More

    ಉಡುಪಿ ಜಿಲ್ಲೆಯಲ್ಲಿ 40 ಪಾಸಿಟಿವ್

    ಉಡುಪಿ: ಜಿಲ್ಲೆಯಲ್ಲಿ 18 ಪುರುಷರು, 15 ಮಹಿಳೆಯರು, 6 ಮಕ್ಕಳು ಸೇರಿ ಒಟ್ಟು 40 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,179ಕ್ಕೆ ಏರಿಕೆಯಾಗಿದೆ.

    ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ, ಹೋಟೆಲ್ ಅಡುಗೆ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 40ರಲ್ಲಿ 15 ಮಂದಿ ಮಹಾರಾಷ್ಟ್ರದಿಂದ ಬಂದಿದ್ದು, ಇಬ್ಬರು ಬೆಂಗಳೂರಿನಿಂದ ಆಗಮಿಸಿದ್ದಾರೆ. ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ನರ್ಸ್ ಸಹಿತ ಆರು ಮಂದಿ ಹಾಗೂ ಬಾಗಲಕೋಟೆಯಿಂದ ಬಂದ ಒಬ್ಬರಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    ಇನ್ನೂ 16 ಪ್ರಕರಣಗಳು ಈಗಾಗಲೇ ಪಾಸಿಟಿವ್ ಬಂದಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ಬಂದಿದೆ. ಸೋಂಕು ಕಾಣಿಸಿಕೊಂಡಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಪರೀಕ್ಷಾ ಕೇಂದ್ರವನ್ನು ಮುಂದಿನ ಪರೀಕ್ಷೆಗೆ ಬಳಸದಂತೆ ಸೂಚಿಸಲಾಗಿದೆ ಎಂದು ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ.

    ಬನ್ನಂಜೆಯ ಹೋಟೆಲ್ ಸೀಲ್‌ಡೌನ್: ನಗರದ ಬನ್ನಂಜೆಯ ಮಾಂಸಾಹಾರಿ ಹೋಟೆಲ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಭಾನುವಾರ ಮಧ್ಯಾಹ್ನ ಹೋಟೆಲನ್ನು ಸೀಲ್‌ಡೌನ್ ಮಾಡಲಾಗಿದೆ. ಬಾಣಸಿಗನ ಸಹಾಯಕನಾಗಿದ್ದ ಈತ ತನ್ನ ಊರು ಭದ್ರಾವತಿಗೆ ಹೋಗಿ ಬಂದಿದ್ದರು. ಹಿಂದಿರುಗಿದ ಬಳಿಕ ಜ್ವರ ಕಾಣಿಸಿಕೊಂಡಿದ್ದು, ಕೋವಿಡ್ ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿದೆ.

    ಒಬ್ಬರ ಸ್ಥಿತಿ ಗಂಭೀರ: ಕಾಪು ತಾಲೂಕಿನ ಪಡುಬಿದ್ರಿ ಹಿರಿಯ ನಾಗರಿಕರೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ವ್ಯಕ್ತಿ ಕೇರಳದ ಕೊಚ್ಚಿಯಿಂದ ಹಿಂದಿರುಗಿದ್ದರು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ದೃಢಪಟ್ಟಿದೆ. ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕೋಳಿ ಅಂಗಡಿ ಮಾಲೀಕನಿಗೆ ಸೋಂಕು
    ಕೋಟ: ಶಿರಿಯಾರದ ಪಡುಮಂಡುವಿನ ಕೋಳಿ ಅಂಗಡಿಯ ಮಾಲೀಕನಿಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದೇ ಪ್ರದೇಶದಲ್ಲಿರುವ ಮನೆಯನ್ನು ಭಾನುವಾರ ಸೀಲ್ಡೌನ್ ಮಾಡಲಾಗಿದೆ. 52 ವರ್ಷದ ಈ ವ್ಯಕ್ತಿಗೆ ಕೆಲ ದಿನಗಳಿಂದ ಶೀತ, ಕೆಮ್ಮು ಕಾಣಿಸಿಕೊಂಡಿತ್ತು. ಗಂಟಲು ದ್ರವ ಪರೀಕ್ಷೆಯಲ್ಲಿ ಕರೊನಾ ಸೋಂಕು ಪತ್ತೆಯಾಗಿ, ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಾಲಕಿ, ಗರ್ಭಿಣಿಯ ಪತಿಗೂ ಪಾಸಿಟಿವ್
    ಪಡುಬಿದ್ರಿ: ನಡ್ಸಾಲ್ ಗ್ರಾಮದ ನಾರ್ತ್ ಸುಲ್ತಾನ್ ರಸ್ತೆಯ ಬಾಲಕಿ ಹಾಗೂ ಬೇಂಗ್ರೆ ಬಳಿಯ ಸೋಂಕಿತ ಗರ್ಭಿಣಿಯ ಪತಿಗೆ ಭಾನುವಾರ ಸೋಂಕು ದೃಢವಾಗಿದೆ. ಹೆಜಮಾಡಿಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ. ಪ್ರಯಾಣದ ವಿವರ ಮುಚ್ಚಿಟ್ಟ ನಡ್ಸಾಲಿನ ಸಹೋದರರಿಬ್ಬರು ಹಾಗೂ ಕೊಚ್ಚಿಗೆ ಹೋಗಿ ಬಂದಿದ್ದ ಹೆಜಮಾಡಿ ಕೋಡಿ ವ್ಯಕ್ತಿ ಸಂಪರ್ಕದಿಂದ 15 ಮಂದಿಗೆ ಶನಿವಾರ ಸೋಂಕು ದೃಢವಾಗಿದೆ. ಕೋಡಿ ವ್ಯಕ್ತಿ, ಮನೆ ಕೆಲಸದಾಕೆ ಹಾಗೂ ಪುತ್ರನಿಗೆ ಭಾನುವಾರ ಜ್ವರ ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts