More

    ಉಡುಪಿಯಲ್ಲಿ ಕರೊನಾ ತಾಂಡವ, ಸೋಂಕಿತ 73 ಮಂದಿಯಲ್ಲಿ ಡಿವೈಎಸ್‌ಪಿ ಸಹಿತ ನಾಲ್ವರು ಪೊಲೀಸರು

    ಉಡುಪಿ: ಹೊರ ರಾಜ್ಯ, ವಿದೇಶದಿಂದ ಆಗಮಿಸಿದ ಮಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಸೋಂಕು ಕಂಡು ಬರುತ್ತಿದ್ದು, ಸೋಮವಾರ ಜಿಲ್ಲೆಯಲ್ಲಿ ಆಘಾತಕಾರಿ ಎಂಬಂತೆ ಒಂದೇ ದಿನ ಡಿವೈಎಸ್‌ಪಿ ಸಹಿತ ನಾಲ್ವರು ಪೊಲೀಸರು, ಐವರು ಮಕ್ಕಳು ಸಹಿತ 73 ಮಂದಿಗೆ ಪಾಸಿಟಿವ್ ಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ.

    73ರಲ್ಲಿ ಮಹಾರಾಷ್ಟ್ರದಿಂದ ಬಂದವವರು 65 ಮಂದಿ, ದುಬೈನಿಂದ ಬಂದವರು ನಾಲ್ವರು. ಬಹುಪಾಲು ಸೋಂಕಿತರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದು, ಇತ್ತೀಚೆಗೆ ಮನೆಗೆ ತೆರಳಿ ಹೋಂ ಕ್ವಾರಂಟೈನ್‌ನಲ್ಲಿದ್ದರು. ಅವರು ನೆಲೆಸಿದ್ದ ಪ್ರದೇಶವನ್ನು ಕಂಟೇನ್ಮೆಂಟ್, ಬಫರ್ ಜೋನ್ ಎಂದು ಗುರುತಿಸಿರುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಪೊಲೀಸರಿಗೆ ಮತ್ತೆ ಅಘಾತ: ಕರೊನಾ ವಾರಿಯರ್ ಆಗಿರುವ ನಾಲ್ವರು ಪೊಲೀಸರಿಗೆ ಸೋಂಕು ತಗುಲಿದೆ. ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಡಿವೈಎಸ್‌ಪಿ ಹಾಗೂ ಮೂರು ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಅವರು ತಂಗಿದ್ದ ಕ್ವಾಟ್ರರ್ಸ್ ಸೀಲ್‌ಡೌನ್ ಮಾಡಲಾಗಿದೆ. ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರು, ಇತರೆ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಡಿಎಆರ್ ಕೇಂದ್ರಸ್ಥಾನವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುವಾಗ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇರಬಹುದು ಎನ್ನಲಾಗುತ್ತಿದೆ.

    5628 ಮಂದಿಯ ವರದಿ ಬಾಕಿ: ಸೋಮವಾರ 570 ಮಂದಿಯ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 1, ಇಲ್‌ನೆಸ್‌ಗೆ ಸಂಬಂಧಿಸಿ ಒಬ್ಬರು ಸೇರಿದಂತೆ ಇಬ್ಬರ ಮಾದರಿಯನ್ನು ಸೋಮವಾರ ಸಂಗ್ರಹಿಸಲಾಗಿದೆ. 6 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 5628 ಮಂದಿಯ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ ಸೋಮವಾರ 10 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರಲ್ಲಿ 64 ಮಂದಿ ಬಿಡುಗಡೆಯಾಗಿದ್ದು, 195 ಸಕ್ರಿಯ ಪ್ರಕರಣಗಳಿವೆ.

    ಐವರ ಮೊಬೈಲ್ ಸ್ವಿಚ್‌ಆಫ್: ಸೋಂಕಿತ 73 ಮಂದಿಯಲ್ಲಿ 68 ಮಂದಿಯನ್ನು ಕೋವಿಡ್-19 ನಿಗದಿತ ಆಸ್ಪತ್ರೆಗೆ ಸೇರಿಸಲಾಗಿದೆ, ಇದರಲ್ಲಿ ಐವರ ಮೊಬೈಲ್ ನಂಬರ್ ಸ್ವಿಚ್ ಆಫ್ ಬರುತ್ತಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ. ಗರ್ಭಿಣಿ, ಮಕ್ಕಳು, ಹಿರಿಯ ನಾಗರಿಕರನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ, ಉಳಿದವರನ್ನು ಆಯಾ ತಾಲೂಕಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಪರಿಸ್ಥಿತಿ ಕೈಮೀರುತ್ತಿದೆಯೇ?: ಜಿಲ್ಲೆಯಲ್ಲಿ ಮಾರ್ಚ್ 29ರಿಂದ ಮೇ 14ರವರೆಗೆ ಮೂರು ಪ್ರಕರಣಗಳಷ್ಟೇ ಇದ್ದವು. ಈ ನಡುವೆ ಹೊಸ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಮೇ 15ರಂದು ಆರಂಭವಾದ ಸೋಂಕಿತರ ಸಂಖ್ಯೆ ಸೋಮವಾರ ದ್ವಿಶತಕ ದಾಟಿ 260 ಮುಟ್ಟಿದೆ. ಇನ್ನೂ 5628 ಮಂದಿಯ ವರದಿ ಬರಲು ಬಾಕಿ ಇರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.

    ಜಿಲ್ಲೆಗೆ 7 ಸಾವಿರಕ್ಕೂ ಅಧಿಕ ಮಂದಿ ಮಹಾರಾಷ್ಟ್ರ ಒಂದೇ ರಾಜ್ಯದಿಂದ ಬಂದಿದ್ದು, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ ಅರ್ಧದಷ್ಟು ಮಂದಿಯ ಮಾದರಿ ಸಂಗ್ರಹಿಸಿದ್ದರೂ, ಲ್ಯಾಬ್ ಕೊರತೆಯಿಂದ ಹೆಚ್ಚಿನವರ ಪರೀಕ್ಷೆ ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ಸರ್ಕಾರ 7 ದಿನ ಕ್ವಾರಂಟೈನ್ ಪೂರೈಸಿದವರನ್ನು ರೋಗ ಲಕ್ಷಣಗಳಿಲ್ಲದಿದ್ದರೆ ಹೋಂ ಕ್ವಾರಂಟೈನ್ ಮಾಡಬಹುದು ಎಂದು ನಿಯಮ ತಂದಿತ್ತು. ಅದರಂತೆ ಜಿಲ್ಲೆಯಲ್ಲಿ 7 ಸಾವಿರಕ್ಕೂ ಅಧಿಕ ಮಂದಿಯನ್ನು ಒಂದೆರಡು ದಿನಗಳಲ್ಲಿ ಮನೆಗೆ ಕಳುಹಿಸಲಾಗಿತ್ತು. ಅವರಲ್ಲಿ ಹೆಚ್ಚಿನವರ ಕರೊನಾ ಟೆಸ್ಟ್ ವರದಿ ಬಂದಿರಲಿಲ್ಲ. ಈಗ ದಂಡಿಯಾಗಿ ವರದಿಗಳು ಪಾಸಿಟಿವ್ ಎಂದು ಬರುತ್ತಿದ್ದು, ಮನೆಯವರಿಗೂ ಹರಡುವ ಭೀತಿ ಇದೆ. ಪರಿಸ್ಥಿತಿ ಜಿಲ್ಲಾಡಳಿತದ ಕೈ ತಪ್ಪುವ ಆತಂಕವೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts