More

    ಟೈಲರ್ ಕಲ್ಯಾಣ ಮಂಡಳಿ ಸ್ಥಾಪನೆಗೆ ಆಗ್ರಹ; ದಾವಣಗೆರೆಯಲ್ಲಿ ಪ್ರತಿಭಟನೆ

    ದಾವಣಗೆರೆ: ಟೈಲರ್ ಕಲ್ಯಾಣ ಮಂಡಳಿ ಸ್ಥಾಪಿಸುವ ಮೂಲಕ ಬಡ ಟೈಲರ್‌ಗಳ ಹಿತ ಕಾಯುವಂತೆ ಆಗ್ರಹಿಸಿ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

    ಇಲ್ಲಿನ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಮುಖಂಡರು, ಟೈಲರ್‌ಗಳು ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ರಾಜ್ಯದಲ್ಲಿ ಹೊಲಿಗೆ ಕೆಲಸಗಾರರು ದುಡಿಮೆಯಿಂದ ಬರುವ ಅಲ್ಪ ಆದಾಯದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ಆದರೂ ಈವರೆಗೆ ಸರ್ಕಾರ ಮಾನವೀಯ ನೆಲೆಯಲ್ಲಿ ಹೊಲಿಗೆ ಕೆಲಸಗಾರರಿಗೆ ಕನಿಷ್ಠ ಸೌಲಭ್ಯ ಒದಗಿಸದಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕೋವಿಡ್ ಕಾಲಘಟ್ಟದಲ್ಲಿ ಎರಡು ವರ್ಷಗಳ ಕಾಲ ಅನೇಕ ದರ್ಜಿಗಳು ತೊಂದರೆ ಅನುಭವಿಸಿದ್ದಾರೆ. ಆ ಅವಧಿಯಲ್ಲಿ ಎದುರಾದ ಲಾಕ್‌ಡೌನ್ ಸಂಕಷ್ಟದಿಂದ ಆ ಕುಟುಂಬಗಳು ಇನ್ನೂ ಸುಧಾರಿಸಿಕೊಂಡಿಲ್ಲ. ಆಗ ಬೀದಿಗೆ ಬಿದ್ದ ಅನೇಕ ದರ್ಜಿಗಳ ಕುಟುಂಬಗಳಿಗೆ ಸರಿಯಾದ ನೆಲೆಯೇ ಇಲ್ಲವಾಗಿದೆ ಎಂದು ಹೇಳಿದರು.

    ಟೈಲರ್‌ಗಳಿಗೆ ಯಾವುದೇ ವಿಮೆ, ಭವಿಷ್ಯನಿಧಿ ಇಲ್ಲ. ಸೇವಾ ಭದ್ರತೆ ಇಲ್ಲದೆ ದುಡಿಯುವ ಇಂತಹವರಿಗಾಗಿ ಪಕ್ಕದ ಕೇರಳ ಸರ್ಕಾರ ಅನೇಕ ವರ್ಷಗಳ ಹಿಂದೆಯೇ ಟೈಲರ್ ಕಲ್ಯಾಣ ಮಂಡಳಿ ಸ್ಥಾಪಿಸಿದೆ. ಆದರೆ ನಮ್ಮ ರಾಜ್ಯದಲ್ಲಿ ಅಂತಹ ಯಾವುದೇ ಕೆಲಸವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸರ್ಕಾರದ ಯಾವುದೇ ಸೌಲಭ್ಯ, ಸ್ವಯಂ ಉದ್ಯೋಗಕ್ಕೆ ಸೂಕ್ತ ಸಂಭಾವನೆ ದೊರಕದೇ ಹೊಲಿಗೆ ಕೆಲಸಗಾರರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕೇರಳ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಟೈಲರ್‌ಗಳ ಹಿತ ಕಾಪಾಡಲು ಸರ್ಕಾರ ಟೈಲರ್ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

    ಸಂಘದ ಜಿಲ್ಲಾಧ್ಯಕ್ಷ ನಾರಾಯಣರಾವ್ (ಬಾಬುರಾವ್), ಗೌರವಾಧ್ಯಕ್ಷ ಆನಂದ್ ಗುಜ್ಜಾರ್, ನಗರಾಧ್ಯಕ್ಷ ಚಂದ್ರಶೇಖರ ಕೆ.ಗಣಪಾ, ಮುಖಂಡರಾದ ಶ್ರೀಕಾಂತ್ ಪಟಿಗೆ, ಗಿರೀಶ ನವಲೆ, ಕೆ.ಪಿ.ರಂಗನಾಥ, ಮನೋಹರ್ ಪಟ್ಟಣ್, ರಮೇಶ ಜಿ.ಬಾಂಬೋರೆ, ನಿರ್ಮಲಮ್ಮ, ಶೋಭಾ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts