More

    ಕರೊನಾದಿಂದ ಸಾವಿಗಿಂತ ಹೆಚ್ಚು ಆತ್ಮಹತ್ಯೆ, ನಾಲ್ಕು ತಿಂಗಳಲ್ಲಿ ಪ್ರಾಣ ಕಳೆದುಕೊಂಡವರು 93 ಮಂದಿ

    – ಅವಿನ್ ಶೆಟ್ಟಿ ಉಡುಪಿ
    ಶೈಕ್ಷಣಿಕವಾಗಿ ಮುಂದುವರಿದ, ಪ್ರಜ್ಞಾವಂತರ ಜಿಲ್ಲೆಯಾಗಿ ಗುರುತಿಸಲ್ಪಡುವ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಂಕಿಅಂಶಗಳ ಪ್ರಕಾರ ಕಳೆದ ನಾಲ್ಕು ತಿಂಗಳಲ್ಲಿ 90ಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಒಂದೆಡೆ ಕರೊನಾ ಸಾಂಕ್ರಾಮಿಕ ರೋಗದ ನಡುವೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಆತಂಕ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ಮಾರ್ಚ್‌ನಿಂದ ಇಲ್ಲಿವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 12. ಆದರೆ ಮಾರ್ಚ್ 1ರಿಂದ ಜುಲೈ 10ರ ಮಧ್ಯೆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರು 93 ಮಂದಿ!

    ಮಾರ್ಚ್ ತಿಂಗಳಲ್ಲಿ 10, ಏಪ್ರಿಲ್‌ನಲ್ಲಿ 17, ಮೇ ತಿಂಗಳಲ್ಲಿ 25, ಜೂನ್‌ನಲ್ಲಿ 28 ಮತ್ತು ಈ ತಿಂಗಳ 10 ದಿನಗಳಲ್ಲಿ 13 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಾರಣಗಳೇನು?: ಆರ್ಥಿಕ ಮುಗ್ಗಟ್ಟು, ಉದ್ಯೋಗ ನಷ್ಟ, ಮಾನಸಿಕ ಖಿನ್ನತೆ, ಕೌಟುಂಬಿಕ ಕಲಹ, ದೀರ್ಘಕಾಲದ ಅನಾರೋಗ್ಯ, ವಿಪರೀತ ಮದ್ಯಪಾನ, ಒತ್ತಡ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ. ಕೆಲವೊಂದು ಪ್ರಕರಣಗಳ ಹಿಂದೆ ಕರೊನಾ ಸೋಂಕಿನ ಭಯ ಇರುವುದು ವಿಶೇಷ. ಲಾಕ್‌ಡೌನ್‌ಗಿಂತ ಹಿಂದೆ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿದ್ದರೆ, ಲಾಕ್‌ಡೌನ್ ಸಡಿಲಿಕೆ ನಂತರ ಪ್ರಕರಣ ಹೆಚ್ಚಾಗಿದೆ ಎನ್ನುತ್ತಾರೆ ಪೊಲೀಸರು.

    ದ.ಕ. 75 ಮಂದಿ:
    ಮಂಗಳೂರು: ನಗರ ಕಮಿಷನರೆಟ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ 13, ಏಪ್ರಿಲ್‌ನಲ್ಲಿ 16, ಮೇ ತಿಂಗಳಲ್ಲಿ 17, ಜೂನ್‌ನಲ್ಲಿ 14, ಜುಲೈಯಲ್ಲಿ 15 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ ಲಾಕ್‌ಡೌನ್ ಸಂದರ್ಭ ಮದ್ಯ ಸಿಗದೆ ಇದ್ದದ್ದು, ಕರೊನಾ ಭಯ, ಆರ್ಥಿಕ ಮುಗ್ಗಟ್ಟು, ಮಾನಸಿಕ ಖಿನ್ನತೆ ಮೊದಲಾದ ಕಾರಣಗಳು ಸೇರಿವೆ. ಲಾಕ್‌ಡೌನ್ ಬಳಿಕ ಉದ್ಯೋಗ ಕಡಿತ, ವ್ಯಾಪಾರ ನಷ್ಟ, ಸಾಲದ ಹೊರೆ ಮೊದಲಾದ ಕಾರಣಗಳಿಂದ ಕರೊನಾ ಭಯದೊಂದಿಗೆ ಜನರು ಮಾನಸಿಕ ಖಿನ್ನತೆಗೊಳಗಾಗುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಎಲ್ಲೆಲ್ಲಿ ಎಷ್ಟು ಪ್ರಕರಣಗಳು?
    ಉಡುಪಿ ಜಿಲ್ಲೆಯ ಕುಂದಾಪುರ, ಕೋಟ, ಮಲ್ಪೆ ಭಾಗದಲ್ಲಿ ಗರಿಷ್ಠ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಠಾಣೆಯ ವ್ಯಾಪ್ತಿಗಳಲ್ಲಿ ತಲಾ 10 ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಉಡುಪಿ, ಬೈಂದೂರು ಮತ್ತು ಕಾರ್ಕಳಗಳಲ್ಲಿ ತಲಾ 6, ಅಮಾಸೆಬೈಲು ಠಾಣೆ 7, ಶಂಕರನಾರಾಯಣ ಮತ್ತು ಹಿರಿಯಡ್ಕದಲ್ಲಿ ತಲಾ 5, ಗಂಗೊಳ್ಳಿ, ಮಣಿಪಾಲ, ಕಾಪು, ಪಡುಬಿದ್ರಿ ಪೊಲೀಸ್ ಠಾಣೆಗಳಲ್ಲಿ ತಲಾ 4, ಕೊಲ್ಲೂರು ಮತ್ತು ಶಿರ್ವದಲ್ಲಿ ತಲಾ 3, ಅಜೆಕಾರು, ಹೆಬ್ರಿ ಮತ್ತು ಬ್ರಹ್ಮಾವರ ಠಾಣೆಯಲ್ಲಿ ತಲಾ 2 ಪ್ರಕರಣಗಳು ವರದಿಯಾಗಿದೆ.

    ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಕೆಲವು ಕುರುಹು ನೀಡುತ್ತಾನೆ. ಆತ್ಮಹತ್ಯೆ, ಸಾವಿನ ಬಗ್ಗೆ ಮಾತು, ಸ್ನೇಹಿತ, ಕುಟುಂಬದವರನ್ನು ಕೊನೆಯದಾಗಿ ಭೇಟಿ ಮಾಡುವುದು, ಒಂಟಿತನ, ಮಂಕಾಗಿರುವುದು, ಅತಿಯಾಗಿ ಮಾದಕ ವಸ್ತುಗಳ ಬಳಸುವುದು. ಇಂಥ ಲಕ್ಷಣ ಇರುವರನ್ನು ಕೂಡಲೇ ಆಪ್ತ ಸಮಾಲೋಚನೆ ನಡೆಸುವ ಮೂಲಕ ಚಿಕಿತ್ಸೆಯೊಂದಿಗೆ ಖಿನ್ನತೆ ಹಾಗೂ ಮಾದಕ ವ್ಯಸನದಿಂದ ಹೊರತರಬಹುದು.
    -ಡಾ.ಮಾನಸ್, ಮನೋವೈದ್ಯ, ಸರ್ಕಾರಿ ಜಿಲ್ಲಾಸ್ಪತ್ರೆ, ಅಜ್ಜರಕಾಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts