More

    ಉಧೋ… ಉಧೋ…ಶ್ರೀರೇಣುಕಾಂಬೆ… ಚಂದ್ರಗುತ್ತಿಯಲ್ಲಿ ಬನದ ಹುಣ್ಣಿಮೆ ಸಂಭ್ರಮ

    ಸೊರಬ: ಬನದ ಹುಣ್ಣಿಮೆ ನಿಮಿತ್ತ ಲಕ್ಷಾಂತರ ಭಕ್ತರು ಗುರುವಾರ ತಾಲೂಕಿನ ಇತಿಹಾಸ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

    ದೇವಿ ಮೂರ್ತಿಯನ್ನು ತಲೆ ಮೇಲೆ ಹೊತ್ತು ರಸ್ತೆಯುದ್ದಕ್ಕೂ ಶ್ರೀ ರೇಣುಕಾಂಬೆ ಉಧೋ… ಉಧೋ… ಶ್ರೀ ಎಲ್ಲಮ್ಮ ನಿನ್ನಾಲ್ಕು ಉಧೋ… ಉಧೋ… ಎಂದು ಜಯಘೋಷ ಕೂಗುತ್ತಾ ಸಾಗಿದರು. ಪರಿವಾರ ದೇವರಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು,
    ಬನದ ಹುಣ್ಣಿಮೆ ಪೂರ್ವ ಬರುವ ಹೊಸ್ತಿಲು ಹುಣ್ಣಿಮೆಯಲ್ಲಿ ಶ್ರೀದೇವಿಯು ವೈಧವ್ಯದಲ್ಲಿ ಇರುವುದರಿಂದ ಹಸಿರು ಬಳೆ, ಕುಪ್ಪಸ ಸೇರಿದಂತೆ ಮುತ್ತೈದೆ ಸಾಮಗ್ರಿಗಳನ್ನು ಪೂಜೆಗೆ ಸಲ್ಲಿಸುವಂತಿರಲಿಲ್ಲ. ಭಕ್ತರು ಒಂದು ತಿಂಗಳ ಕಾಲ ದೇವಿಗೆ ಯಾವುದೇ ಪಡ್ಲಿಗೆ ತುಂಬಿಸಿರಲಿಲ್ಲ. ಆದರೆ ಬನದ ಹುಣ್ಣಿಮೆಯು ಮುತ್ತೈದೆಯರ ಹುಣ್ಣಿಮೆ ಎಂದು ಪ್ರಸಿದ್ಧವಾದ ಕಾರಣ ಹೊಸ ಬಳೆ-ಹಸಿರು ಕುಪ್ಪಸ ಅರ್ಪಣೆ, ತೊಟ್ಟಲುಬಾವಿ ಪೂಜೆ, ಪಡ್ಲಿಗೆ ತುಂಬುವುದು, ದೇವಿಗೆ ಉಡಿ ತುಂಬುವುದು, ಮೆಟ್ಟಿಲು ಪೂಜೆ, ದಿಂಡು ಕಟ್ಟುವುದು, ದೀಡು ನಮಸ್ಕಾರ, ಬೇವು ಉಡುವುದು, ಚೌಲ, ಕಿವಿ ಚುಚ್ಚುವುದು, ತುಲಾಭಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ನಡೆದವು.
    ರಾಣೆಬೆನ್ನೂರು, ಹರಿಹರ, ಹಿರೇಕೆರೂರು, ಹಾನಗಲ್, ವಿಜಯಪುರ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಕೊಪ್ಪಳ, ರಾಯಚೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರ ಸಮೂಹವೇ ಹರಿದು ಬಂದಿತ್ತು.
    ದೇವಿಯ ಸನ್ನಿಧಿಯಲ್ಲಿ ಹಣ್ಣು-ಕಾಯಿ ಪೂಜೆ ಸಲ್ಲಿಸಿದ ನಂತರ ರಥ ಬೀದಿಯ ಪಕ್ಕ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಡುಬು, ಕಾಯಿ ಕಡುಬು, ಕರಿಗಡುಬು, ಹೊಳಿಗೆ ಸೇರಿದಂತೆ ವಿವಿಧ ಖಾದ್ಯಗಳನ್ನು ಸ್ಥಳದಲ್ಲೇ ಭಕ್ತರು ಸಿದ್ಧಪಡಿಸಿ, ಪಡ್ಲಿಗೆಯಲ್ಲಿ ತುಂಬಿಟ್ಟು ದೇವಸ್ಥಾನದ ಮುಂಭಾಗದಲ್ಲಿನ ತೊಟ್ಟಿಲು ಬಾವಿಯ ಬಳಿ ನೈವೇದ್ಯ ಮಾಡಿದರು. ಕುಟುಂಬಸ್ಥರು ದೇವಸ್ಥಾನ ಸಮೀಪದ ಬಯಲುಗಳಲ್ಲಿ ಸಹ ಭೋಜನ ಮಾಡುವ ದೃಶ್ಯ ಕಂಡುಬಂತು. ದೇವಸ್ಥಾನದ ಆವರಣ, ರಥ ಬೀದಿಯಲ್ಲಿ ವ್ಯಾಪಾರ-ವಹಿವಾಟು ಜೋರಾಗಿಯೇ ನಡೆಯಿತು. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts