More

    ಉಡುಪಿ ಪರ್ಯಾಯ ದರ್ಬಾರ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ಉಡುಪಿ: ಮಧ್ವಾಚಾರ್ಯರು ಭಕ್ತಿ ಮಾತ್ರ ಪಸರಿಸದೆ ಮೌಲ್ಯಾಧರಿತ ಪರಂಪರೆಯನ್ನು ಜಗತ್ತಿಗೆ ನೀಡಿದ್ದಾರೆ. ಪರ್ಯಾಯ ವ್ಯವಸ್ಥೆ ರಾಜ್ಯಾಡಳಿತಕ್ಕೆ ಮಾದರಿ. ದೇಶದ ಸಂತರು ಆಯಾ ಕಾಲಕ್ಕೆ ಅನುಗುಣವಾಗಿ ಉತ್ತಮ ಸಮಾಜ ನಿರ್ಮಾಣ ಮಾಡಲು ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಇದರಿಂದ ನಮ್ಮ ಜೀವನ ಸುಖಮಯವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

    ಶನಿವಾರ ರಾಜಾಂಗಣದ ನರಸಿಂಹ ತೀರ್ಥ ವೇದಿಕೆಯಲ್ಲಿ ಅದಮಾರು ಮಠದ ಪರ್ಯಾಯ ದರ್ಬಾರ್‌ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಾಲ್ಯದಿಂದಲೂ ನನಗೆ ಕೃಷ್ಣ ಮಠದ ಸಂಪರ್ಕವಿದೆ. ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಿರುವುದು ಜೀವನದ ಸ್ಮರಣೀಯ ಕ್ಷಣ. ನನ್ನಲ್ಲಿರುವ ಭಕ್ತಪ್ರಜ್ಞೆ ಜಾಗೃತವಾಗಿದೆ. ಶತಮಾನಗಳಿಂದ ಉಡುಪಿ ಅಷ್ಟ ಮಠಾಧೀಶರು ಜನರಿಗೆ ಮಾರ್ಗದರ್ಶನ ಮಾಡಿ ಸತ್ಪಥದಲ್ಲಿ ಸಾಗಲು ಪ್ರೇರಣೆ ನೀಡುತ್ತಿದ್ದಾರೆ. ಈ ಪರ್ಯಾಯದಲ್ಲಿ ಪ್ಲಾಸ್ಟಿಕ್ ನಿಷೇಧ ಇದಕ್ಕೊಂದು ಉದಾಹರಣೆಯಾಗಿದೆ ಎಂದರು.

    ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಆನಂದ ತೀರ್ಥರು ನಮ್ಮೊಳಗಿದ್ದು ಪರ್ಯಾಯ ನಡೆಸುತ್ತಾರೆ. ನಾವು ನಿಮಿತ್ತ ಮಾತ್ರ. ಕೃಷ್ಣನನ್ನು ನೋಡಲು ಆಚಾರ್ಯರ ಮಾರ್ಗದರ್ಶನ ಅತೀ ಅಗತ್ಯ. ಯಾವ ಮುಖದಿಂದ ನೋಡಿದರೂ ಕೃಷ್ಣ ವ್ಯಕ್ತಿತ್ವ ಪೂರ್ಣವಾಗಿದೆ. ಆತನ ಆರಾಧನೆಯಿಂದ ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯ ಎಂದರು. ಸಾಧಕ ಗುರಿ ಮುಟ್ಟಲು ಕೃಷ್ಣ ಸ್ಮರಣೆ ಅಗತ್ಯ. ಜೀವನದ ಎಲ್ಲ ಹಂತಗಳಲ್ಲಿ ಇತಿಹಾಸ, ಪುರಾಣ ಪಾತ್ರಗಳು ಹತ್ತಿರವಾಗಿರುತ್ತವೆ. ಕಾಳೀಯ ಕೃಷ್ಣನಲ್ಲಿ ಗರುಡನ ಭಯವನ್ನು ತೋಡಿಕೊಂಡಾಗ ತಲೆಯಲ್ಲಿ ನನ್ನ ಚಿಹ್ನೆ ಮೂಡಿರುವುದರಿಂದ ನಿನಗೆ ಯಾರ ಭಯವೂ ಇಲ್ಲ ಎಂದು ಅಭಯ ನೀಡಿದಾನೆ. ನಮ್ಮ ತಲೆಯಲ್ಲಿ ದೇವರ ಪ್ರಜ್ಞೆ ಮೂಡಿದಾಗ ನಿರ್ಭಯರಾಗಿ ಬದುಕಬಹುದು ಎಂಬುದು ಇದರ ಸಾರಾಂಶವೆಂದು ತಿಳಿಸಿದರು.

    ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.
    ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಮಾಜಿ ರಾಜ್ಯಪಾಲ ಪದ್ಮನಾಭ ಆಚಾರ್ಯ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಜಿ. ಜಗದೀಶ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ವಿಶಾಲ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಪ್ರೊ. ಎಂ.ಬಿ. ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.

    ಯಕ್ಷಗಾನ ಕೇಂದ್ರ ಉಡುಪಿ ಮತ್ತು ಕಟೀಲು ಮಕ್ಕಳ ಮೇಳದಿಂದ ಯಕ್ಷಗಾನ ಒಡ್ಡೋಲಗ ನಡೆಯಿತು. ಶ್ರೀರಂಗ, ತಿರುಪತಿ, ಮಂತ್ರಾಲಯ ಮೊದಲಾದ ಕ್ಷೇತ್ರಗಳಿಂದ ತಂದ ಪ್ರಸಾದವನ್ನು ಸಮರ್ಪಿಸಲಾಯಿತು. ವಿಶ್ವಪ್ರಿಯ ತೀರ್ಥರ ಉಪನ್ಯಾಸ ಸಂಗ್ರಹ ಜ್ಞಾನಯಜ್ಞ ಪುಸ್ತಕ ಬಿಡುಗಡೆ ಮಾಡಲಾಯಿತು.

    21 ಗಣ್ಯರಿಗೆ ದರ್ಬಾರ್ ಸನ್ಮಾನ: ಪರ್ಯಾಯ ದರ್ಬಾರ್‌ನಲ್ಲಿ 21 ಗಣ್ಯರನ್ನು ಸನ್ಮಾನಿಸಲಾಯಿತು. ಬಲಿಪ ನಾರಾಯಣ ಭಾಗವತರಿಗೆ 50 ಸಾವಿರ ರೂ. ನಗದು ಪುರಸ್ಕಾರ ಒಳಗೊಂಡಿರುವ ಶ್ರೀ ನರಸಿಂಹ ತೀರ್ಥ ಪ್ರಶಸ್ತಿ ನೀಡಿ ಅದಮಾರು ಶ್ರೀಗಳು ಗೌರವಿಸಿದರು. ವಿದ್ವಾಂಸ ಲಕ್ಷ್ಮೀನಾರಾಯಣ ಶರ್ಮ ಪಡುಬಿದ್ರಿ, ಶ್ರೀನಿವಾಸ ಅಡಿಗ ಸಾಲಿಗ್ರಾಮ, ಡಾ. ಸತ್ಯನಾರಾಯಣ ಆಚಾರ್ಯ, ಡಾ. ಕೆ. ಶ್ರೀಹರಿ ಬೆಂಗಳೂರು, ಡಾ. ರಂಜನ್ ಆರ್. ಪೈ, ಪ್ರೊ. ಉದ್ಯಾವರ ಮಾಧವ ಆಚಾರ್ಯ, ಮೈಸೂರು ರಾಮಚಂದ್ರ ಆಚಾರ್ಯ, ಗೋಪಾಲರಾವ್ ಹಿರಿಯಡ್ಕ, ಡಾ. ಜಿ.ಎಸ್. ಚಂದ್ರಶೇಖರ್ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಲಾಯಿತು. 

    ಪೌರ ಕಾರ್ಮಿಕರಿಗೂ ಗೌರವ: ಕುಂಜಾರುಗಿರಿಯಲ್ಲಿ ನಗಾರಿ ಸೇವೆ ಸಲ್ಲಿಸುವ ದಾಸ ಶೇರಿಗಾರ್, ನಗರಸಭೆಯಲ್ಲಿ 25 ವರ್ಷದಿಂದ ಪೌರಕಾರ್ಮಿಕರಾಗಿರುವ ಸುಬ್ಬ ಸೇರಿದಂತೆ ಎಸ್.ಕೃಷ್ಣ ಮೂರ್ತಿ ಭಟ್ ಸೂರಾಲು, ರಾಮಪ್ರಸಾದ್ ಭಟ್ ಚೆನ್ನೈ, ಗುಂಡ್ಮಿ ವೆಂಕಟರಮಣ ಸೋಮಯಾಜಿ, ವಿಜಯಕುಮಾರ್ ಬೆಂಗಳೂರು, ರಾಘವೇಂದ್ರ ರಾವ್ ಹೈದರಾಬಾದ್, ರಮಾನಂದ ಆಚಾರ್ಯ ಕಾರ್ಕಳ, ಡಾ. ಯು.ಪಿ. ಉಪಾಧ್ಯಾಯ, ಸರಸ್ವತಿ ವೆಂಕಟರಮಣ ಭಟ್, ದಾಸ ಶೇರಿಗಾರ್, ಕೇಶವರಾಯ ಪ್ರಭು, ರಾಮಚಂದ್ರ ಭಟ್ ಶಾನಾಡಿ ಅವರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts