More

    ಉಡುಪಿಯಲ್ಲಿ 109 ಮಂದಿಗೆ ಸೋಂಕು, ಅನಾರೋಗ್ಯ ಪೀಡಿತ ಮೂವರ ಸಾವು

    ಉಡುಪಿ: ಜಿಲ್ಲೆಯಲ್ಲಿ ಗುರುವಾರ ಕರೊನಾ ಪ್ರಕರಣ ಶತಕ ದಾಟಿದೆ. ಸೋಂಕು ದೃಢಪಟ್ಟಿದ್ದ ಜಿಲ್ಲೆಯ ಇಬ್ಬರು ಹಾಗೂ ಅಂಕೋಲ ಮೂಲದ ಒಬ್ಬರು ಗುರುವಾರ ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

    ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಡಯಾಬಿಟಿಸ್ ಸಮಸ್ಯೆ ಹೊಂದಿದ್ದ ಉಡುಪಿ ತಾಲೂಕಿನ 49 ವರ್ಷದ ವ್ಯಕ್ತಿ ಗುರುವಾರ ಬೆಳಗ್ಗೆ ಮೃತಪಟ್ಟಿದ್ದು, ಸೋಂಕು ದೃಢವಾಗಿದೆ. ತೀವ್ರ ಅಸ್ತಮಾದಿಂದ ಬಳಲುತ್ತಿದ್ದ ಬೈಂದೂರು ತಾಲೂಕು ಮರವಂತೆ ನಿವಾಸಿ 58 ವರ್ಷದ ಸೋಂಕಿತ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾರೆ. ಬುಧವಾರ ಸಾಯಂಕಾಲ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

    ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.

    109 ಮಂದಿಗೆ ಪಾಸಿಟಿವ್: ಉಡುಪಿ 36, ಕುಂದಾಪುರ 62, ಕಾರ್ಕಳದ 11 ಸಹಿತ ಜಿಲ್ಲೆಯಲ್ಲಿ ಗುರುವಾರ 109 ಮಂದಿಗೆ ಕರೊನಾ ದೃಢಪಟ್ಟಿದೆ. ಇವರಲ್ಲಿ ಇಲ್‌ನೆಸ್‌ಗೆ ಸಂಬಂಧಿಸಿ 17, ಉಸಿರಾಟ ಸಮಸ್ಯೆ ಇರುವ 2 ಮಂದಿ ಇದ್ದಾರೆ. ಪ್ರಾಥಮಿಕ ಸಂಪರ್ಕದಿಂದ 49 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1895ಕ್ಕೆ ಏರಿಕೆಯಾಗಿದೆ.

    ಗುರುವಾರ ವಿವಿಧ ಕೋವಿಡ್ ಆಸ್ಪತ್ರೆಗಳಿಂದ 80 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 1462ಕ್ಕೆ ತಲುಪಿದೆ. 428 ಸಕ್ರಿಯ ಪ್ರಕರಣಗಳಿವೆ.

    ಜಿಲ್ಲಾಸ್ಪತ್ರೆ ಸೀಲ್‌ಡೌನ್: ಅಜ್ಜರಕಾಡು ಸರ್ಕಾರಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ಒಬ್ಬರು ನರ್ಸ್, ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಮೂರು ದಿನ ಸೀಲ್ಡೌನ್ ಮಾಡಲಾಗಿದೆ. ತುರ್ತು ಚಿಕಿತ್ಸೆ, ಕೋವಿಡ್ ಐಸೋಲೇಶನ್, ಫೀವರ್ ಕ್ಲಿನಿಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ತುರ್ತು ಚಿಕಿತ್ಸೆ ಬಿಟ್ಟು ಸಾಮಾನ್ಯ ರೋಗಿಗಳ ಪ್ರವೇಶಕ್ಕೆ ಅವಕಾಶವಿಲ್ಲ.

    ಬೈಂದೂರು ಠಾಣೆ ಮತ್ತೆ ಸೀಲ್‌ಡೌನ್
    ಬೈಂದೂರು: ಬೈಂದೂರು ಆರಕ್ಷಕ ಠಾಣೆಯ ಮೂವರು ಸಿಬ್ಬಂದಿಗೆ (ಎಎಸ್‌ಐ, ಮಹಿಳಾ ಸಿಬ್ಬಂದಿ, ಹೋಂಗಾರ್ಡ್) ಕರೊನಾ ಪಾಸಿಟಿವ್ ಬಂದಿದ್ದು, ಅವರನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಠಾಣೆಯನ್ನು ಮತ್ತೆ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ಪತ್ತೆ ಹಚ್ಚಿ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಜೂನ್ 21, 22ರಂದು ಠಾಣೆಯ ಇಬ್ಬರಿಗೆ ಸೋಂಕು ಖಚಿತವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts