More

    ಟೈಟಾನ್ಸ್ ಎದುರು ಬೆಂಗಳೂರು ಬುಲ್ಸ್ ರೋಚಕ ಟೈ; ದಿನದ ಮೂರೂ ಪಂದ್ಯ ಸಮಬಲ!

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಪಂದ್ಯದ ಕೊನೇ ರೈಡಿಂಗ್‌ಗೆ ಬಂದ ಎದುರಾಳಿ ನಾಯಕ ರೋಹಿತ್ ಕುಮಾರ್ ಅವರನ್ನು ಸೆರೆ ಹಿಡಿಯುವ ಮೂಲಕ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯಲ್ಲಿ ಸತತ 4ನೇ ಪಂದ್ಯದಲ್ಲಿ ಅಜೇಯ ಓಟ ಮುಂದುವರಿಸಿದೆ. ಅತ್ಯಂತ ರೋಚಕವಾಗಿ ಸಾಗಿದ ‘ಸದರ್ನ್ ಡರ್ಬಿ’ಯಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ 34-34 ಅಂಕಗಳಿಂದ ವೀರೋಚಿತವಾಗಿ ಟೈ ಸಾಧಿಸಿತು.

    ವೈಟ್‌ಫೀಲ್ಡ್‌ನ ಶೆರಾಟನ್ ಗ್ರಾೃಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ದ್ವಿತೀಯಾರ್ಧದಲ್ಲಿ ಅತ್ಯಂತ ನಿಕಟ ಪೈಪೋಟಿ ಕಂಡುಬಂದಿತು. ಪಂದ್ಯದ ಕೊನೇ ನಿಮಿಷದ ವೇಳೆಗೆ ಬುಲ್ಸ್ ತಂಡ 31-34ರಿಂದ ಹಿನ್ನಡೆಯಲ್ಲಿತ್ತು. ಆಗ ಡು ಆರ್ ಡೈ ರೈಡ್ ಬಂದ ಅಂಕಿತ್ ಬೆನಿವಾಲ್ ಕೆಲ ಸಮಯ ವ್ಯರ್ಥಗೊಳಿಸಿ ಕೊನೆಗೆ ಬುಲ್ಸ್ ಬಲೆಗೆ ಬಿದ್ದರು. ನಾಯಕ ಪವನ್ ಶೆರಾವತ್ (8 ಅಂಕ) ಕ್ಷಿಪ್ರಗತಿಯ ಮರುರೈಡಿಂಗ್‌ನಲ್ಲಿ 1 ಅಂಕ ತಂದರು. ಇದರಿಂದ ಬುಲ್ಸ್ ಹಿನ್ನಡೆ 33-34ಕ್ಕೆ ಇಳಿಯಿತು. ಬುಲ್ಸ್ ತಂಡದ ಮಾಜಿ ನಾಯಕರೂ ಆಗಿರುವ ತೆಲುಗು ಟೈಟಾನ್ಸ್ ನಾಯಕ ರೋಹಿತ್ ಕುಮಾರ್ ಪಂದ್ಯದ ಕೊನೇ ರೈಡ್‌ಗೆ ತೆರಳಿದಾಗ ಪವನ್ ಶೆರಾವತ್ ಅವರ ಕೈ ಹಿಡಿದು ಅಮೋಘವಾಗಿ ಟ್ಯಾಕಲ್ ಮಾಡಿದರು. ಇದರಿಂದ ಬುಲ್ಸ್ ತಂಡ ರೋಚಕ ಟೈ ಸಾಧಿಸಿ ಅಂಕ ಹಂಚಿಕೊಂಡಿತು. ಈ ಟ್ಯಾಕಲ್ ತೀರ್ಪಿನ ವಿರುದ್ಧ ಟೈಟಾನ್ಸ್ ರಿವೀವ್ ಮೊರೆ ಹೋದರೂ ಯಶಸ್ಸು ಸಿಗಲಿಲ್ಲ.

    ಬುಲ್ಸ್ ಮುನ್ನಡೆ
    ಪಂದ್ಯದ ಮೊದಲ 10 ನಿಮಿಷಗಳ ಆಟದಲ್ಲಿ ಟೈಟಾನ್ಸ್ ತಂಡವೇ ಮೇಲುಗೈ ಸಾಧಿಸಿತ್ತು. ಆದರೆ ನಂತರ ತಿರುಗೇಟು ನೀಡುತ್ತ ಸಾಗಿದ ಬುಲ್ಸ್ ತಂಡ ಮೊದಲಾರ್ಧದ ಅಂತ್ಯದ ವೇಳೆಗೆ 14-12ರಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನಾಯಕ ಪವನ್ ಶೆರಾವತ್ ಆರಂಭಿಕ ರೈಡ್‌ಗಳಲ್ಲಿ ವೈಫಲ್ಯ ಕಂಡಿದ್ದು ಬುಲ್ಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ಆದರೆ ಮತ್ತೊಂದೆಡೆ ಚಂದ್ರನ್ ರಂಜಿತ್ (9) ಯಶಸ್ವಿ ರೈಡ್‌ಗಳನ್ನು ಮಾಡುವ ಮೂಲಕ ನಾಯಕ ಹೆಚ್ಚು ಸಮಯ ಕೋರ್ಟ್‌ನಿಂದ ಹೊರಗೆ ಕುಳಿತುಕೊಳ್ಳದಂತೆ ನೋಡಿಕೊಂಡರು. ರೈಡರ್ ಅಂಕಿತ್ ಬೆನಿವಾಲ್ (10) ಪಂದ್ಯದಲ್ಲಿ ಬುಲ್ಸ್ ತಂಡವನ್ನು ಹೆಚ್ಚು ಕಾಡಿದರು.

    ಉದ್ಘಾಟನಾ ಪಂದ್ಯದಲ್ಲಿ ಎಡವಿದ್ದ ಬುಲ್ಸ್ ತಂಡ ಬಳಿಕ ಸತತ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇದೀಗ ತನ್ನ 5ನೇ ಪಂದ್ಯದಲ್ಲಿ ಟೈ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

    ಮುಂಬಾ-ಯೋಧಾ ಟೈ
    ಮಾಜಿ ಚಾಂಪಿಯನ್ ಯು ಮುಂಬಾ ಮತ್ತು ಯುಪಿ ಯೋಧಾ ನಡುವಿನ ದಿನದ ಮೊದಲ ಪಂದ್ಯ 28-28 ಅಂಕಗಳಿಂದ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಮೊದಲಾರ್ಧದಲ್ಲಿ ಮುಂಬಾ ತಂಡ ಉತ್ತಮ ಟ್ಯಾಕಲ್‌ನಿಂದ 16-13ರಿಂದ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಭರ್ಜರಿ ರೈಡಿಂಗ್ ಮೂಲಕ ದಿಟ್ಟ ತಿರುಗೇಟು ನೀಡಿದ ಯೋಧಾ ಅಂಕ ಹಂಚಿಕೊಳ್ಳುವಲ್ಲಿ ಸಲವಾಯಿತು. ಟೂರ್ನಿಯ ದುಬಾರಿ ಆಟಗಾರ ಪ್ರದೀಪ್ ನರ್ವಾಲ್ (4) ಯೋಧಾ ತಂಡಕ್ಕೆ ಹೆಚ್ಚಿನ ಅಂಕ ತಂದುಕೊಡಲು ಶಕ್ತರಾಗಲಿಲ್ಲ. ಸುರೇಂದರ್ ಗಿಲ್ (8) ಯೋಧಾ ಪರ ಮಿಂಚಿದರು. ಮುಂಬಾಗೆ ವಿ ಅಜಿತ್ (9) ರೈಡಿಂಗ್‌ನಲ್ಲಿ ಹೆಚ್ಚಿನ ಅಂಕ ತಂದುಕೊಟ್ಟರು.

    ಡೆಲ್ಲಿ-ತಲೈವಾಸ್ ಸಮಬಲ
    ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ನಡುವಿನ ದಿನದ 3ನೇ ಪಂದ್ಯವೂ 30-30 ಅಂಕಗಳಿಂದ ಟೈಗೊಂಡಿತು. ಡೆಲ್ಲಿ ತಂಡ ಮೊದಲಾರ್ಧದಲ್ಲಿ 16-14ರಿಂದ ಮುನ್ನಡೆ ಸಾಧಿಸಿದ್ದರೂ, ದ್ವಿತೀಯಾರ್ಧದಲ್ಲಿ ತಿರುಗೇಟು ಎದುರಿಸಿತು. ಡೆಲ್ಲಿ ಪರ ಮತ್ತೊಮ್ಮೆ ರೈಡರ್ ನವೀನ್ ಕುಮಾರ್ (15) ಭರ್ಜರಿ ನಿರ್ವಹಣೆ ತೋರಿದರು.

    ರಂಗೇರಿದ ತಮಿಳುನಾಡು ಕ್ರಿಕೆಟ್ ರಾಜಕೀಯ; ರೂಪಾ ಪದತ್ಯಾಗ, ಚುಕ್ಕಾಣಿಯತ್ತ ಸ್ಟಾಲಿನ್ ಪುತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts