ಶುಕ್ರವಾರ ಬಂದಿದೆ ಎಂದು ತಿಳಿಸಿದ್ದಾರೆ.

    100ರಲ್ಲಿ 8 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಗುರುವಾರವರೆಗೆ ಕೋವಿಡ್-19 ಪರೀಕ್ಷೆಗೊಳಪಡಿಸಿದ 100 ಮಂದಿಯಲ್ಲಿ 8 ಜನರಿಗೆ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಪರೀಕ್ಷೆ ನಡೆಸಿದ 100 ಜನರಲ್ಲಿ ಒಬ್ಬರಲ್ಲಿ ಮಾತ್ರ ವೈರಸ್ ಪತ್ತೆಯಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಕಳೆದ ಐದು ದಿನಗಳಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಹೆಚ್ಚಳ ದರ ಶೇ.8.1ರಷ್ಟಿದೆ. ಆದರೆ ಜಿಲ್ಲೆಯ ಈ ದರ ಶೇ.26.1 ಇದೆ. ವಾರದ ಹಿಂದೆ ಶೇ.16.6ರಷ್ಟಿತ್ತು. ಒಂದು ವಾರದಲ್ಲಿ ಏರಿಕೆಯಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ದ್ವಿಗುಣಗೊಳ್ಳಲು 3 ದಿನಗಳನ್ನು ತೆಗೆದುಕೊಳ್ಳುತ್ತಿದೆ. ಜಿಲ್ಲೆಯ ಶೇ.98ರಷ್ಟು ಪಾಸಿಟಿವ್ ಪ್ರಕರಣಗಳಲ್ಲಿ ಲಕ್ಷಣ ಇಲ್ಲದಿರುವುದು ಸಮಾಧಾನಕರ ಸಂಗತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts