More

    ಅಧಿಕಾರ ಕಳೆದುಕೊಳ್ಳುವ ಭೀತಿ: ಪ್ರಧಾನಿ ಮೋದಿಗೆ ಕರೆ ಮಾಡಿ ಸಹಾಯ ಕೋರಿದ ಮಹಾರಾಷ್ಟ್ರ ಸಿಎಂ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಸಂಜೆ ಕರೆ ಮಾಡಿ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

    ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆಯನ್ನು ತಗ್ಗಿಸಲು ಸಿಎಂ ಉದ್ಧವ್ ಠಾಕ್ರೆ, ಪ್ರಧಾನಿ ಮೋದಿ ಬಳಿ ಸಹಾಯ ಕೋರಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

    ಪ್ರಸ್ತುತ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯವು ರಾಜಕೀಯ ಅಸ್ಥಿರತೆಯನ್ನು ನಿಭಾಯಿಸಲಾರದು ಮತ್ತು ಇದು ತಪ್ಪು ಸಂದೇಶವನ್ನು ಸಾರುತ್ತದೆ. ಇದು ಖಂಡಿತವಾಗಿಯೂ ತಪ್ಪಿಸಬೇಕಿದೆ ಎಂದು ಪ್ರಧಾನಿ ಮೋದಿ ಬಳಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಈ ವಿಚಾರದ ಬಗ್ಗೆ ಗಮನ ವಹಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಸಿಎಂ ಉದ್ಧವ್ ಠಾಕ್ರೆ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಮಹಾರಾಷ್ಟ್ರ ಸಚಿವ ಸಂಪುಟ ರಾಜ್ಯಪಾಲ ಬಿ.ಎಸ್. ಕೊಶ್ಯಾರಿ ಅವರಿಗೆ ಶಿಫಾರಸು ಮಾಡಿದ ದಿನದ ಬೆನ್ನಲ್ಲೇ ಠಾಕ್ರೆ, ಪ್ರಧಾನಿಗೆ ಕರೆ ಮಾಡಿದ್ದಾರೆ.

    ಇತ್ತ ರಾಜ್ಯ ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ಇನ್ನೂ ನಿರ್ಧರಿಸದಿರುವುದು ಠಾಕ್ರೆ ಅವರಿಗೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಬುಧವಾರ ಬೆಳಗ್ಗೆ ನಿಗದಿಯಾಗಿದ್ದ ಮಹಾರಾಷ್ಟ್ರ ಸಚಿವ ಸಂಪುಟ ಸಭೆಯು ರದ್ದಾಗಿದೆ. ಎಂಎಲ್ಸಿ ಚುನಾವಣೆಯನ್ನು ಶೀಘ್ರವಾಗಿ ನಡೆಸಲು ಚುನಾವಣಾ ಆಯೋಗವನ್ನು ಕೋರಲು ಕ್ಯಾಬಿನೆಟ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿತ್ತು. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ವಿಧಾನ ಪರಿಷತ್ತಿನ ಚುನಾವಣೆ ರದ್ದಾಗಿದೆ.

    ಸಿಎಂ ಉದ್ಧವ್​ ಠಾಕ್ರೆ ಪ್ರಸ್ತುತ ಶಾಸನಸಭೆಯ ಸದಸ್ಯರಲ್ಲ. ಠಾಕ್ರೆ ಅವರು ಆರು ತಿಂಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಮೇ 28ಕ್ಕೂ ಮುಂಚೆಯೇ ವಿಧಾನ ಪರಿಷತ್ತಿಗೆ ಅವರನ್ನು ನಾಮನಿರ್ದೇಶನ ಮಾಡಬೇಕಾಗಿದೆ. ಇಲ್ಲವಾದಲ್ಲಿ ಕಾನೂನಿ ಪ್ರಕಾರ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿಯಬೇಕಾಗುತ್ತದೆ. ಈಗಾಗಲೇ ರಾಜ್ಯ ಸಚಿವ ಸಂಪುಟ ಎರಡು ಬಾರಿ ನಿರ್ಣಯವನ್ನು ಅಂಗೀಕರಿಸಿದ್ದರೂ, ರಾಜ್ಯಪಾಲರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಲಕ್ಷಣವನ್ನು ತೋರಿಸಿಲ್ಲ. ಹೀಗಾಗಿ ಪ್ರಧಾನಿಗೆ ಕರೆ ಮಾಡಿ ಸಹಾಯ ಕೋರಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    ಕರೊನಾ ಕುರಿತು ಸುಳ್ಳು ಸುದ್ದಿ ಹರಡಿದ್ರೆ ಈ ಯುವಕನಿಗೆ ಸಿಕ್ಕ ಶಿಕ್ಷೆ ನಿಮಗೂ ಸಿಗಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts